ಪ್ರತಿಪಕ್ಷಗಳ ಧರಣಿಯ ನಡುವೆ ಗೋಹತ್ಯೆ ನಿಷೇಧ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ
ಬೆಂಗಳೂರು, ಡಿ.9: 2020ನೆ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ(ಗೋಹತ್ಯೆ ನಿಷೇಧ ಮಸೂದೆ)ಕ್ಕೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿಯ ನಡುವೆಯೇ ಬುಧವಾರ ಅಂಗೀಕಾರ ಸಿಕ್ಕಿತು.
ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮಂಡಿಸಿದ ವಿಧೇಯಕವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪರ್ಯಾಲೋಚಿಸುವಂತೆ ಸೂಚಿದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಧರಣಿಯನ್ನು ಮುಂದುವರಿಸಿದರು. ಸರಕಾರ ಈಗ ವಿಧೇಯಕದ ಪ್ರತಿಯನ್ನು ನೀಡಿದ ನಾವು ಅದನ್ನು ಓದಬೇಕು. ಚರ್ಚೆಯಲ್ಲಿ ಪಾಲ್ಗೊಳ್ಳಲು ನಾವು ಸಿದ್ಧವಾಗಿದ್ದೇವೆ. ಆದುದರಿಂದ, ನಾಳೆ ಬೆಳಗ್ಗೆ ಈ ವಿಧೇಯಕದ ಬಗ್ಗೆ ಚರ್ಚೆ ನಡೆಸೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ಬಂದ ತಕ್ಷಣ ದೇಶದಲ್ಲಿ ಏನು ಪ್ರಳಯ ಆಗುವುದಿಲ್ಲ. ವಿಧೇಯಕದ ಬಗ್ಗೆ ಚರ್ಚೆಗೆ ನಾವು ಸಿದ್ಧವಿದ್ದೇವೆ ಎಂದು ಹೇಳಿದರೂ ಅವಕಾಶ ನೀಡದೆ ಹೋದರೆ ಈ ಸದನದ ಪಾವಿತ್ರ್ಯತೆ ಹೋಗುತ್ತದೆ. ಸದನ ಕಲಾಪ ಸಲಹಾ ಸಮಿತಿ ಸಭೆಯನ್ನು ನಿಮ್ಮ ಅಧ್ಯಕ್ಷತೆ(ಸ್ಪೀಕರ್)ಯಲ್ಲಿ ಕರೆಯುವುದು ಏಕೆ? ನಮ್ಮನ್ನು ಆ ಸಭೆಗೆ ಆಹ್ವಾನಿಸುವುದು ಏಕೆ? ನಿನ್ನೆ ನಡೆದ ಸಭೆಯಲ್ಲಿ ಸಂಸದೀಯ ಕಾರ್ಯದರ್ಶಿಗಳ ನೇಮಕದ ವಿಧೇಯಕ ಹಿಂಪಡೆಯುವುದು ಹಾಗೂ ವಿಶ್ವವಿದ್ಯಾಲಯಗಳ ವಿಧೇಯಕ ಮಂಡನೆ ಮತ್ತು ಆಧ್ಯಾದೇಶಗಳಿಗೆ ಸಂಬಂಧಿಸಿದ ವಿಧೇಯಕಗಳನ್ನು ತರುವುದಷ್ಟೇ ಚರ್ಚೆಯಾಗಿದ್ದು ಎಂದು ಸಿದ್ದರಾಮಯ್ಯ ಹೇಳಿದರು.
