×
Ad

ಪ್ರತಿಪಕ್ಷಗಳ ವಿರೋಧದ ನಡುವೆ ಗೋಹತ್ಯೆ ನಿಷೇಧ ವಿಧೇಯಕ ಮಂಡನೆ

Update: 2020-12-09 16:47 IST

ಬೆಂಗಳೂರು, ಡಿ.9: ಕಾಂಗ್ರೆಸ್, ಜೆಡಿಎಸ್ ಸದಸ್ಯರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರಕಾರವು ಬುಧವಾರ ವಿಧಾನಸಭೆಯಲ್ಲಿ 2020ನೆ ಸಾಲಿನ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಮಂಡಿಸಿತು.

ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ರನ್ನು ವಿಧೇಯಕ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಹ್ವಾನಿಸುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಸದನ ಕಲಾಪ ಸಲಹಾ ಸಮಿತಿಯಲ್ಲಿ ಕೇವಲ ಆಧ್ಯಾದೇಶಗಳಿಗ ಸಂಬಂಧಿಸಿದ ವಿಧೇಯಕಗಳನ್ನು ಮಾತ್ರ ಮಂಡನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಈಗ ಏಕಾಏಕಿ ಹೊಸ ವಿಧೇಯಕವನ್ನು ಮಂಡನೆ ಮಾಡಲು ಅವಕಾಶ ನೀಡುತ್ತಿರುವುದು ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಕಾಗೇರಿ, ಆಧ್ಯಾದೇಶ ಸೇರಿದಂತೆ ಯಾವುದಾದರೂ ಮಹತ್ವದ ವಿಧೇಯಕ ಇದ್ದರೆ ಇವತ್ತು ಹಾಗೂ ನಾಳೆ ಮಂಡಿಸಬಹುದು ಎಂದು ಚರ್ಚೆಯಾಗಿದೆ. ಆದುದರಿಂದ, ಈ ವಿಧೇಯಕ ಮಂಡನೆಗೆ ಅವಕಾಶ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಸರಕಾರದ ಧೋರಣೆಯನ್ನು ಖಂಡಿಸಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಎದುರಿನ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು. ವಿಪಕ್ಷಗಳು ಸರಕಾರದ ವಿರುದ್ಧ ಹಾಗೂ ಆಡಳಿತ ಪಕ್ಷದ ಸದಸ್ಯರು ವಿಪಕ್ಷದ ಸದಸ್ಯರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಈ ಗದ್ದಲದ ವಾತಾವರಣದಲ್ಲಿಯೇ ಪ್ರಭು ಚವ್ಹಾಣ್ ವಿಧೇಯಕವನ್ನು ಮಂಡನೆ ಮಾಡಿದರು.

ಆನಂತರ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಂಡನೆ ಮಾಡಿದ 2020ನೆ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಮತ್ತು ಕೆಲವು ಇತರ ಕಾನೂನು(ಎರಡನೆ ತಿದ್ದುಪಡಿ) ವಿಧೇಯಕವು ಯಾವುದೆ ಚರ್ಚೆಯಿಲ್ಲದೆ ಅಂಗೀಕಾರಗೊಂಡಿತು. ಸದನದಲ್ಲಿ ಗದ್ದಲದ ವಾತಾವರಣ ಮುಂದುವರಿದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News