×
Ad

ಲಂಚ ಸ್ವೀಕಾರ ಆರೋಪ ಸಾಬೀತು: ಮಹಿಳಾ ಪೊಲೀಸ್ ಅಧಿಕಾರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

Update: 2020-12-09 15:37 IST

ಕಲಬುರಗಿ, ಡಿ.9: ಲಂಚ ಸ್ವೀಕಾರ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಲಬುರಗಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್ ಇ ಸೆಲ್)ದಲ್ಲಿ ಡಿವೈಎಸ್ಪಿಯಾಗಿರುವ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ವಿಜಯಲಕ್ಷ್ಮೀ ಶಿಕ್ಷೆಗೆ ಗುರಿಯಾದವರು. ಇವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ಜಿಲ್ಲಾ ವಿಶೇಷ ಸತ್ರ ನ್ಯಾಯಾಧೀಶ ಸತೀಶ್ ಸಿಂಗ್ ಆದೇಶಿಸಿದ್ದಾರೆ.

 ಶಹಾಬಾದ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ವೇಳೆ ನಡೆದ ಲಂಚ ಸ್ವೀಕಾರ ಪ್ರಕರಣದಲ್ಲಿ ವಿಜಯಲಕ್ಷ್ಮೀ ಅವರಿಗೆ ಈ ಶಿಕ್ಷೆ ಆಗಿದೆ. ಸದ್ಯ ಅವರು ಕಲಬುರಗಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್ಇ ಸೆಲ್)ದಲ್ಲಿ ಡಿವೈಎಸ್ಪಿಯಾಗಿದ್ದಾರೆ.

  ಪ್ರಕರಣದ ಹಿನ್ನೆಲೆ: 2015ರ ಡಿಸೆಂಬರ್ನಲ್ಲಿ ದೇವನ ತೆಗನೂರಿನ ಪೆಟ್ರೋಲ್ ಬಂಕ್ ನಲ್ಲಿ ವಾಹನಕ್ಕೆ ಡೀಸೆಲ್ ಹಾಕಿಸಲು ತೆರಳಿದಾಗ ಸಿಬ್ಬಂದಿ ಜತೆ ಜಗಳವಾಡಿದ್ದ ಆರೋಪದಲ್ಲಿ ರಾಜು ಎಂಬುವರ ವಿರುದ್ಧ ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜುನನ್ನು ಬಂಧಿಸಿ ಅವರ ವಾಹನವನ್ನು ಜಪ್ತಿ ಮಾಡಲಾಗಿತ್ತು. ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ವಾಹನ ಬಿಡಿಸಿಕೊಳ್ಳಲು ಶಹಾಬಾದ್ ಠಾಣೆಗೆ ರಾಜು ಬಂದಿದ್ದಾಗ ವಿಜಯಲಕ್ಷ್ಮೀ 25 ಸಾವಿರ ರೂ. ಬೇಡಿಕೆಯಿಟ್ಟಿದ್ದರೆನ್ನಲಾಗಿತ್ತು. ಈ ವೇಳೆ ಲೋಕಾಯುಕ್ತರು ದಾಳಿ ನಡೆಸಿದಾಗ ಹಣದ ಸಮೇತ ವಿಜಯಲಕ್ಷ್ಮೀ ಸಿಕ್ಕಿಬಿದ್ದಿದ್ದರು.

ಕಲಬುರಗಿ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಲೋಕಾಯುಕ್ತರ ಪರ ಸರಕಾರಿ ಅಭಿಯೋಜಕ ಅಶೋಕ ಚಾಂದಕವಟೆ ವಾದ ಮಂಡಿಸಿದ್ದರು. ನ್ಯಾಯಾಧೀಶರು ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಡಿವೈಎಸ್ಪಿ ವಿಜಯಲಕ್ಷ್ಮೀ ಅವರನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಕೇಂದ್ರ ಕಾರಾಗೃಹಕ್ಕೆ ಕಳುಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News