ಗೋಹತ್ಯಾ ನಿಷೇಧ: ನ್ಯಾಯಾಲಯಗಳು ಹೇಳಿರುವುದೇನು?

Update: 2020-12-08 19:30 GMT

ಗೋಹತ್ಯಾ ನಿಷೇಧದಂತಹ ರೈತ ವಿರೋಧಿ, ಮುಸ್ಲಿಂ-ದಲಿತ ವಿರೋಧಿ, ಸಂವಿಧಾನ ವಿರೋಧಿ ಕಾಯ್ದೆಗಳ ವಿರುದ್ಧ ಶಾಸಕಾಂಗವಾಗಲೀ, ನ್ಯಾಯಾಂಗವಾಗಲೀ ನ್ಯಾಯವನ್ನು ಒದಗಿಸಿಕೊಡುವ ಅವಕಾಶ ಬಹಳ ಕಡಿಮೆ. ಆದ್ದರಿಂದ ಪ್ರಬಲವಾದ ಜನಾಂದೋಲನಗಳು ಹಾಗೂ ಬೀದಿ ಹೋರಾಟಗಳಿಲ್ಲದೆ ರೈತರು ಮತ್ತು ದಮನಿತರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಕಷ್ಟ. 

ರೈತರ ದಿಲ್ಲಿ ಮುತ್ತಿಗೆ ಕಲಿಸಿಕೊಡುತ್ತಿರುವುದೂ ಅದೇ ಪಾಠವನ್ನಲ್ಲವೇ?


ಒಂದೆಡೆ ಕಾರ್ಪೊರೇಟ್- ಫ್ಯಾಶಿಸ್ಟ್ ಪರಿವಾರದ ಬಿಜೆಪಿ ಸರಕಾರವು ದೇಶಾದ್ಯಂತ ರೈತರ ಬದುಕನ್ನು ಕಾರ್ಪೊರೇಟ್ ಕುಳಗಳಿಗೆ ಬಲಿಕೊಡುತ್ತಿದೆ. ಮತ್ತೊಂದೆಡೆ ಕೇಂದ್ರದಿಂದ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಿದ್ದ ಬಾಕಿಯನ್ನು ಹಾಗೂ ನೆರೆ ಪರಿಹಾರಗಳನ್ನು ಗಿಟ್ಟಿಸಿ ಪಡೆದುಕೊಳ್ಳಲು ತಾಕತ್ತಿಲ್ಲದ ರಾಜ್ಯದ ಬಿಜೆಪಿ ಸರಕಾರ ಅತ್ಯಂತ ರೈತ ವಿರೋಧಿಯಾದ ಗೋಹತ್ಯಾ ನಿಷೇಧ ಕಾನೂನನ್ನು ಈ ಚಳಿಗಾಲದ ಅಧಿವೇಶನದಲ್ಲೇ ಜಾರಿಗೆ ತರುವುದಾಗಿ ಘೋಷಿಸಿದೆ ಹಾಗೂ ರಾಜ್ಯವು ತರಲಿರುವ ಗೋಹತ್ಯಾ ನಿಷೇಧ ಕಾನೂನಿಗೆ ಗುಜರಾತ್ ಮತ್ತು ಉತ್ತರಪ್ರದೇಶ ಮಾದರಿಯಾಗಲಿದ್ದು ಅದಕ್ಕಿಂತ ಕಠಿಣವಾಗಿರಲಿದೆಯೆಂದು ರಾಜ್ಯದ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ರಾಜ್ಯದ ಮುಸ್ಲಿಮರಿಗೆ ಮಾತ್ರವಲ್ಲ ರಾಜ್ಯದ ರೈತರಿಗೂ ಎಚ್ಚರಿಸಿದ್ದಾರೆ. ಕಳೆದ ವಿಧಾನಮಂಡಲ ಅಧಿವೇಶನದಲ್ಲೂ ಬಿಜೆಪಿ ಭೂ ಪರಭಾರೆ, ಭೂಮಿತಿ ತಿದ್ದುಪಡಿ ಹಾಗೂ ಎಪಿಎಂಸಿ ತಿದ್ದುಪಡಿಯಂತಹ ಅತ್ಯಂತ ರೈತವಿರೋಧಿ ಮಸೂದೆಗಳನ್ನು ಮಂಡಿಸಿತ್ತು. ಆಪರೇಷನ್ ಕಮಲದ ಮೂಲಕ ಬಿಜೆಪಿ ಸರಕಾರ ವಿಧಾನ ಸಭೆಯಲ್ಲಿ ಅನೈತಿಕ ಬಹುಮತವನ್ನು ಪಡೆದುಕೊಂಡಿರುವುದರಿಂದ ವಿಧಾನಸಭೆಯಲ್ಲಿ ಅದು ಪಾಸಾಯಿತು. ಆದರೆ ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳ ಒಟ್ಟು ಸಂಖ್ಯಾಬಲ ಬಿಜೆಪಿಗಿಂತ ಹೆಚ್ಚಿರುವುದರಿಂದ ಪರಿಷತ್‌ನಲ್ಲಿ ಆ ಮಸೂದೆಗಳು ಪಾಸಾಗಲಿಲ್ಲ.

