ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಅವರ ಪತ್ನಿ ಮರಿಬಸಮ್ಮ ನಿಧನ

Update: 2020-12-08 14:18 GMT

ಬೆಳಗಾವಿ, ಡಿ.8: ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಅವರ ಪತ್ನಿ ಮರಿಬಸಮ್ಮ ಎಸ್. ಕಂಠಿ(104) ಅವರು ಮಂಗಳವಾರ ನಿಧನರಾದರು.

ಕಿತ್ತೂರಿನ ಸೈನಿಕ ಶಾಲೆಯಲ್ಲಿ ವಾಸವಿದ್ದ ಮರಿಬಸಮ್ಮ ಅವರು ಬೆಳಗಾವಿ ಕೆಎಲ್‍ಇ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದರು.

ಮರಿಬಸಮ್ಮರ ಪಾರ್ಥಿವ ಶರೀರ ದರ್ಶನಕ್ಕೆ ಕಿತ್ತೂರು ಸೈನಿಕ ಶಾಲೆಯಲ್ಲಿ ಬುಧವಾರ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ದರ್ಶನ ಮುಗಿದ ಬಳಿಕ ಅಂದು ಸಂಜೆ ಬಾಗಲಕೋಟೆ ಜಿಲ್ಲೆ ಇಳಕಲ್‍ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಎಸ್.ಆರ್.ಕಂಠಿ(ಶಿವಲಿಂಗಪ್ಪ ರುದ್ರಪ್ಪ ಕಂಠಿ) ಅವರು ಬಾಗಲಕೋಟೆ(ಹಳೆಯ ವಿಜಯಪುರ) ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಗರದವರು.

ನಿಧನಕ್ಕೆ ಸಿಎಂ ಸಂತಾಪ

ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಅವರ ಪತ್ನಿ ಮರಿಬಸಮ್ಮ ಕಂಠಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಾಗಿ ತಮ್ಮದೇ ಛಾಪು ಮೂಡಿಸಿದ್ದ ಎಸ್.ಆರ್.ಕಂಠಿ ಅವರು ಎಸ್.ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಶೈಕ್ಷಣಿಕ ಸುಧಾರಣೆಗೆ ಗಮನಾರ್ಹ ಕೊಡುಗೆ ನೀಡಿದ್ದರು. ಹೆಣ್ಣು ಮಕ್ಕಳಿಗಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ ಎಸ್.ಆರ್.ಕಂಠಿ ಅವರ ರಾಜಕೀಯ ಜೀವನಕ್ಕೆ ಮರಿಬಸಮ್ಮ ಕಂಠಿ ಅವರು ದೊಡ್ಡ ಕೊಡುಗೆ ನೀಡಿದ್ದರು.

ಶತಾಯುಷಿಯಾಗಿ ಅವರು ತುಂಬು ಜೀವನ ನಡೆಸಿದ್ದರು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಮರಿಬಸಮ್ಮ ಅವರ ಅಗಲಿಕೆಯ ನೋವನ್ನು ಭರಿಸಲು ಕುಟುಂಬದವರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News