ಉಡುಪಿ ಜಿಲ್ಲೆಯಲ್ಲಿ ತುಳು ಭವನ ನಿರ್ಮಾಣಕ್ಕೆ ಕ್ರಮ: ಕಾನೂನು ಸಚಿವ ಮಾಧುಸ್ವಾಮಿ

Update: 2020-12-08 17:23 GMT

ಬೆಂಗಳೂರು, ಡಿ. 8: ಉಡುಪಿ ಜಿಲ್ಲೆಯಲ್ಲಿ ತುಳು ಭವನ ನಿರ್ಮಿಸಲು ಮುಂದಿನ ಆಯವ್ಯಯದಲ್ಲಿ ಅನುದಾನದ ಲಭ್ಯತೆಯನ್ನು ಆಧರಿಸಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಹಿರಿಯ ಸದಸ್ಯ ಕೆ.ರಘುಪತಿ ಭಟ್ ಅವರ ಪರವಾಗಿ ಸರಕಾರದ ಮುಖ್ಯಸಚೇತಕ ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕರಾವಳಿ ಭಾಗದ ತುಳುನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ತುಳು ಭವನ ನಿರ್ಮಿಸುವ ಬೇಡಿಕೆ ಸದ್ಯಕ್ಕೆ ಸರಕಾರದ ಮುಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೇಳು ವರ್ಷಗಳಿಂದ ತುಳು ಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ, ಆ ಕಾಮಗಾರಿಯೂ ವಿಳಂಬವಾಗುತ್ತಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಆಯವ್ಯಯದಲ್ಲಿ ಉಡುಪಿ ಜಿಲ್ಲೆಯಲ್ಲಿ ತುಳು ಭವನ ನಿರ್ಮಿಸಲು ಸರಕಾರ ಆಸ್ಥೆ ವಹಿಸಲಿದೆ ಎಂದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸುನೀಲ್ ಕುಮಾರ್, ಕರಾವಳಿ ಭಾಗದ ಭಾಷೆ, ಸಂಸ್ಕೃತಿ ಅತ್ಯಂತ ವಿಶಿಷ್ಟ. ತುಳು ನಾಡಿನ ದೈವ, ಕಂಬಳ ಸೇರಿದಂತೆ ಸಾಂಸ್ಕೃತಿಕ ವೈಭವ್ಯ ಅನನ್ಯ. ಆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ತುಳು ಭವನ ನಿರ್ಮಾಣಕ್ಕೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News