ಜೆಡಿಎಸ್ ಕೇಸರಿ ಶಾಲು ತೊಡುವುದೇ? 2020ರ ನವೆಂಬರ್ 12ರ ವೇಳೆಗೆ ವಿಧಾನ ಪರಿಷತ್‌ನ ಒಟ್ಟು 75 ಸಂಖ್ಯಾ ಬಲದಲ್ಲಿ ಪಕ್ಷಗಳ ಬಲಾಬಲ ಇಂತಿದೆ. ಬಿಜೆಪಿ- 31, ಕಾಂಗ್ರೆಸ್- 28 ಹಾಗೂ ಜೆಡಿಎಸ್- 14, ಸ್ವತಂತ್ರ ಅಭ್ಯರ್ಥಿ ಒಬ್ಬರು ಹಾಗೂ ಸಭಾಪತಿ ಒಬ್ಬರು. ಅಂದರೆ ಈಗ ವಿಧಾನ ಪರಿಷತ್‌ನಲ್ಲಿ ಮಸೂದೆಗಳು ಪಾಸಾಗಲು ಬೇಕಾದ ಬಹುಮತ 38. ಆದರೆ ಬಿಜೆಪಿ ಪಡೆದಿರುವ ಸ್ಥಾನ 31. ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಮಸೂದೆಯ ವಿರುದ್ಧ ಮತ ಚಲಾಯಿಸಿದರೆ 42 ಅಂದರೆ ಬಹುಮತವಾಗುತ್ತದೆ. ಮಸೂದೆ ಪಾಸಾಗುವುದಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಜೆಡಿಎಸ್ ನಾಯಕರಾದ ಕುಮಾರಸ್ವಾಮಿ ಯವರು ತಾವು ಕಾಂಗ್ರೆಸನ್ನು ನಂಬಿ ಕೆಟ್ಟ್ಟೆವೆಂದೂ, ಬಿಜೆಪಿಯ ಸಖ್ಯವೇ ಜೆಡಿಎಸ್‌ಗೆ ಹೆಚ್ಚು ಹಿತಕರವೆಂದು ಬಹಿರಂಗವಾಗಿ ಘೋಷಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲ. ಕಳೆದ ಬಾರಿ ಬಿಜೆಪಿಯ ಮಸೂದೆಗಳನ್ನು ಪಾಸು ಮಾಡಲು ಅವಕಾಶಕೊಡದೆ ಅಧಿವೇಶನವನ್ನು ಬರ್ಕಾಸ್ತುಗೊಳಿಸಿದ ಆರೋಪವನ್ನು ಹೊರಿಸಿ ಬಿಜೆಪಿಯು ವಿಧಾನಪರಿಷತ್‌ನ ಸಭಾಧ್ಯಕ್ಷರಾದ ಕಾಂಗ್ರೆಸ್‌ನ ಪ್ರತಾಪ್ ಚಂದ್ರ ಶೆಟ್ಟಿಯವರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ಈ ವಿಷಯದಲ್ಲಿ ಜೆಡಿಎಸ್ ಕೂಡಾ ಬಿಜೆಪಿಗೆ ಬೆಂಬಲ ಕೊಡುವುದನ್ನು ಈಗಾಗಲೇ ಖಾತರಿಪಡಿಸಿದೆ. ಆಗ ಹಾಲಿ ಸಭಾಧ್ಯಕ್ಷರು ಪದಚ್ಯುತಗೊಂಡು ಬಿಜೆಪಿ ಅಥವಾ ಜೆಡಿಎಸ್‌ನ ಸದಸ್ಯರೇ ಸಭಾಧ್ಯಕ್ಷರಾಗುತ್ತಾರೆ. ಅಲ್ಲದೇ ದಿಲ್ಲಿಯಲ್ಲಿ ನಡೆಯುತ್ತಿರುವ ಬಿಜೆಪಿ ಸರಕಾರ ಜಾರಿ ಮಾಡಿರುವ ರೈತ ಕಾಯ್ದೆಗಳ ವಿರುದ್ಧದ ರೈತರ ಬೃಹತ್ ಚಳವಳಿಗೆ ದೇಶದ ಬಹುಪಾಲು ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದರೂ ಜೆಡಿಎಸ್ ಮಾತ್ರ ನಿಗೂಢ ನಿರಾಸಕ್ತಿಯನ್ನು ಪ್ರದರ್ಶಿಸಿದೆ. ಅಷ್ಟೇ ಅಲ್ಲ, ವಿಧಾನಪರಿಷತ್‌ನಲ್ಲಿ ಕಳೆದ ಬಾರಿ ಪಾಸಾಗದೆ ತಡೆಹಿಡಿದಿದ್ದ ಬಿಜೆಪಿಯ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ನಿನ್ನೆಯಷ್ಟೇ ಜೆಡಿಎಸ್ ಬೆಂಬಲಿಸಿದೆ ಮತ್ತು ರೈತವಿರೋಧಿ ವಿಧೇಯಕಕ್ಕೆ ವಿಧಾನಪರಿಷತ್‌ನ ಅಂಗೀಕಾರ ದೊರಕುವಂತೆ ಮಾಡಿದೆ.

