×
Ad

ವೃದ್ಧಾಪ್ಯ ವೇತನ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆಯೇ: ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ

Update: 2020-12-08 20:32 IST

ಬೆಂಗಳೂರು, ಡಿ.8: ಅರ್ಹ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನವನ್ನು ಅವರ ಮನೆಗಳಿಗೆ ತಲುಪಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿರುವ ಹೈಕೋರ್ಟ್, ವಯೋವೃದ್ಧರಿಗೆ ಇರುವ ಪಿಂಚಣಿ ಯೋಜನೆಗಳು ಹಾಗೂ ಅವುಗಳನ್ನು ಅನುಷ್ಠಾನಗೊಳಿಸುತ್ತಿರುವ ಕುರಿತು ತಿಳಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ರಾಜ್ಯದ ಹಿರಿಯ ನಾಗರಿಕರ ಸಾಮಾಜಿಕ ಭದ್ರತೆ, ಆರೋಗ್ಯ ಭದ್ರತೆ ಹಾಗೂ ಆಹಾರ ಭದ್ರತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆ ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿದೆ.

ಕೇಂದ್ರ ಸರಕಾರ ರೂಪಿಸಿರುವ ಕೊರೋನ ಮಾರ್ಗಸೂಚಿಗಳ ಪ್ರಕಾರ 65 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಮನೆಯಿಂದ ಹೊರಬರಬಾರದು. ಅದರಂತೆ ಹಿರಿಯ ನಾಗರಿಕರಿಗೆ ನೀಡುವ ವೃದ್ಧಾಪ್ಯ ವೇತನವನ್ನು ಅವರ ಮನೆ ಬಾಗಿಲಿಗೆ ತಲುಪಿಸಬೇಕು. ಹೀಗಾಗಿ ಪಿಂಚಣಿಯನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. ಅಲ್ಲದೇ, ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ನೀಡುವ ಸಂಬಂಧ ಇರುವ ಯೋಜನೆಗಳು ಯಾವುವು, ಅವುಗಳನ್ನು ಹೇಗೆ ಜಾರಿಗೊಳಿಸಲಾಗುತ್ತಿದೆ ಎಂಬುದರ ವಿವರಗಳನ್ನು ಮುಂದಿನ ವಿಚಾರಣೆ ಒಳಗೆ ಸಲ್ಲಿಸಬೇಕು ಎಂದು ಸರಕಾರಕ್ಕೆ ಸೂಚನೆ ನೀಡಿತು.

ಅರ್ಜಿಯಲ್ಲಿ ಏನಿದೆ: 2020ರ ಜನವರಿ ತಿಂಗಳಿಂದ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೃದ್ಧಾಪ್ಯ ವೇತನ ಅಥವಾ ಪಿಂಚಣಿಯನ್ನು ನಿಗದಿತ ಅವಧಿಯಲ್ಲಿ ನೀಡುತ್ತಿಲ್ಲ.

ಹೀಗಾಗಿ, ಕಳೆದ ಜನವರಿಯಿಂದ ಬಾಕಿ ಉಳಿದಿರುವ ವೃದ್ಧಾಪ್ಯ ವೇತನವನ್ನು ತಕ್ಷಣವೇ ನೀಡುವಂತೆ ಸರಕಾರ ಹಾಗೂ ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ನಿರ್ದೇಶನಾಲಯಕ್ಕೆ ನಿರ್ದೇಶಿಸಬೇಕು. ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಂಚಣಿ ಮೊತ್ತವನ್ನು ಹೆಚ್ಚಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News