ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಪಟ್ಟು: ಮೇಲ್ಮನೆಯಲ್ಲಿ ಕೋಲಾಹಲ

Update: 2020-12-09 12:21 GMT

ಬೆಂಗಳೂರು, ಡಿ.9: ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವು ಬುಧವಾರ ಮೇಲ್ಮನೆಯ ಕಲಾಪದಲ್ಲಿ ಕೋಲಾಹಲ ಎಬ್ಬಿಸಿತು. ಇದರಿಂದ ಒಂದು ಗಂಟೆ ಕಾಲ ಸಭೆಯನ್ನು ಮುಂದೂಡಲಾಯಿತು.

ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಶಾಸನ ರಚನೆ ಕಲಾಪವನ್ನು ಕೈಗೆತ್ತಿಕೊಂಡಾಗ ಬಿಜೆಪಿಯ ಸದಸ್ಯ ಆಯನೂರು ಮಂಜುನಾಥ್, ತಾವೂ ಸೇರಿ ಹನ್ನೊಂದು ಜನ ಸದಸ್ಯರೊಂದಿಗೆ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಂಬಂಧ ನೋಟಿಸ್ ನೀಡಲಾಗಿದೆ. ಅದನ್ನು ಕೈಗೆತ್ತಿಕೊಳ್ಳಬೇಕು ಎಂದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, ಅವಿಶ್ವಾಸ ಮಂಡಿಸುವ ಸಂಬಂಧ ನೋಟಿಸ್ ನೀಡಿ ಇನ್ನು 14 ದಿನಗಳು ಕಳೆದಿಲ್ಲ. ಹೀಗಾಗಿ, ಇದಕ್ಕೆ ಅವಕಾಶ ನೀಡಬಾರದು ಎಂದು ಪಟ್ಟುಹಿಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಸದನದ ನಿಯಮಾವಳಿಯಂತೆ 14 ದಿನಗಳು ಪೂರ್ತಿಗೊಂಡಿಲ್ಲ. ಹೀಗಾಗಿ, ಅವಿಶ್ವಾಸ ನಿರ್ಣಯ ಚರ್ಚೆಗೆ ಅವಕಾಶ ನೀಡಲಾಗಲ್ಲ. ಅಲ್ಲದೆ, ಸದನದ ವೇಳಾಪಟ್ಟಿಯಲ್ಲಿಯೂ ಈ ವಿಷಯ ಸೇರ್ಪಡೆಗೊಂಡಿಲ್ಲ ಎಂದರು. ಕಾನೂನು ತಜ್ಞರ ಸಲಹೆಯನ್ನು ಪಡೆದು, ದಿನಾಂಕ ನಿಗದಿ ಮಾಡಿ ಚರ್ಚೆಗೆ ಅವಕಾಶ ನೀಡಲಾಗುತ್ತದೆ ಎಂದರು.

ಅವಿಶ್ವಾಸ ನಿರ್ಣಯ ಮಂಡಿಸುವಂತೆ ನಾವು ನ.25ಕ್ಕೆ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಲಾಗಿದೆ. ಆದುದರಿಂದ, ನಾವು ನಿಯಮಾವಳಿ ಪ್ರಕಾರವೇ ನಿರ್ಣಯ ಮಂಡಿಸಲು ಅವಕಾಶವಿದ್ದು, ಚರ್ಚೆಗೆ ಕಾಲಾವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಇತರೆ ಆಡಳಿತ ಪಕ್ಷದ ಸದಸ್ಯರೂ ಧ್ವನಿಗೂಡಿಸಿದರು.