ಈ ಎಲ್ಲಾ ಸೂಚನೆಗಳನ್ನು ನೋಡಿದರೆ ಬರಲಿರುವ ಅಧಿವೇಶನದಲ್ಲಿ ಬಿಜೆಪಿ ಮಂಡಿಸುವ ಮಸೂದೆಗಳಿಗೆ ಜೆಡಿಎಸ್ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ಘೋಷಿಸುವ ಎಲ್ಲಾ ಸೂಚನೆಗಳೂ ಇವೆ. ಹಾಗೊಂದು ವೇಳೆ ಆದರೆ ಬಿಜೆಪಿಯ ‘ಲವ್ ಜಿಹಾದ್’ ಮತ್ತು ‘ಗೋಹತ್ಯಾ ನಿಷೇಧ’ ಮಸೂದೆಗಳಿಗೆ ಜೆಡಿಎಸ್ ಪ್ರತ್ಯಕ್ಷ ಸಹಾಯ ಮಾಡಿದರೆ ಮಸೂದೆಗಳ ಪರವಾಗಿ 31+14=45 ಮತಗಳು ಬೀಳುತ್ತವೆ. ಅಂದರೆ ಬಹುಮತ ಪಡೆದು ಮಸೂದೆ ಪಾಸಾಗಿಬಿಡುತ್ತದೆ. ಅಥವಾ ಜೆಡಿಎಸ್ ಸದಸ್ಯರು ಮತ ಚಲಾವಣೆಯ ಸಂದರ್ಭದಲ್ಲಿ ಗೈರಾಗಿ ಪರೋಕ್ಷ ಬೆಂಬಲ ಸೂಚಿಸಿದರೆ ಬಿಜೆಪಿಗೆ ಮಸೂದೆಯ ಪಾಸು ಮಾಡಿಸಿಕೊಳ್ಳಲು 32 ಮತಗಳ ಅಗತ್ಯ ಬೀಳುತ್ತದೆ. ಆಗ ಬಿಜೆಪಿಯ 31 ಹಾಗೂ ಸ್ವತಂತ್ರ ಅಭ್ಯರ್ಥಿಯ ಬೆಂಬಲ ಅಥವಾ ಸಭಾಧ್ಯಕ್ಷರ ಮತದೊಂದಿಗೆ ಮಸೂದೆಗೆ ಬಹುಮತ ಸಿಕ್ಕಿಬಿಡುತ್ತದೆ. ಹೀಗೆ ಈ ಬಾರಿ ಜೆಡಿಎಸ್‌ನ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲದೊಂದಿಗೆ ಬಿಜೆಪಿ ಈ ಮಸೂದೆಗಳನ್ನು ವಿಧಾನಪರಿಷತ್‌ನಲ್ಲೂ ಪಾಸು ಮಾಡಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಇನ್ನು ರಾಜ್ಯಪಾಲರು ನಿದ್ದೆಗೆಟ್ಟಾದರೂ ಅಂದೇ ಈ ಮಸೂದೆಗಳಿಗೆ ಅಂಕಿತ ಹಾಕುವ ಸಾಧ್ಯತೆ ಇದ್ದೇ ಇರುವುದರಿಂದ ‘ಲವ್ ಜಿಹಾದ್’ ಮತ್ತು ‘ಗೋಹತ್ಯಾ ನಿಷೇಧ’ ಮಸೂದೆಗಳು ಕಾನೂನಾಗಬಹುದು. ಆಗ ಈ ಕಾನೂನಿನ ವಿರುದ್ಧ ಹೋರಾಡಲು ಉಳಿಯುವ ದಾರಿ ಒಂದು- ನ್ಯಾಯಾಲಯಗಳ ಮೆಟ್ಟಿಲೇರುವುದು ಅಥವಾ- ಬೃಹತ್ ಜನಾಂದೋಲನಗಳನ್ನು ಕಟ್ಟುವುದು.

ನ್ಯಾಯಾಲಯಗಳ ಕೇಸರಿ ಕಣ್ಕಟ್ಟು:

ಆದರೆ 1955ರಿಂದ ಇಲ್ಲಿಯವರೆಗೆ ಗೋಹತ್ಯಾ ನಿಷೇಧದ ವಿಷಯದಲ್ಲಿ ಕೋರ್ಟ್‌ಗಳು ತೆಗೆದುಕೊಳ್ಳುತ್ತಿರುವ ನಿಲುವುಗಳನ್ನು ನೋಡಿದರೆ ನ್ಯಾಯಾಂಗವು ಅದರಲ್ಲೂ ಸುಪ್ರೀಂ ಕೋರ್ಟ್ ಕೇಸರಿ ಕಣ್ಕಟ್ಟಿಗೆ ಒಳಗಾಗುತ್ತಾ ಬಂದಿರುವುದು ನಿಚ್ಚಳವಾಗುತ್ತದೆ. ಹಿಂದುತ್ವವಾದದ ಧೂಳು ಹೆಚ್ಚಾಗುತ್ತಿದ್ದಂತೆ ಅದರ ಕಸವು ನಿಧಾನಕ್ಕೆ ನ್ಯಾಯಾಲಯದ ಕಣ್ಣಿಗೂ ಬೀಳುತ್ತಿರುವುದು ಅವುಗಳ ಜಾಣಕುರುಡಿನಲ್ಲೂ, ನ್ಯಾಯನೋಟದಲ್ಲೂ ಸ್ಪಷ್ಟವಾಗುತ್ತದೆ. ಮೊದಲನೆಯದಾಗಿ, ಸಂವಿಧಾನದ ರಚನಾ ಸಭೆಯಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧವನ್ನು ಮೂಲಭೂತ ಹಕ್ಕನ್ನಾಗಿಯೇ ಮಾಡಬೇಕೆಂಬ ಒತ್ತಾಯವನ್ನು ಕೆಲವು ಹಿಂದೂ ಮಹಾಸಭಾ ಮತ್ತು ಕಾಂಗ್ರೆಸ್ ಸದಸ್ಯರು ಮಾಡಿದ್ದು ನಿಜ. ಆದರೆ ಅಂಬೇಡ್ಕರ್‌ರವರ ಸತತ ವಾದ ಮತ್ತು ಪರಿಶ್ರಮದಿಂದಾಗಿ ಈ ಉಗ್ರವಾದಿಗಳು ತಮ್ಮ ನಿಲುವಿನಿಂದ ಕೊನೆಗೂ ಹಿಂದೆ ಸರಿದದ್ದು ಈಗ ಇತಿಹಾಸ. ಆದರೂ ಸಂವಿಧಾನದ ಪ್ರಭುತ್ವ ನಿರ್ದೇಶನಾ ತತ್ವದಡಿ ಬರುವ ‘ಆರ್ಟಿಕಲ್ 48’ ಹೀಗೆ ಹೇಳುತ್ತದೆ: ‘‘ದೇಶದ ಕೃಷಿಕ್ಷೇತ್ರ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಪುನರ್‌ಸಂಘಟಿಸಬೇಕು ಹಾಗೂ ಪ್ರಭುತ್ವವು ಗೋವು ಮತ್ತು ಇತರ ಹಾಲು ಕರೆಯುವ ಮತ್ತು ಕೃಷಿ ಉಪಯೋಗಿ ಜಾನುವಾರುಗಳ ಹತ್ಯೆಯನ್ನು ತಡೆಗಟ್ಟಲು ಕಾನೂನನ್ನು ರಚಿಸಬೇಕು.’’ ಇಲ್ಲಿ ಸ್ಪಷ್ಟವಾಗಿ ಕಾಣುವಂತೆ ಈ ಕಲಮಿನಲ್ಲಿ ಹಾಲು ಕರೆಯುವ ಹಸುಗಳು ಮತ್ತು ಕೃಷಿಗೆ ಉಪಯೋಗಕಾರಿ ಜಾನುವಾರುಗಳನ್ನು ರಕ್ಷಿಸಬೇಕೆಂಬ ಆಶಯವಿದೆ. ಆದರೆ ದುರದೃಷ್ಟವಶಾತ್ ಗೋವುಗಳಿಗೆ ವಿಶೇಷ ಸ್ಥಾನವನ್ನು ಒದಗಿಸಲಾಗಿದೆಯೆಂಬ ವ್ಯಾಖ್ಯಾನಕ್ಕೂ ಅವಕಾಶ ನೀಡುವಂತಿದೆ!

