ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿವಮೊಗ್ಗಕ್ಕೆ ಭೇಟಿ ಸಾಧ್ಯತೆ
ಶಿವಮೊಗ್ಗ, ಡಿ.09: ಕೇಂದ್ರ ಗೃಹ ಸಚಿವಾಲಯದಡಿ ಬರುವ ರ್‍ಯಾಪಿಡ್ ಆಕ್ಷನ್ ಪೋರ್ಸ್ ಉಕ್ಕಿನ ನಗರಿ ಭದ್ರಾವತಿಯಲ್ಲಿ ಸ್ಥಾಪನೆಯಾಗಲಿದೆ. ಇದರ ಶಂಕುಸ್ಥಾಪನೆ ನೆರವೇರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿವಮೊಗ್ಗ ನಗರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವಾಲಯದಡಿ ಬರುವ ರ್‍ಯಾಪಿಡ್ ಆಕ್ಷನ್ ಪೋರ್ಸ್ ಉಕ್ಕಿನ ನಗರಿ ಭದ್ರಾವತಿಯಲ್ಲಿ ಸ್ಥಾಪನೆಯಾಗಲಿದೆ. ಭದ್ರಾವತಿ ತಾಲೂಕು ಬುಳ್ಳಾಪುರ ಗ್ರಾಮದಲ್ಲಿ ಇದಕ್ಕಾಗಿ 50 ಎಕರೆ ಭೂಮಿ ಕೂಡ ಮಂಜೂರಾಗಿದೆ. ಇದರ ಶಂಕುಸ್ಥಾಪನೆ ನೆರವೇರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಭದ್ರಾವತಿಯಲ್ಲಿ ಸ್ಥಾಪನೆಯಾಗಲಿರುವ ಆರ್‌ಎಎಫ್ ಪಡೆ ಕರ್ನಾಟಕ, ಗೋವಾ, ಕೇರಳ ಮತ್ತು ಲಕ್ಷದೀಪ ಸೇರಿದಂತೆ ನಾಲ್ಕು ರಾಜ್ಯಗಳ 38 ಜಿಲ್ಲೆಗಳ ಕಾರ್ಯ ವ್ಯಾಪ್ತಿಗೊಳಪಡಲಿದೆ. ಸುಮಾರು 97 ಕಮಾಂಡೆಂಟ್‌ಗಳು ಸೇರಿ 2000 ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲಿ ಹೊಸದೊಂದು ಟೌನ್ ಶಿಪ್ ನಿರ್ಮಾಣ ಗೊಳ್ಳಲಿದೆ. ನಗರದಲ್ಲಿ ವಿಮಾನ ನಿಲ್ದಾಣಗೊಳ್ಳುತ್ತಿರುವುದರಿಂದ ಈ ಸೌಲಭ್ಯ ಶಿವಮೊಗ್ಗಕ್ಕೆ ದೊರೆಯುತ್ತಿದೆ ಎಂದರು.