ತರಾತುರಿಯಲ್ಲಿ ಅಜೆಂಡಾದಲ್ಲಿ ಇರದಿದ್ದರೂ ಈ ವಿಧೇಯಕವನ್ನು ತಂದಿದ್ದು ಏಕೆ? ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಈ ವಿಧೇಯಕವನ್ನು ಮಂಡನೆ ಮಾಡುವ ವೇಳೆ ಅವರ ಬಳಿ ವಿಧೇಯಕದ ಪ್ರತಿಯೂ ಇರಲಿಲ್ಲ. ಈ ವಿಧೇಯಕ ತರದಂತೆ ನಾವೇನಾದರೂ ಸರಕಾರದ ಕೈ ಹಿಡಿದಿದ್ದೇವಾ? ಚರ್ಚೆ ಮಾಡಲ್ಲ ಎಂದು ಹೇಳಿದ್ದೇವಾ? ಕಳ್ಳತನದಿಂದ, ಹಿಂಬಾಗಿಲ ಮೂಲಕ ಈ ವಿಧೇಯಕ ಜಾರಿಗೆ ತರಲು ಮುಂದಾಗಿರುವುದು ಏಕೆ? ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ದುರುದ್ದೇಶದಿಂದ ಈ ವಿಧೇಯಕ ತಂದಿದ್ದಾರೆ. ನೀವು ಗೋಮಾತೆಯ ಮೇಲೆ ಪ್ರಮಾಣ ಮಾಡಿ ಹೇಳಿ ಸಚಿವರ ಬಳಿ ಆ ವಿಧೇಯಕದ ಪ್ರತಿ ಇತ್ತೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಆಡಳಿತ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಮಧ್ಯಪ್ರವೇಶಿಸಿ, 2012ರಲ್ಲಿ ನಾವು ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಮಸೂದೆಯನ್ನು ಸಿದ್ದರಾಮಯ್ಯ ಸರಕಾರ ಇದ್ದಾಗ ಹಿಂಪಡೆಯುವಾಗ ಅದನ್ನು ಅಜೆಂಡಾದಲ್ಲಿ ಸೇರಿಸಿದ್ರಾ? ಚರ್ಚೆಗೆ ಅವಕಾಶ ಕೊಟ್ಟಿದ್ರಾ? ನಾವು ಧರಣಿಯಲ್ಲಿ ಇರುವಾಗಲೆ ಅದನ್ನು ಹಿಂಪಡೆಯಲಾಗಿತ್ತು. ಈಗ ಅಜೆಂಡಾ, ಚರ್ಚೆ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಧೇಯಕದ ಮೇಲೆ ಇವತ್ತೆ ಚರ್ಚೆಯಾಗಲಿ ಎಂದು ಒತ್ತಾಯಿಸಿದರು.
ನಂತರ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬೇಡಿ. ನಾವು ಚರ್ಚೆಗೆ ಸಿದ್ಧವಾಗಿದ್ದರೂ ಸರಕಾರ ವಿಧೇಯಕವನ್ನು ಅಂಗೀಕಾರ ಪಡೆದುಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದರು.
ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, 1964ರಿಂದಲೂ ನಮ್ಮ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದೆ. ಈಗ ಅದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುತ್ತಿದ್ದೇವೆ ಅಷ್ಟೇ. ಅಂತರ್‍ರಾಜ್ಯ ನಿರ್ಬಂಧ, ಜಾನುವಾರುಗಳ ಖರೀದಿಗೆ ಪರವಾನಿಗೆ ಪಡೆಯುವುದು, ಅಕ್ರಮವಾಗಿ ಸಾಗಾಟ ಮಾಡಿದರೆ ಅದನ್ನು ಅಪರಾಧವೆಂದು ಪರಿಗಣಿಸುವುದು, ಶಿಕ್ಷೆ ಹಾಗೂ ದಂಡಕ್ಕೆ ಅವಕಾಶ ಕಲ್ಪಿಸಿದ್ದೇವೆ ಎಂದರು.
ಕೊನೆಗೆ ಗದ್ದಲದ ನಡುವೆಯೇ ವಿಧೇಯಕಕ್ಕೆ ಅನುಮೋದನೆ ಸಿಕ್ಕಿತು.
ಗೋಹತ್ಯೆ ನಿಷೇಧ ಕುರಿತ ರೈತರ ಮನವಿ ಮತ್ತು ಸಾಮಾಜಿಕ ಜಾಲತಾಣದಲ್ಲಿನ ದನಿಯನ್ನು ಮನಗಂಡ ಬಿಜೆಪಿ ಕೆಲವು ದಶಕಗಳಿಂದ ಗೋಹತ್ಯೆ ನಿಷೇಧದ ಆಂದೋಲನವನ್ನು ನಡೆಸುತ್ತಾ ಬಂದಿದೆ. ಈ ನಿರ್ಧಾರವನ್ನು ರಾಜ್ಯ ಸರಕಾರ ತ್ವರಿತವಾಗಿ ಅನುಷ್ಠಾನಕ್ಕೆ ತರಲಿದ್ದು, ರೈತರ ಭಯ, ಆತಂಕವನ್ನು ದೂರ ಮಾಡಲಿದೆ. ಗೋಹತ್ಯೆ ನಿಷೇಧಕ್ಕೆ ಕಠಿಣ ಕಾಯ್ದೆ ರೂಪಿಸಿ ವಿಧಾನಸಭೆಯಲ್ಲಿ ಅಂಗೀಕರಿಸಿದ ರಾಜ್ಯದ ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತುಂಬುಹೃದಯದ ಅಭಿನಂದನೆಗಳು.
-ನಳೀನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