ಕಾಂಗ್ರೆಸ್‌ನೊಳಗೂ ಹೊರಗೂ ಇದ್ದ ಕೋಮುವಾದಿಗಳ ಒತ್ತಡ ಹಾಗೂ ಲಾಬಿಗಳಿಂದಾಗಿ 1955-65ರ ನಡುವಿನಲ್ಲಿ ಹಲವಾರು ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನುಗಳು ಜಾರಿಗೆ ಬಂದವು. ಅವುಗಳಲ್ಲಿ ಬಿಹಾರ ಸರಕಾರವು ಮಾಡಿದ ಕಾನೂನಿನ ವಿರುದ್ಧದ ದಾವೆಯೊಂದು ಸುಪ್ರಿಂ ಕೋರ್ಟಿನ ಮೆಟ್ಟಿಲೇರಿತು. 1959ರ ಮುಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ ರಾಜ್ಯದ (AIR 1959 SCR 629) ನಡುವಿನ ಆ ಪ್ರಕರಣದಲ್ಲಿ ನಿರ್ಣಯವನ್ನು ನೀಡುವಾಗ ವರಿಷ್ಠ ನ್ಯಾಯಾಲಯವು ಗೋಹತ್ಯಾ ನಿಷೇಧದ ಬಗ್ಗೆ ಹೀಗೆ ಅಭಿಪ್ರಾಯ ಪಟ್ಟಿದೆ: ಪ್ರಸ್ತುತ ಆರ್ಥಿಕ ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ ಜಾನುವಾರುಗಳು ಸಮಾಜಕ್ಕೆ ಒಂದು ಹೊರೆಯಾಗುವುದರಿಂದ ಅದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸಂಪೂರ್ಣ ಜಾನುವಾರು ಹತ್ಯಾ ನಿಷೇಧ ಸಾಧ್ಯವಿಲ್ಲ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾ ಮುಖ್ಯ ನ್ಯಾಯಮೂರ್ತಿ ಸಿ.ಆರ್. ದಾಸ್‌ರವರು ಮೂರು ಮುಖ್ಯಾಂಶಗಳನ್ನು ಪ್ರಸ್ತಾಪಿಸಿದ್ದರು.

‘‘1. ಎಲ್ಲಾ ವಯಸ್ಸಿನ ಹಸುಗಳ ಮತ್ತು ಎಲ್ಲಾ ಕರುಗಳ ಹತ್ಯೆಯ ಮೇಲಿನ ನಿಷೇಧ ಸಿಂಧುವಾದದ್ದು. 2. ಹಾಲು ನೀಡುವ ಎಮ್ಮೆಗಳ ಮತ್ತು ಉಳುವ ಯೋಗ್ಯ ಎತ್ತುಗಳ ಹತ್ಯೆಯ ಮೇಲಿನ ನಿಷೇಧವೂ ಸರಿಯಾದದ್ದೇ. 3. ಆದರೆ ಹಾಲು ನೀಡದ ಎಮ್ಮೆಗಳ ಮತ್ತು ಉಳುಮೆಗೆ ಸಹಕಾರಿಯಾಗದ ಎತ್ತು ಮತ್ತು ದನಗಳ ಹತ್ಯೆಯ ಮೇಲಿನ ನಿಷೇಧವೂ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸರಿಯಾದದ್ದಲ್ಲ.’’
(ಆಸಕ್ತರು ಈ ತೀರ್ಪಿನ ಪೂರ್ಣ ಪಠ್ಯವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://indiankanoon.org/doc/93885/)