ಬಿಜೆಪಿ ಸದಸ್ಯರು ಕಾಲಾವಧಿ ಮುಗಿದಿದೆ, ಚರ್ಚೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದಾಗ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು. ಎರಡು ಕಡೆಯ ಸದಸ್ಯರು ಪರಿಷತ್‍ನ ಕಾರ್ಯಕಲಾಪ ನಿಯಮಗಳನ್ನು ಉಲ್ಲೇಖಿಸಿ ತಮ್ಮದೇ ವಾದ ಮಂಡಿಸಿದರು. ಒಂದು ಹಂತದಲ್ಲಿ ಸದಸ್ಯರ ಮಾತುಗಳು ಕಡತಕ್ಕೆ ಹೋಗುವುದಿಲ್ಲ ಎಂದು ಸಭಾಪತಿ ಅವರು ರೂಲಿಂಗ್ ನೀಡಿದರು.

ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ನಿಯಮದ ಪ್ರಕಾರ ನೋಟಿಸ್ ನೀಡಿದ 14 ದಿನಗಳು ಪೂರ್ಣಗೊಂಡ ನಂತರವೇ ಇದಕ್ಕೆ ಅವಕಾಶ ನೀಡಬಹುದು ಎಂದು ಸ್ಪಷ್ಟಪಡಿಸಿದರು. ಪ್ರತಿಪಕ್ಷ ನಾಯಕರು ಸೇರಿ, ಇತರ ಸದಸ್ಯರು ದನಿಗೂಡಿಸಿದರು. ಮಧ್ಯಪ್ರವೇಶಿಸಿದ ಸಭಾಪತಿಗಳು, ನಿಯಮ 165(2)ರಡಿ ಕಲಾಪ ಪಟ್ಟಿಯಲ್ಲಿ ಇಲ್ಲದಿರುವ ವಿಷಯವನ್ನು ಮಧ್ಯೆ ಸೇರಿಸಲು ಬರುವುದಿಲ್ಲ. ಅಷ್ಟೇ ಅಲ್ಲ, ಇದನ್ನು ಕೈಗೆತ್ತಿಕೊಳ್ಳುವುದು ನನ್ನ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.

ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ನೆರೆ, ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಬಿಜೆಪಿ ಸದಸ್ಯರಿಗೆ ಕಾಳಜಿಯಿಲ್ಲ. ಕೇವಲ ಅಧಿಕಾರಕ್ಕಾಗಿ ಕಾಯುತ್ತಿರುತ್ತಾರೆ ಎಂದು ವಿರೋಧ ಪಕ್ಷದ ಸದಸ್ಯರು ಆಕ್ಷೇಪಿಸಿದರು. ಈ ವೇಳೆ ಜೆಡಿಎಸ್ ಸದಸ್ಯರು ಯಾರ ಕಡೆಯೂ ಮಾತನಾಡದೆ ಮೌನಕ್ಕೆ ಶರಣಾಗಿದ್ದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸದನದ ನಿಯಮಾವಳಿಗಳ ಪ್ರಕಾರ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ನೀಡಬೇಕೆಂದು ವಾದಿಸಿದರು. ಈ ವೇಳೆ ಮತ್ತೊಂದು ಬಾರಿ ಸ್ಪಷ್ಟಪಡಿಸಿದ ಸಭಾಪತಿ, ಈ ವಿಷಯದಲ್ಲಿ ಅನುಮಾನಗಳಿದ್ದು, ಕಾನೂನು ತಜ್ಞರೊಂದಿಗೆ ಸಲಹೆ ಪಡೆಯದ ಹೊರತು ಚರ್ಚೆಗೆ ಸಮಯ ನಿಗದಿ ಮಾಡಲಾಗದು. ನೀವು ಅದುವರೆಗೂ ಒತ್ತಡ ತಂದರೂ ಪ್ರಯೋಜನವಿಲ್ಲ. ಇದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ ಎಂದು ತಿಳಿಸಿದರು. ಆಗಲೂ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲ ಮುಂದುವರಿದಾಗ ಸಭಾಪತಿ ಅವರು ಕಲಾಪವನ್ನು ಒಂದು ಗಂಟೆ ಕಾಲ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News