ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ ಜೀವಿಜಯ
ಮಡಿಕೇರಿ, ಡಿ.9: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮಾಜಿ ಸಚಿವ ಬಿ. ಎ. ಜೀವಿಜಯ ಅವರು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪಕ್ಷದ ಧ್ವಜ ನೀಡಿ ಬಿ. ಎ. ಜೀವಿಜಯ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭ ಡಿ.ಕೆ. ಶಿವಕುಮಾರ್ ಮಾತನಾಡಿ, ಜೀವಿಜಯ ಅವರ ಸೇರ್ಪಡೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲವರ್ಧನೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಜೀವಿಜಯ ಮಾತನಾಡಿ, ಮುಂಬರುವ ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಗೆಲ್ಲಿಸಿಕೊಡಬೇಕೆಂದು ಕರೆ ನೀಡಿದರು.
ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ಝಮೀರ್ ಅಹ್ಮದ್‍ಖಾನ್, ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ, ಕೆಪಿಸಿಸಿ ವಕ್ತಾರರು ಹಾಗೂ ಕಾನೂನು ಘಟಕದ ಮುಖ್ಯಸ್ಥ ಎ.ಎಸ್. ಪೊನ್ನಣ್ಣ, ಕೆಪಿಸಿಸಿ ವಕ್ತಾರ ಹೆಚ್. ಎಸ್. ಚಂದ್ರಮೌಳಿ, ಶಾಸಕ ಟಿ.ಡಿ ರಾಜೇಗೌಡ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಕೆ. ಮಂಜುನಾಥ್ ಕುಮಾರ್, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಕೊಡಗು ಜಿಲ್ಲಾ ವೀಕ್ಷಕರಾದ ಮಂಜುಳಾ ರಾಜ್, ಟಿ.ಎಂ ಶಹೀದ್, ಕೊಡಗು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಉಸ್ಮಾನ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್, ಕುಶಾಲನಗರ ಬ್ಲಾಕ್ ಅಧ್ಯಕ್ಷ ಅನಂತ ಕುಮಾರ್, ಡಿಸಿಸಿ ಸದಸ್ಯ ಕೆ.ಎಂ. ಲೋಕೇಶ್ ಹಾಗೂ ಮತ್ತಿತರ ಪ್ರಮುಖರು ಇದ್ದರು.