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಕೃಷಿಗೆ ಹಾಗೂ ಹೈನುಗಾರಿಕೆಗೆ ಉಪಯೋಗಕ್ಕೆ ಬರದ ಜಾನುವಾರುಗಳ ಹತ್ಯಾ ನಿಷೇಧವು ಸೂಕ್ತವಲ್ಲವೆಂಬ ರೈತಪರ ವಿವೇಚನೆ ತೋರುವ ನ್ಯಾಯಾಲಯವು ಅದೇ ತರ್ಕವನ್ನು ಹಸುಗಳಿಗೆ ಏಕೆ ವಿಸ್ತರಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ದೊರೆಯುವುದಿಲ್ಲ. ಹೀಗಾಗಿ ಹಸುಗಳಿಗೆ ಎಮ್ಮೆ, ಕೋಣ ಮತ್ತು ದನಗಳಿಗಿಂತ ಮಿಗಿಲಾದ ಕಾನೂನು ಸ್ಥಾನಮಾನಕ್ಕೆ ಇಲ್ಲಿಂದಲೇ ನ್ಯಾಯಾಂಗ ಮುದ್ರೆ ದೊರೆಯುತ್ತದೆ. ಆದರೂ 1964ರಲ್ಲಿ 14ಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಾರಿಯಾದ ಗೋಹತ್ಯಾ ನಿಷೇಧ ಕಾನೂನುಗಳು 14 ವರ್ಷಕ್ಕೆ ಮೇಲ್ಪಟ್ಟ ಅಂದರೆ ಹಾಲು ಕೊಡದ ಹಸುಗಳ ಹತ್ಯೆಗೂ ಶರತ್ತುಬದ್ಧ ಅವಕಾಶಗಳನ್ನು ಮಾಡಿಕೊಟ್ಟಿತ್ತು. 1990ರ ದಶಕದ ನಂತರದಲ್ಲಿ ಫ್ಯಾಶಿಸ್ಟ್ ರಾಜಕೀಯವು ಉತ್ತುಂಗಕ್ಕೆ ಏರುವ ತನಕ ಮತ್ತೆ ಈ ಗೋಹತ್ಯಾ ಕಾನೂನುಗಳ ಬಗ್ಗೆ ಹೆಚ್ಚಿಗೆ ವಾದ ವಿವಾದಗಳಿರಲಿಲ್ಲ. ಆದರೆ 90ರ ಉತ್ತರಾರ್ಧದಲ್ಲಿ ಮತ್ತು 2002ರಲ್ಲಿ ಮೋದಿ ಸರಕಾರದಡಿ ನಡೆದ ಗುಜರಾತ್ ಹತ್ಯಕಾಂಡದ ನಂತರ ಮತ್ತೊಮ್ಮೆ ದೇಶಾದ್ಯಂತ ಹಿಂದಿ-ಹಿಂದೂ-ಹಿಂದೂಸ್ಥಾನ-ಗೋವುಗಳನ್ನಿಟ್ಟುಕೊಂಡು ಭುಗಿಲೆದ್ದ ಫ್ಯಾಶಿಸ್ಟ್ ರಾಜಕೀಯ ಆಕ್ರಮಣದ ಭಾಗವಾಗಿ ಮತ್ತೊಮ್ಮೆ ಗೋಹತ್ಯಾ ನಿಷೇಧದ ಸುತ್ತ ರಾಜಕೀಯ ಪ್ರಾರಂಭವಾಯಿತು. ಈ ವೇಳೆಗೆ ಶಾಸಕಾಂಗ ಮತ್ತು ಕಾರ್ಯಾಂಗಗಳು ಮಾತ್ರವಲ್ಲದೆ ನ್ಯಾಯಾಂಗದ ಮೇಲೂ ಫ್ಯಾಶಿಸ್ಟ್ ರಾಜಕೀಯ ಧೋರಣೆಗಳು ದಟ್ಟ ಪ್ರಭಾವ ಬೀರಲು ಪ್ರಾರಂಭಿಸಿತ್ತು.

1994ರಲ್ಲಿ ಆಗಿನ ಗುಜರಾತ್ ಸರಕಾರ ಆವರೆಗೆ ಅಸ್ತಿತ್ವದಲ್ಲಿದ್ದ “Bombay Animal Preservation Act”ಗೆ ತಿದ್ದುಪಡಿ ತರಲು Bombay Animal Preservation (Gujarat Amendment) Act, 1994 ಕಾಯ್ದೆಯನ್ನು ಜಾರಿಗೆ ತಂದಿತು. ಅದರಲ್ಲಿನ ಸೆಕ್ಷನ್ 2ರಲ್ಲಿ ಆವರೆಗೆ ಹಸುವಿನ ಹತ್ಯೆಯ ಸಂಪೂರ್ಣ ನಿಷೇಧ ಎಂಬ ಕಡೆ ದನ, ಗೂಳಿಗಳನ್ನು ಸೇರಿಸಿತ್ತು.

ಅದರ ವಿರುದ್ಧ ಖುರೇಷಿ ಸಮುದಾಯದವರು ಹೈಕೋರ್ಟಿನಲ್ಲಿ ಹಾಕಿದ್ದ ಅಪೀಲನ್ನು ಎತ್ತಿಹಿಡಿದ ಗುಜರಾತ್ ಹೈಕೋರ್ಟ್ ಈ ಮಸೂದೆ ಸಂವಿಧಾನ ವಿರೋಧಿ ಎಂದು ಆ ಕಾಯ್ದೆಯನ್ನು ರದ್ದುಗೊಳಿಸಿತ್ತು. ಆದರೆ ನರೇಂದ್ರ ಮೋದಿ ಆಡಳಿತದಲ್ಲಿ ಕೆಲವು ಸಂಘಪರಿವಾರ ಪೋಷಿತ ಸಂಘಟನೆಗಳು ಈ ಪ್ರಕರಣವನ್ನು 2002ರಲ್ಲಿ ಸುಪ್ರೀಂಕೋರ್ಟಿಗೆ ಕೊಂಡೊಯ್ದರು. ಈ ಪ್ರಕರಣದಲ್ಲಿ ಹಲವಾರು ಸಂವಿಧಾನಾತ್ಮಕ ಅಂಶಗಳಿದ್ದುದರಿಂದ ಇದನ್ನು ಏಳು ನ್ಯಾಯಾಧೀಶರ ಬೆಂಚಿಗೆ ವರ್ಗಾಯಿಸಲಾಯಿತು.

