ಮನೆ ಬಿಟ್ಟು ಬಂದ ಬಾಲಕಿಯನ್ನು ಬಾಲಮಂದಿರಕ್ಕೆ ಸೇರಿಸಿದ ಆಟೋ ಚಾಲಕ
ಮೈಸೂರು,ಡಿ.8: ಮನೆಯಲ್ಲಿ ಪೋಷಕರು ಬೈದರು ಎಂಬ ಕಾರಣಕ್ಕಾಗಿ ಹೇಳದೆ ಕೇಳದೆ ಮನೆ ಬಿಟ್ಟು ಬಂದ 12 ವರ್ಷದ ಬಾಲಕಿಯನ್ನು ಆಟೋ ಚಾಲಕರೊಬ್ಬರು ರಕ್ಷಣೆ ಮಾಡಿ ನಗರದ ಬಾಲಕಿಯರ ಬಾಲಮಂದಿರಕ್ಕೆ ಸೇರಿಸಿದ್ದಾರೆ.
ಮೈಸೂರಿಗೆ ಬಸ್ಸಿನಲ್ಲಿ ಬಂದಿಳಿದ ಬಾಲಕಿಯ ಮಾತುಗಳನ್ನು ಸೂಕ್ಷ್ಮವಾಗಿ ಆಲಿಸಿದ ಆಟೋ ಚಾಲಕ ಮೈಸೂರಿನ ಶಕ್ತಿ ನಗರದ ಜುಬೇರ್ ಎಂಬವರು ಬಾಲಕಿಯನ್ನು ನೇರವಾಗಿ ಬಾಲಕಿಯರ ಬಾಲ ಮಂದಿರಕ್ಕೆ ಕರೆದೊಯ್ದು ಅಲ್ಲಿನ ಅಧಿಕಾರಿಗಳಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಚಾಮರಾಜನಗರ ಮೂಲದ ಈ ಬಾಲಕಿ ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಎಲ್ಲಿಗೆ ಹೋಗಬೇಕು ಎಂದು ತಿಳಿಯದೇ ಅತ್ತಿಂದಿತ್ತ ಓಡಾಡುತ್ತಿದ್ದಳು. ಇದನ್ನು ಗಮನಿಸಿದ ಜುಬೇರ್ ಬಾಲಕಿಯ ಬಳಿ ಬಂದು ಎಲ್ಲಿಗೆ ಹೋಗಬೇಕೆಂದು ಕೇಳಿದ್ದಾರೆ. ಮೈಸೂರಿನಲ್ಲಿ ನಮ್ಮ ಸಂಬಂಧಿಕರ ಮನೆಯಿದ್ದು, ಅಲ್ಲಿಗೆ ಹೋಗಬೇಕೆಂದು ಬಾಲಕಿ ಉತ್ತರ ನೀಡಿದ್ದಾಳೆ. ಇದೇ ವೇಳೆ ಜುಬೇರ್ ಸಂಬಂಧಿಕರ ಮನೆಯ ವಿಳಾಸ ನೀಡುವಂತೆ ಕೇಳಿದ್ದು, ಆಗ ಬಾಲಕಿ ನನಗೆ ಗೊತ್ತಿಲ್ಲ, ಅವರ ಮನೆಯವರ ಮೊಬೈಲ್ ನಂಬರ್ ಕೂಡ ನನ್ನ ಬಳಿ ಇಲ್ಲ ಎಂದು ಉತ್ತರಿಸಿದ್ದು, ತಕ್ಷಣ ಜಾಗೃತನಾದ ಆಟೋ ಚಾಲಕ ಬಾಲಕಿಯನ್ನು ನೇರವಾಗಿ ಶಕ್ತಿಧಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಇಲ್ಲಿ ಮಕ್ಕಳಿಗೆ ಅವಕಾಶವಿಲ್ಲ ಎಂದು ಹೇಳಿದ ಅಲ್ಲಿನ ಸಿಬ್ಬಂದಿ ಬಾಲಕಿಯರ ಬಾಲ ಮಂದಿರಕ್ಕೆ ಬಿಡುವಂತೆ ಸಲಹೆ ನೀಡಿದ್ದು, ಜುಬೇರ್ ನೇರವಾಗಿ ಆ ಬಾಲಕಿಯನ್ನು ಬಾಲಮಂದಿರಕ್ಕೆ ಕರೆ ತಂದು ಬಿಟ್ಟಿದ್ದಾರೆ.
ಅಲ್ಲಿ ಬಾಲಕಿಯನ್ನು ಅವರು ವಿಚಾರಿಸಿದಾಗ 'ಓದುವುದಿಲ್ಲ ಎಂದು ಪಾಲಕರು ಪದೇ ಪದೆ ಬೈಯುತ್ತಿದ್ದರು ಎಂದು ಬಾಲಕಿ ತಿಳಿಸಿದ್ದಾಳೆ. ಇದೇ ಕಾರಣಕ್ಕೆ ತಾನು ಕೂಡಿಟ್ಟುಕೊಂಡಿದ್ದ ಹಣವನ್ನು ತೆಗೆದು ಬಾಲಕಿ ಮೈಸೂರು ಬಸ್ ಹತ್ತಿ ಬಂದಿದ್ದಾಳೆ ಎನ್ನಲಾಗಿದೆ. ಇದೀಗ ಬಾಲಕಿ ಬಾಲಮಂದಿರದಲ್ಲಿ ಸುರಕ್ಷಿತವಾಗಿದ್ದಾಳೆ.