ಸಂಸದೆ ಶೋಭಾ ಕರಂದ್ಲಾಜೆ ರಾಜೀನಾಮೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಒತ್ತಾಯ

Update: 2020-12-09 08:13 GMT

ಮೈಸೂರು, ಡಿ.9: ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರು ಎಂದು ಹೇಳಿರುವ ಸಂಸದೆ ಶೋಭಾ ಕರಂದ್ಲಾಜೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್ ಆಗ್ರಹಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಅನ್ನದಾತರ ಬಗ್ಗೆ ಮಾತನಾಡಲು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ನೈತಿಕತೆಯೇ ಇಲ್ಲ, ಭಾರತ್ ಬಂದ್ ಗೆ ಕರೆ ನೀಡಿ ಹೋರಾಟ ಮಾಡುತ್ತಿರುವವರು ಭಯೋತ್ಪಾದಕರಾದ ಮೇಲೆ ಅವರನ್ನು ದೇಶದ ಒಳಗೆ ಹೇಗೆ ಬಿಟ್ಟುಕೊಂಡರು?, ಕಳೆದ ಒಂದು ತಿಂಗಳಿನಿಂದೆ ಹೋರಾಟ ಮಾಡುತ್ತಿರುವರು ರೈತರಲ್ಲವೆ? ಭಯೋತ್ಪಾದಕರಾದ ಮೇಲೆ ಅವರನ್ನು ಏಕೆ ಕೇಂದ್ರ ಸರಕಾರದ ನಾಯಕರುಗಳು ಕರೆದು ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಒಬ್ಬ ಮಹಿಳೆಯಾಗಿ ಶೋಭಾ ಕರಂದ್ಲಾಜೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದೇ ಹತ್ರಾಸ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆಗಿ ಸುಟ್ಟು ಹಾಕಲಾಯಿತು. ನಮ್ಮ ರಾಜ್ಯದಲ್ಲೇ ಶಾಸಕ ಸಿದ್ದು ಸವದಿ ಪುರಸಭೆ ಸದಸ್ಯ ಮಹಿಳಾ ಸದಸ್ಯೆಯನ್ನು ಎಳೆದು ಗರ್ಭಪಾತಕ್ಕ ಕಾರಣರಾಗಿದ್ದಾರೆ. ಅದರ ಬಗ್ಗೆ ಒಂದೇ ಒಂದು ಹೇಳಿಕೆಯನ್ನು ಶೋಭಾ ಕರಂದ್ಲಾಜೆ ಆಗಲಿ ಬಿಜೆಪಿಯ ಯಾವೊಬ್ಬ ಮಹಿಳೆಯೂ ಹೇಳಿಕೆ ನೀಡದಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹೆಸರು ಹೇಳಿ ಹಸಿರು ಶಾಲು ಮೈಮೇಲೆ ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ರೈತರ ವಿರುದ್ದ ನಡೆದುಕೊಳ್ಳುತ್ತಿದ್ದಾರೆ. ಭೂಸುಧಾರಣೆ ಕಾಯ್ದೆ ಅನುಷ್ಠಾನಕ್ಕೆ ತರುವ ಮೂಲಕ ರೈತರ ಜೀವನದ ಮೇಲೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.

ದೇಶದ ರೈತ, ಮಹಿಳೆ, ಕಾರ್ಮಿಕ, ಯವವಕರು ಸೇರಿದಂತೆ ಯಾರೊಬ್ಬರೂ ನೆಮ್ಮದಿಯಾಗಿಲ್ಲ, ಯಾರಾದರೂ ನೆಮ್ಮದಿಯಾಗಿದ್ದಾರೆ ಎಂದರೆ ಅದು ಅದಾನಿ, ಅಂಬಾನಿ ಮತ್ತು ಕೆಲವು ಕಾರ್ಪೊರೇಟ್ ಕುಳಗಳು ಮಾತ್ರ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News