2005ರಲ್ಲಿ ಗುಜರಾತ್ ಸರಕಾರದ ಕಾಯ್ದೆಯನ್ನು ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಎತ್ತಿಹಿಡಿಯಿತು: ಸುಪ್ರೀಂಕೋರ್ಟಿನ ಏಳು ಜನರ ಪೀಠದಲ್ಲಿ ಆರು ನ್ಯಾಯಾಧೀಶರು 1994ರ ಗುಜರಾತ್ ಕಾಯ್ದೆಯನ್ನು ಎತ್ತಿ ಹಿಡಿದರು. ಇದು ಈವರೆಗೆ ಗೋಹತ್ಯಾ ನಿಷೇಧದ ಬಗ್ಗೆ ಬಂದಿರುವ ಅತ್ಯುನ್ನತ ಸಾಂವಿಧಾನಿಕ ಪೀಠದ ಆದೇಶ. ಹೀಗಾಗಿ ಒಂದೊಮ್ಮೆ ಕರ್ನಾಟಕ ಸರಕಾರ ತರಲಿರುವ ಕಾನೂನಿನ ವಿರುದ್ಧ ನ್ಯಾಯಾಲಯದ ಬಾಗಿಲು ತಟ್ಟಿದರೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಈ ಆದೇಶಕ್ಕೆ ಒಳಪಟ್ಟೇ ತಮ್ಮ ತೀರ್ಮಾನವನ್ನು ಕೊಡಲಿವೆ. ಆದ್ದರಿಂದ ಸುಪ್ರೀಂ ಕೋರ್ಟಿನ ಏಳು ಜನರ ಸಾಂವಿಧಾನಿಕ ಪೀಠ ಗುಜರಾತ್ ಪ್ರಕರಣದಲ್ಲಿ ಏನು ಹೇಳಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಸುಪ್ರೀಂ ಕೋರ್ಟ್ ಹಸುವನ್ನು ಮಾತ್ರವಲ್ಲದೆ, ಎತ್ತು, ದನ ಮತ್ತು ಗೂಳಿಗಳನ್ನು ಕೂಡಾ ಅಂದರೆ ‘ಸಂಪೂರ್ಣ ಗೋ ಸಂತತಿ ಹತ್ಯಾ ನಿಷೇಧ’ವನ್ನು ಎತ್ತಿ ಹಿಡಿದಿದೆ. ತಾನು ಈ ನಿರ್ಣಯಕ್ಕೆ ಬರಲು ಕಾರಣವೇನೆಂದು ಸ್ಪಷ್ಟಪಡಿಸುತ್ತಾ ಸಾಂವಿಧಾನಿಕ ಪೀಠದ ಮುಖ್ಯಸ್ಥ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಲಹೋಟಿಯವರು:

