ರೈತರ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಅಡಿ ಸರಕಾರವೇ ಖರೀದಿಸಬೇಕು: ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು, ಡಿ.8: ರೈತರು ಬೆಳೆಯುವ ತರಕಾರಿ, ಹಣ್ಣುಗಳು, ಧಾನ್ಯಗಳು ಸೇರಿ ಎಲ್ಲ ರೀತಿಯ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ಅಡಿ ಸರಕಾರವೇ ಖರೀದಿಸಬೇಕು ಹಾಗೂ ಇದಕ್ಕಿರುವ ನಿಬರ್ಂಧಗಳನ್ನು ತೆಗೆದುಹಾಕುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕೃಷಿ ಉತ್ಪನ್ನ ಖರೀದಿ ಕೇಂದ್ರಗಳ ಆರಂಭ ವಿಳಂಬ ಆಗುತ್ತಿರುವುದರಿಂದ ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ತಮ್ಮ ಬೆಳೆಯನ್ನು ಮಾರಿ ನಷ್ಟಕ್ಕೀಡಾಗುತ್ತಿದ್ದಾರೆ, ಹೀಗಾಗಿ ಮುಂದಿನ ದಿನಗಳಲ್ಲಿ ಕಟಾವಿನ ಪೂರ್ವದಲ್ಲಿಯೇ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸುತ್ತೇನೆ ಎಂದರು.
ಕೇರಳ ಹಾಗೂ ಪಂಜಾಬ್ ಸರಕಾರಗಳು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನಗಳನ್ನು ಖರೀದಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿರುವಂತ ಕಾನೂನನ್ನು ರೂಪಿಸಿ, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿವೆ. ಸರಕಾರ ನಮ್ಮಲ್ಲೂ ಅದೇ ರೀತಿಯ ಕಾನೂನನ್ನು ರೂಪಿಸಿ, ರೈತರ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಮಾಡಬೇಕು ಎಂದರು.
ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಸಂಬಂಧ ಮುಖ್ಯಮಂತ್ರಿ ಅವರಿಗೆ ಮೂರು ಬಾರಿ ಪತ್ರ ಬರೆದಿದ್ದೇನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದೇನೆ, ಈವರೆಗೆ ಇಬ್ಬರು ಒಂದು ಪತ್ರಕ್ಕೂ ಉತ್ತರಿಸಿಲ್ಲ. ರಾಜ್ಯದ ಮುಖ್ಯಮಂತ್ರಿಗಳೇ ಪ್ರತಿಪಕ್ಷ ನಾಯಕರ ಪತ್ರಕ್ಕೆ ಉತ್ತರಿಸುವುದಿಲ್ಲ ಅಂತಾದರೆ ಇನ್ನು ಪ್ರಧಾನಿಗಳು ಉತ್ತರಿಸುತ್ತಾರಾ ಎಂದು ಪ್ರಶ್ನಿಸಿದರು.
ಈ ವರ್ಷ 12.87 ಲಕ್ಷ ಟನ್ ಹತ್ತಿ ಬೆಳೆ ಬರಬಹುದೆಂಬ ನಿರೀಕ್ಷೆಯಿತ್ತು. ಪ್ರವಾಹದ ಪರಿಣಾಮವಾಗಿ ಕೇವಲ 2 ಲಕ್ಷ ಟನ್ ಹತ್ತಿ ಬೆಳೆ ಕೈಗೆ ಬಂದಿದೆ. ಕೈಗೆ ಬಂದ ಅಲ್ಪಸ್ವಲ್ಪ ಬೆಳೆಗೂ ಸರ್ಕಾರ ನ್ಯಾಯಯುತ ಬೆಲೆ ಕೊಡಿಸಲ್ಲ ಅಂತಾದರೆ ರೈತರಿಗೆ ಯಾರು ದಿಕ್ಕು? ಎಂದು ಪ್ರಶ್ನಿಸಿದರು.