ರೈತರ ಹೆಸರಿನ ಪ್ರತಿಭಟನೆ ಹಿಂದೆ ರಾಜಕೀಯ ದುರುದ್ದೇಶ: ಸಿ.ಟಿ.ರವಿ ಆರೋಪ
ಬೆಂಗಳೂರು, ಡಿ.8: ಕೃಷಿ ಸುಧಾರಣಾ ಮಸೂದೆಗಳನ್ನು ಏಕಾಏಕಿ ಜಾರಿಗೊಳಿಸಿಲ್ಲ. 2003ರಿಂದ ಈ ಕುರಿತು ಪ್ರಯತ್ನ ನಡೆದಿದೆ. ತಜ್ಞರ ಶಿಫಾರಸ್ಸು, ಚರ್ಚೆ, ಸಂಸತ್ತಿನ ಉನ್ನತಾಧಿಕಾರ ಸಮಿತಿಯ ಶಿಫಾರಸುಗಳನ್ನು ಅಧ್ಯಯನ ಮಾಡಿದ ನಂತರ ಮಸೂದೆಗಳನ್ನು ಜಾರಿಗೊಳಿಸಲಾಗಿದೆ. ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂದೆ ರಾಜಕೀಯ ದುರುದ್ದೇಶ ಇದೆ. ರೈತರ ಹಿತದೃಷ್ಟಿ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.
ಮಂಗಳವಾರ ವಿಧಾನಸೌಧದಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಮಸೂದೆಗಳು ರೈತರ ಬದುಕಿಗೆ ನೆರವು ನೀಡುತ್ತವೆ. ಅವುಗಳಿಂದ ರೈತರ ಬದುಕಿಗೆ ಹಾನಿ ಆಗುವುದಿಲ್ಲ. ಯುಪಿಎ ಸರಕಾರದ ಹಿಂದಿನ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕೃಷಿ ಸುಧಾರಣಾ ಮಸೂದೆಯನ್ನು ಬೆಂಬಲಿಸಿ ಮಾತನಾಡಿದ್ದರು ಎಂದರು.
ಕಮ್ಯುನಿಸ್ಟರ ಆಳ್ವಿಕೆ ಇರುವ ಕೇರಳದಲ್ಲಿ ಎಪಿಎಂಸಿಗಳೆ ಇಲ್ಲ. ಆದರೆ, ಕಮ್ಯುನಿಸ್ಟರು ಈ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಾರೆ ಎಂದರೆ, ಇದರ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗುತ್ತದೆ. ರೈತರು ತಮ್ಮ ಉತ್ಪನ್ನವನ್ನು ಎಪಿಎಂಸಿಗೆ ಯಾಕೆ ಮಾರಾಟ ಮಾಡಬೇಕು. ಕೃಷಿ ಕ್ಷೇತ್ರದಲ್ಲಿ ಸ್ಪರ್ಧೆ ಯಾಕಿರಬಾರದು. ರೈತರ ಉತ್ಪನ್ನಕ್ಕೆ ನ್ಯಾಯಯುತ ದರ ಯಾಕೆ ಬೇಡ ಎಂದು ಪ್ರಶ್ನಿಸಿದ ಅವರು, ರೈತರು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ನರಳಬೇಕೆಂಬ ಷಡ್ಯಂತ್ರ ಈ ಪ್ರತಿಭಟನೆಯ ಹಿಂದಿದೆ ಎಂದು ಟೀಕಿಸಿದರು.
ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕೃತವಾಗಿ ಐದು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಇದೇ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ಮೂಲಕ ಇದಕ್ಕೆ ಪರಿಹಾರ ದೊರಕಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದೆ. ಆದರೆ, ಇದನ್ನು ವಿರೋಧಿಸುವುದು ದುರದೃಷ್ಟಕರ ಎಂದು ಸಿ.ಟಿ.ರವಿ ಹೇಳಿದರು.