‘‘ಗುಜರಾತಿನ ಕಾಯ್ದೆಯು ಜಾನುವಾರುಗಳಲ್ಲಿ ಗೋ-ಸಂತತಿಯೆಂಬ ಒಂದು ವಿಭಾಗದ ಹತ್ಯೆಯನ್ನು ಮಾತ್ರ ನಿಷೇಧಿಸುತ್ತದೆಯೇ ಹೊರತು ಸಂಪೂರ್ಣ ಜಾನುವಾರು ಹತ್ಯೆಯನ್ನಲ್ಲ. ಇದು ಕಸಾಯಿಗಳ ವೃತ್ತಿಯ ಮೇಲೆ ಸಂಪೂರ್ಣ ನಿಷೇಧವನ್ನೇನೂ ಹೇರುವುದಿಲ್ಲ. ಅವರು ಈ ಮಸೂದೆಯಲ್ಲಿ ಉಲ್ಲೇಖಿತವಲ್ಲದ ಇತರ ಜಾನುವಾರುಗಳ ಹತ್ಯೆಯನ್ನು ಮುಂದುವರಿಸಬಹುದು. ಏಕೆಂದರೆ ಅವರು ಗೋಸಂತತಿಯ ಹತ್ಯೆಯನ್ನು ಮಾಡುವುದರಿಂದ ಮಾತ್ರ ತಮ್ಮ ವ್ಯಾಪಾರ-ವಹಿವಾಟನ್ನು ಮಾಡಬೇಕೆಂದಿಲ್ಲ. ಗೋ-ಸಂತತಿಯಲ್ಲದ ಇತರ ಜಾನುವಾರುಗಳನ್ನು ಹತ್ಯೆ ಮಾಡುವ ಮೂಲಕ ಅವರು ತಮ್ಮ ವ್ಯಾಪಾರವನ್ನು ಮುಂದುವರಿಸಬಹುದು.’’
ಅಂದರೆ ನ್ಯಾಯಪೀಠವು ದೇಶದ ಒಂದು ಧರ್ಮದ ವಕ್ತಾರರು ತರ್ಕಾತೀತ ಕಾರಣಗಳಿಗೆ ಹಸುವಿಗೆ ವಿಶೇಷ ಸ್ಥಾನವನ್ನು ಕೊಡುವುದಕ್ಕೂ ಮತ್ತು ಆ ಮೂಲಕ ಅದರ ಹಿಂದಿನ ರಾಜಕಾರಣಕ್ಕೂ ನ್ಯಾಯಿಕ ಮಾನ್ಯತೆಯನ್ನು ನೀಡಿಟ್ಟಿತು.
(ಆಸಕ್ತರು ಈ ತೀರ್ಪಿನ ಪೂರ್ಣ ವಿವರವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು :https://indiankanoon.org/doc/101278772/) ಆದರೂ, ಈ ಬಹುಸಂಖ್ಯಾತ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ಏಳನೇ ನ್ಯಾಯಾಧೀಶರಾದ ಜಸ್ಟೀಸ್ ಮಾಥುರ್‌ರವರು ಗೋ ಹತ್ಯೆ ನಿಷೇಧದ ಮಸೂದೆಯಲ್ಲಿ ದನ ಮತ್ತು ಗೂಳಿಗಳ ಹತ್ಯೆಯ ನಿಷೇಧವನ್ನೂ ಸೇರಿಸಿದ್ದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿ ತಮ್ಮ ಪ್ರತ್ಯೇಕ ನಿರ್ಣಯ ನೀಡಿದ್ದರು. ಆದರೆ ಜಾರಿಯಾಗುವುದು ಬಹುಸಂಖ್ಯಾತರ ಆದೇಶವಷ್ಟೇ.. ಸಾಂವಿಧಾನಿಕ ಪೀಠವು ಈ ತೀರ್ಮಾನಕ್ಕೆ ಬರಲು ಮತ್ತೊಂದು ಕಾರಣ ತನ್ನ ವಾದಕ್ಕೆ ಪೂರಕವಾಗಿ ಗುಜರಾತ್ ಸರಕಾರ ಒದಗಿಸಿದ ಸುಳ್ಳುಪೊಳ್ಳು ಅಂಕಿಅಂಶಗಳು. ಗುಜರಾತ್ ಸರಕಾರ ತನ್ನ ವಾದದಲ್ಲಿ ‘‘ದನ ಮತ್ತು ಹಸುಗಳು ಸಾಯುವ ತನಕ ಗಂಜಲ ಮತ್ತು ಸೆಗಣಿ ಹಾಕುತ್ತವೆ. ಪ್ರತಿ ಹಸು ಮತ್ತು ದನಗಳನ್ನು ಸಾಕಲು ದಿನಕ್ಕೆ 25 ರೂ. ಖರ್ಚಾದರೆ ಈ ಸೆಗಣಿ ಮತ್ತು ಗಂಜಲ ಮಾರಿದರೆ 35 ರೂ. ಸಿಗುತ್ತದೆ. ಆದ್ದರಿಂದ ಹಸು ಮತ್ತು ದನಗಳನ್ನು ಉಪಯುಕ್ತ ಮತ್ತು ಅನುಪಯುಕ್ತ ಎಂದು ವಿಭಾಗೀಕರಿಸುವುದೇ ತಪ್ಪು’’ ಎಂದು ಹೇಳಿತ್ತು. ಅಲ್ಲದೇ ಪ್ರತಿ ದನವು 16 ವರ್ಷಕ್ಕೆ ಮುಂಚೆ 0.8 ಅಶ್ವಶಕ್ತಿಯಷ್ಟು ಶಕ್ತಿ ಹೊಂದಿದ್ದರೆ 16 ವರ್ಷದ ನಂತರವು ಸಾಯುವ ತನಕ 0.6 ಅಶ್ವಶಕ್ತಿಯನ್ನು ಹೊಂದಿರುತ್ತಾದ್ದರಿಂದ ಅವು ಸಾಯುವ ತನಕ ಉಪಯುಕ್ತವೇ ಎಂದೆಲ್ಲ ಮೋದಿ ರಾಜ್ಯದ ಪಶುಸಂಗೋಪನಾ ಇಲಾಖೆ ಕಾಗಕ್ಕ ಗುಬ್ಬಕ್ಕನ ಕಥೆ ಕಟ್ಟಿತ್ತು.

ಇತರ ಸಾಂವಿಧಾನಿಕ ವಿಷಯಗಳ ಬಗ್ಗೆ ಪರಿಣಿತರ ಸಹಕಾರ ಕೋರುವ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಾತ್ರ ಹಿಂದುತ್ವವಾದಿ ಸರಕಾರ ಹೇಳಿದ ಕಥೆಗಳನ್ನೆಲ್ಲಾ ಒಪ್ಪಿಕೊಂಡಿದ್ದು ಹೇಗೆ? ಒಂದು ಸಮಾಧಾನಕರ ಅಂಶವೆಂದರೆ ಅದೇ ತೀರ್ಮಾನದಲ್ಲಿ ಸಾಂವಿಧಾನಿಕ ಪೀಠ ಸತ್ತ ದನಗಳ ಚರ್ಮ ಮತ್ತಿತ್ಯಾದಿಗಳನ್ನು ಬಳಸಿಕೊಳ್ಳಲು ಸಂಪೂರ್ಣ ಪರವಾನಿಗೆ ನೀಡಿದೆ:
ದನದ ಚರ್ಮ ಹಾಗೂ ದೇಹದ ಇತರ ಭಾಗಗಳ ವ್ಯಾಪಾರವನ್ನು ಕುರಿತಂತೆ ಹೇಳುವುದಾದರೆ ಇವುಗಳ ವ್ಯಾಪಾರ ನಡೆಸಬೇಕೆಂದರೆ ಅವುಗಳನ್ನು ಹತ್ಯೆ ಮಾಡಲೇ ಬೇಕೆಂದೇನೂ ಇಲ್ಲ. ಹೇಗಿದ್ದರೂ ಅವು ಸಹಜ ಸಾವನ್ನಪ್ಪುವುದರಿಂದ ಅವುಗಳ ಚರ್ಮ ಮತ್ತು ದೇಹದ ಇತರ ಭಾಗಗಳ ವ್ಯಾಪಾರ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಏನೂ ಬಾಧಕವಾಗುವುದಿಲ್ಲ.

