ಕಾಂಗ್ರೆಸ್‍ ರೈತರನ್ನು ದಾರಿ ತಪ್ಪಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ಹೇಳಿದ್ದೇನು ?

Update: 2020-12-08 14:24 GMT

ಬೆಂಗಳೂರು, ಡಿ.8: ರೈತರನ್ನು ನಾವಾಗಲಿ, ನೀವಾಗಲಿ ಯಾರಿಂದಲೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ಶಿಕ್ಷಣ ಕಲಿಯದಿದ್ದರೂ ದೇಶಕ್ಕೆ ಅನ್ನ ಹಾಕುವ ರೈತರು, ಬಹಳ ಬುದ್ಧಿವಂತರು. ಅವರನ್ನು ಯಾರಾದರೂ ದಾರಿ ತಪ್ಪಿಸುತ್ತಿದ್ದೇವೆ ಎಂದು ಭಾವಿಸಿದರೆ ನಾವು ಮೂರ್ಖರಾಗುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಕುರಿತು ನಡೆಯುತ್ತಿದ್ದ ಚರ್ಚೆ ವೇಳೆ ಕಾಂಗ್ರೆಸ್‍ನವರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಮಾಡಿದ ಟೀಕೆಗೆ ಅವರು ತಿರುಗೇಟು ನೀಡಿದರು.

ದಿಲ್ಲಿ ಬಳಿ ಪ್ರತಿಭಟನೆ ಮಾಡುತ್ತಿರುವ ಹರಿಯಾಣ, ಪಂಜಾಬ್ ರಾಜ್ಯದ ರೈತರನ್ನು ದಾರಿ ತಪ್ಪಿಸಲು ಸಾಧ್ಯವೇ. ಯಾವುದು ಸರಿ, ಯಾವುದು ತಪ್ಪು ಎಂದು ರಾಜಕೀಯ ನಾಯಕರಿಗೆ, ಅಧಿಕಾರಿಗಳಿಗೆ ಹೇಳುವ ಶಕ್ತಿ ಅವರಿಗಿದೆ. ರೈತ ಸಂಘದ ಅಧ್ಯಕ್ಷರಾಗಿದ್ದ ಪ್ರೊ.ನಂಜುಂಡಸ್ವಾಮಿ ಅವರನ್ನು ದಾರಿ ತಪ್ಪಿಸಲು ಸಾಧ್ಯವಿತ್ತೆ? ಕೇಂದ್ರ, ರಾಜ್ಯದಲ್ಲಿಯೂ ರೈತ ಸಂಘದವರು ಇದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳಿಂದ ರೈತರಿಗೆ ಏನು ಅನುಕೂಲವಾಗಲಿದೆ, ಅವರ ಮನಸ್ಸಿನಲ್ಲಿರುವ ಆತಂಕಗಳು ಏನು ಎಂಬುದರ ಕುರಿತು ಅವರೊಂದಿಗೆ ಚರ್ಚಿಸಿ, ಅವರಿಗೆ ಮನವರಿಕೆ ಮಾಡಿಕೊಡಲಿ. ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರತಿಭಟನಾನಿರತ ರೈತರೊಂದಿಗೆ ನಾಲ್ಕು ಸಭೆಗಳು ಆಗಿವೆ. ಆದರೂ, ರೈತರು ತಮ್ಮ ನಿಲುವಿನಿಂದ ಹಿಂದಕ್ಕೆ ಸರಿದಿಲ್ಲ. ಅವರ ಜೊತೆ ಯಾವುದಾದರೂ ರಾಜಕೀಯ ಪಕ್ಷ ಇತ್ತೆ ಅಲ್ಲಿ. ರೈತರನ್ನು ದಾರಿ ತಪ್ಪಿಸುತ್ತೇವೆ ಅಂದುಕೊಂಡರೆ ಅದು ಭ್ರಮೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರೈತರ ವಿಷಯವನ್ನು ಮುಂದಿಟ್ಟುಕೊಂಡು ನಾವು ಸದನದಲ್ಲಿ ಹೋರಾಟ ಮಾಡುತ್ತಿದ್ದೇವೆ. ಆದರೆ, ಹೊರಗಡೆ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಸರಕಾರದ ಪ್ರತಿನಿಧಿಗಳು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಿ ಎಂದು ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ರೈತರ ಬಳಿ ಹೋಗಿ ಮಾತನಾಡುವ ಯೋಗ್ಯತೆ ಈ ಸರಕಾರಕ್ಕೆ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ನಾವು ಎಪಿಎಂಸಿಗಳನ್ನು ಮುಚ್ಚಿಲ್ಲ. ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಆಯ್ಕೆ ನೀಡಿದ್ದೇವೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ, ರೈತರ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‍ನವರು ತಮ್ಮ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಪುನಃ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News