×
Ad

ಬಿಜೆಪಿಯದ್ದು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿರೋಧಿ ಸರಕಾರ: ಡಿ.ಕೆ.ಶಿವಕುಮಾರ್

Update: 2020-12-09 17:04 IST

ಬೆಂಗಳೂರು, ಡಿ.9: ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ರಾಜ್ಯ ಸರಕಾರ ಫ್ಲೈಓವರ್ ಕಾಮಗಾರಿಗೆ ಬಳಸಿರುವುದು ಈ ವರ್ಗದ ಜನರ ಬಗ್ಗೆ ಬಿಜೆಪಿ ಸರಕಾರಕ್ಕಿರುವ ಬದ್ಧತೆಯನ್ನು ತೋರುತ್ತದೆ. ಇದು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿರೋಧಿ ಸರಕಾರವಾಗಿದ್ದು, ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸಚಿವ ಶ್ರೀರಾಮುಲು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇಡಿ ಭಾರತದ ಇತಿಹಾಸದಲ್ಲಿ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸರಕಾರ ಸಂವಿಧಾನಾತ್ಮಕವಾಗಿ ಕಾನೂನು ಜಾರಿಗೆ ತಂದಿದ್ದೆವು. 30 ಸಾವಿರ ಕೋಟಿ ರೂ.ಹಣವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟು ಆ ಹಣವನ್ನು ಅವರಿಗಾಗಿಯೇ ಖರ್ಚು ಮಾಡಲು ನಾವು ಕಾನೂನು ರೂಪಿಸಿದ್ದೆವು ಎಂದರು.

ಕಳೆದ ಬಜೆಟ್ ನಲ್ಲಿ ಇದು 17 ಸಾವಿರ ಕೋಟಿ ರೂ.ಗಳಿಗೆ ಇಳಿದಿತ್ತು. ಆರ್ಥಿಕ ಸಂಪನ್ಮೂಲ ಕೊರತೆ ಪರಿಸ್ಥಿತಿ ಅರಿತು ನಾವು ಈ ಬಗ್ಗೆ ಮಾತನಾಡಿರಲಿಲ್ಲ. ಈಗ 10 ಸಾವಿರ ಕೋಟಿ ರೂ.ಗೆ ಬಂದಿದ್ದು, ಜತೆಗೆ ಆ ಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿದೆ. ಇದು ಬಿಜೆಪಿಯು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ವಿಚಾರವಾಗಿ ಬದ್ಧತೆ ಹೊಂದಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಶಿವಕುಮಾರ್ ಟೀಕಿಸಿದರು.

ಕಾರಜೋಳ ಹಾಗೂ ಶ್ರೀರಾಮುಲು ಅವರಿಗೆ ಸ್ವಾಭಿಮಾನ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಕಾರಜೋಳ ಅವರು ಉಪಮುಖ್ಯಮಂತ್ರಿಯಾಗಿ ಅವರ ಧ್ವನಿ ಕಳೆದುಕೊಂಡಿದ್ದಾರೆ. ಬಿಜೆಪಿಯ ದಲಿತ ವಿರೋಧಿ ನೀತಿಯನ್ನು ಇವರಿಂದ ತಡೆಯಲು ಸಾಧ್ಯವಾಗಿಲ್ಲ. ಈ ಇಬ್ಬರ ಸಮ್ಮತಿ ಇಲ್ಲದೆ ಈ ಇಲಾಖೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಇದು ದಲಿತ ವಿರೋಧಿ ಸರಕಾರವಾಗಿದ್ದು, ಇದು ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ಅವರು ಹೇಳಿದರು.

ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯ: ಈ ಭಾಗದಲ್ಲಿ ಕಾಂಗ್ರೆಸ್ ಶಾಸಕರು ಹೆಚ್ಚಾಗಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕಕ್ಕೆ ನಿಗದಿ ಮಾಡಿರುವ 1500 ಕೋಟಿ ರೂ.ಹಣ ಬಿಡುಗಡೆ ಮಾಡಿದರೆ ನಮ್ಮ ಶಾಸಕರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಬಿಜೆಪಿ ಸರಕಾರ ಈ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಶಿವಕುಮಾರ್ ಕಿಡಿಗಾರಿದರು.

ಪ್ರಧಾನಿ, ಮುಖ್ಯಮಂತ್ರಿ ಮಾಡಿದ್ದೇ ನಮ್ಮ ಶಾಲು: ಕಾಂಗ್ರೆಸ್ ಪಕ್ಷದ ಶಾಲಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಪಾಪ ಏನು ಮಾಡ್ತೀರಿ. ಜೆಡಿಎಸ್ ನಾಯಕರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದ್ದು, ಇದೇ ಶಾಲು. ಕುಮಾರಸ್ವಾಮಿ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿದ್ದು ಕೂಡ ಇದೇ ಶಾಲು. ಈಗ ಅವರು ಅದೇ ಶಾಲಿನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದರೆ, ಇದರ ಬಗ್ಗೆ ರಾಜ್ಯದ ಜನತೆ ತೀರ್ಮಾನ ಮಾಡಲಿ' ಎಂದು ತಿರುಗೇಟು ನೀಡಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿರುವ ಬಗ್ಗೆ ಅವರನ್ನೇ ಕೇಳಬೇಕು. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನೇನು ಹೇಳಲಿ?' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News