ಆದರೆ ಕರ್ನಾಟಕದ ಬಿಜೆಪಿ ಸರಕಾರ ಈ ಹಿಂದೆ ತಂದಿದ್ದ ಜಾನುವಾರು ಹತ್ಯಾ ನಿಷೇಧ ಮಸೂದೆಯ ಸೆಕ್ಷನ್ 5 ದನದ ಮಾಂಸವನ್ನು ವ್ಯಾಪಾರ ಮಾಡುವುದಿರಲಿ ಅದನ್ನು ಇಟ್ಟುಕೊಳ್ಳುವುದನ್ನೇ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುತ್ತಿತ್ತು! ಈಗ ಕರ್ನಾಟಕದ ಬಿಜೆಪಿ ಸರಕಾರ ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿರುವ ಗೋಹತ್ಯಾ ನಿಷೇಧ ಕಾನೂನುಗಳಿಗಿಂತಲೂ ಕಠಿಣವಾದ ಕಾನೂನು ತರಲಿದೆ ಎಂದು ಘೋಷಿಸಿದೆ. ಮೋದಿತ್ವದ ಕಾಲದಲ್ಲಿ ನ್ಯಾಯಾಂಗ

ಹಾಗೆ ನೋಡಿದರೆ ಅಂದಿಗಿಂತ ಇಂದು ಸಮಾಜ, ಪ್ರಭುತ್ವ ಇನ್ನಷ್ಟು ಕೇಸರೀಕರಣಕ್ಕೆ ಬಲಿಯಾಗಿದೆ. ಹಿಂದೆಂದೆಗಿಂತಲೂ ಈಗ ಹಸುವಿನ ಗಂಜಲ, ಸೆಗಣಿಗಳ ಬಗೆಗಿನ ಮೌಢ್ಯಗಳಿಗೆ ಅಧಿಕೃತ ಮಾನ್ಯತೆ ಸಿಕ್ಕಿದೆ. ಮಧ್ಯಪ್ರದೇಶದಂತಹ ರಾಜ್ಯಗಳು ಅವುಗಳ ಬಗ್ಗೆ ಇಲಾಖೆಯನ್ನೇ ತೆರೆದಿವೆ. ಮತ್ತೊಂದು ಕಡೆ ಸರಕಾರವಿರಲಿ, ನ್ಯಾಯಾಂಗವೇ ಖುಲ್ಲಂಖುಲ್ಲಾ ಹಿಂದುತ್ವವಾದಿ ತರ್ಕಗಳನ್ನು ಮುಂದಿಡುತ್ತಿದೆ. ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಕುರಿತಾದ ತೀರ್ಮಾನ, ರಾಜಸ್ಥಾನದ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ನವಿಲಿನ ಸಂತಾನೋತ್ಪತ್ತಿಯ ಬಗ್ಗೆ ಹಾಗೂ ಹೈದರಾಬಾದಿನ ಹೈಕೋರ್ಟ್ ನ್ಯಾಯಾಧೀಶರು ವೇದಕಾಲೀನ ಮೌಲ್ಯಗಳು ಸಾಂವಿಧಾನಿಕ ಮೌಲ್ಯಗಳಿಗಿಂತ ಹೆಚ್ಚು ಪವಿತ್ರವಾದದ್ದೂ ಎಂದು ಬಹಿರಂಗವಾಗಿ ಬೋಧಿಸುವಷ್ಟು ನ್ಯಾಯಾಂಗ ಕೇಸರೀಕರಣವಾಗಿದೆ.

ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಸುಪ್ರೀಂ ಕೋರ್ಟ್ ಒಂದು ಪ್ರಕರಣದಲ್ಲೂ ಕೇಂದ್ರ ಸರಕಾರದ ವಿರುದ್ಧ ನ್ಯಾಯಾದೇಶವನ್ನು ಕೊಟ್ಟಿಲ್ಲವೆಂದು ಒಂದು ಅಧ್ಯಯನವು ಸಾಬೀತು ಮಾಡಿದೆ. ‘ಲವ್ ಜಿಹಾದ್’ ವಿಷಯದಲ್ಲಿ ಉತ್ತರಪ್ರದೇಶ ಹೈಕೋರ್ಟ್ ವಯಸ್ಕರ ಖಾಸಗಿ ಜೀವನದಲ್ಲಿ ಮಧ್ಯಪ್ರವೇಶ ಮಾಡಲು ಸರಕಾರಕ್ಕೆ ಅಧಿಕಾರವಿಲ್ಲವೆಂದು ತೀರ್ಮಾನ ಕೊಟ್ಟ ಮೇಲೂ ಯೋಗಿ ಸರಕಾರ ಸುಗ್ರೀವಾಜ್ಞೆ ತಂದು ಈಗಾಗಲೇ ಏಳು ಜನರನ್ನು ಬಂಧಿಸಿದೆ. ಅದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದರೂ ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಮನಸ್ಸು ಮಾಡುತ್ತಿಲ್ಲ. ಹಾಗೆಯೇ ಕೇಂದ್ರ ಸರಕಾರಕ್ಕೆ ಇರಿಸುಮುರಿಸು ತರುವಂತಹ ಸಿಎಎ-ಎನ್‌ಆರ್‌ಸಿ, ಕಾಶ್ಮೀರ ವಿಭಜನೆ, ಎಲೆಕ್ಟೋರಲ್ ಬಾಂಡ್ ಇನ್ನಿತ್ಯಾದಿ ಗಂಭೀರ ವಿಷಯಗಳು ಎಷ್ಟೇ ತುರ್ತಿನದ್ದಾದರೂ, ಈ ಕಾನೂನುಗಳಿಂದಾಗಿ ದಿನನಿತ್ಯ ನಾಗರಿಕರ ಹಕ್ಕುಗಳ ಹರಣವಾಗುತ್ತಿದ್ದರೂ ಸುಪ್ರೀಂ ಕೋರ್ಟ್ ಅರ್ನಬ್ ಪ್ರಕರಣದಂತಹ ಆಳುವವರ ಆಪ್ತರ ಬಗ್ಗೆ ತೋರುವಷ್ಟು ಕಾಳಜಿಯನ್ನು ತೋರುತ್ತಿಲ್ಲ.

ಇತ್

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News