ಎಪಿಎಂಸಿಯಂತಹ ಏಕಸ್ವಾಮ್ಯ ಮಾರಾಟ ವ್ಯವಸ್ಥೆಯಿಂದ ರೈತರಿಗೆ ಸಮಸ್ಯೆ ಆಗುತ್ತದೆ. ರೈತ ನಾಯಕ ನಂಜುಂಡಸ್ವಾಮಿ ಅವರು, ‘ನನಗಿಷ್ಟ ಬಂದಲ್ಲಿ ಉತ್ಪನ್ನ ಮಾರಾಟ ಮಾಡುತ್ತೇನೆ’ ಎಂದಿದ್ದರು. ಅವರ ಧ್ವನಿಯನ್ನು ಸಮರ್ಥಿಸುವ ಕೆಲಸ ಸರಕಾರದ್ದು. ಆದರೆ, ನಂಜುಂಡಸ್ವಾಮಿ ಅವರ ಹೆಸರಿನಲ್ಲಿ ಸಂಘಟನೆ ಕಟ್ಟಿದ ಕೆಲವರು ಇದನ್ನು ವಿರೋಧಿಸುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.
ಕಿಸಾನ್ ಸಮ್ಮಾನ್ 10.67 ಕೋಟಿ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ರೂ.ಗಳಂತೆ ಬೀಜ ಮತ್ತು ರಸಗೊಬ್ಬರ ಖರೀದಿಗಾಗಿ ಮೊಟ್ಟಮೊದಲ ಬಾರಿಗೆ ನೀಡಲಾಗಿದೆ. ರಾಜ್ಯದಲ್ಲಿ 58 ಲಕ್ಷ ರೈತರಿಗೆ ಇದರ ಪ್ರಯೋಜನ ಲಭಿಸಿದೆ. ಕೇಂದ್ರದ 6 ಸಾವಿರ ರೂ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ 4 ಸಾವಿರ ರೂ.ಗಳನ್ನು ಹೆಚ್ಚುವರಿಯಾಗಿ ನೀಡಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.
ಮಣ್ಣಿನ ಪರೀಕ್ಷೆಗಾಗಿ ‘ಸಾಯಿಲ್ ಹೆಲ್ತ್ ಕಾರ್ಡ್’ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗಿದೆ. ಸಮಗ್ರ ಬೆಳೆಗಳ ಮಾಹಿತಿ ಕೊಡುವ ಕಾರ್ಯ ನಡೆದಿದೆ. ಡಾ.ಸ್ವಾಮಿನಾಥನ್ ವರದಿ ಆಧರಿಸಿ 28 ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಅತಿವೃಷ್ಟಿ ಅಥವಾ ಇನ್ಯಾವುದೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಫಸಲ್ ಬಿಮಾ ಯೋಜನೆ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.
ಕೇವಲ ದುರುದ್ದೇಶದಿಂದ ಅಪಪ್ರಚಾರ ಮತ್ತು ವಿರೋಧಿಸುವ ಕೆಲಸ ನಡೆಯುತ್ತಿದೆ. ದಿಕ್ಕು ತಪ್ಪಿಸುವ ಕೆಲವು ಸಂಘಟನೆಗಳು, ರಾಜಕೀಯ ವಿರೋಧಿಗಳಿಂದ ಇಂತಹ ಕೆಲಸ ನಡೆಸಿದೆ. ಕೆಲವು ಪ್ರತ್ಯೇಕತಾವಾದಿಗಳು ಇದಕ್ಕೆ ಕೈ ಜೋಡಿಸಿವೆ ಎಂದು ಸಿ.ಟಿ.ರವಿ ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ.ಸೋಮಶೇಖರ್, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ಶಾಸಕ ಬಸವರಾಜ ದಡೇಸುಗೂರು ಉಪಸ್ಥಿತರಿದ್ದರು.
ಪ್ರತ್ಯೇಕವಾದಿಗಳ ಕೈವಾಡ
ರಾಜಕೀಯ ದುರುದ್ದೇಶದಿಂದ ರೈತರ ಹೆಸರಿನಲ್ಲಿ ಪ್ರತಿಭಟನೆ ನೆಪದಲ್ಲಿ ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ಮತ್ತು ಕೇಂದ್ರದ ಕೃಷಿ ಸುಧಾರಣಾ ಕಾಯ್ದೆಗಳ ವಿರೋಧಿಸುವ ಕೆಲಸ ಮಾಡಲಾಗುತ್ತಿದೆ. ರಾಜಕೀಯ ವಿರೋಧಿಗಳು ಮತ್ತು ದಿಕ್ಕು ತಪ್ಪಿಸುವ ಸಂಘಟನೆಗಳು, ಕೆಲವು ಪ್ರತ್ಯೇಕವಾದಿಗಳು ಇದಕ್ಕೆ ಕೈಜೋಡಿಸಿದ್ದಾರೆ.
-ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