ಕಾಂಗ್ರೆಸ್ ಸಭಾತ್ಯಾಗದ ನಡುವೆ ವಿಧಾನಸಭೆಯಲ್ಲಿ ಭೂಸುಧಾರಣೆ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ
ಬೆಂಗಳೂರು, ಡಿ. 9: ವಿಧಾನ ಪರಿಷತ್ತಿನಲ್ಲಿ ಕೆಲ ತಿದ್ದುಪಡಿಗಳೊಂದಿಗೆ ಅಂಗೀಕಾರಗೊಂಡಿದ್ದ 2020ನೇ ಸಾಲಿನ ಕರ್ನಾಟಕ ಭೂ ಸುಧಾರಣಾ(ಎರಡನೇ ತಿದ್ದುಪಡಿ) ವಿಧೇಯಕ' ಕಾಂಗ್ರೆಸ್ ಪಕ್ಷದ ಸದಸ್ಯರ ತೀವ್ರ ವಿರೋಧ ಮತ್ತು ಸಭಾತ್ಯಾಗದ ಮಧ್ಯೆ ವಿಧಾನಸಭೆಯಲ್ಲಿ ಅನುಮೋದನೆಗೊಂಡಿದೆ.
ಬುಧವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ಕಂದಾಯ ಸಚಿವ ಆರ್. ಅಶೋಕ್ ವಿಧೇಯಕವನ್ನು ಮಂಡಿಸಿ ಅನುಮೋದನೆಗೆ ಕೋರಿದರು. ಈ ವೇಳೆ ‘ಹೊರ ರಾಜ್ಯದವರಿಗೆ ಹಾಗೂ ಕಂಪೆನಿಗಳಿಗೆ ಭೂಮಿ ಖರೀದಿಗೆ ಅವಕಾಶ ಕಲ್ಪಿಸಬಾರದು’ ಎಂಬ ತಿದ್ದುಪಡಿಯನ್ನು ಸೇರಿಸಬೇಕು ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್ ಆಗ್ರಹಿಸಿದರು.
ಇದಕ್ಕೆ ಸರಕಾರ ಒಪ್ಪದ ಹಿನ್ನೆಲೆಯಲ್ಲಿ ಆಕ್ರೋಶಿತರಾದ ಎಚ್.ಕೆ.ಪಾಟೀಲ್, ಅಂಬಾನಿ, ಅದಾನಿಗೆ, ಕಾರ್ಪೊರೇಟ್ ಕಂಪೆನಿಗಳಿಗೆ ರೈತರ ಕೃಷಿ ಭೂಮಿ ಖರೀದಿಗೆ ಅವಕಾಶ ಕಲ್ಪಿಸುವ ವಿಧೇಯಕ ಅನುಮೋದನೆ ನೀಡುವುದು ಸರಿಯಲ್ಲ. ಈ ಸದನ ಅವಕಾಶ ನೀಡಬಾರದು, ಈ ತಿದ್ದುಪಡಿಯನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಧ್ವನಿಗೂಡಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, 2015ರಲ್ಲಿ ರೈತರ ಭೂ ಪರಿವರ್ತನೆಗೆ ಅವಕಾಶ ನೀಡುವ ಕಾಯ್ದೆಯನ್ನು ಜಾರಿಗೆ ತಂದ ನಿಮಗೆ ಮಾತನಾಡುವ ನೈತಿಕತೆ ಇಲ್ಲ. ಸಂವಿಧಾನ ಬಾಹಿರವಾಗಿ ಹೊರ ರಾಜ್ಯದವರು ಭೂಮಿ ಖರೀದಿ ಮಾಡಲು ಅವಕಾಶ ನೀಡಬೇಡಿ ಎಂದು ತಿದ್ದುಪಡಿ ತರಲು ಸೂಚನೆ ನೀಡುತ್ತಿದ್ದೀರಿ, ಇದು ಹೇಗೆ ಸಾಧ್ಯ? ಎಂದು ಕೆಣಕಿದರು.
ಈ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೇರಿ, ವಿಧಾನಸಭೆ ನಿಯಮಾವಳಿ ಪ್ರಕಾರ ಮೇಲ್ಮನೆಯಲ್ಲಿ ಅಂಗೀಕಾರಗೊಂಡ ವಿಧೇಯಕ ಮತ್ತೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದು ಎಚ್.ಕೆ.ಪಾಟೀಲ್ ಮನವಿಯನ್ನು ತಿರಸ್ಕಾರ ಮಾಡಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕೈಗಾರಿಕೆ, ಕಾರ್ಪೊರೇಟ್‍ಗಳಿಗೆ ಕೃಷಿ ಭೂಮಿ ನೀಡಲು ಮುಂದಾಗಿರುವ ಸರಕಾರ ರೈತ ವಿರೋಧಿ. ರೈತರನ್ನು ನಿರ್ಗತಿಕರನ್ನಾಗಿ ಮಾಡುವ ಮೂಲಕ ಈ ಸರಕಾರ ಶ್ರೀಮಂತರಿಗೆ ಮಣೆ ಹಾಕುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ. ಹೀಗಾಗಿ ಕರ್ನಾಟಕ ಭೂ ಸುಧಾರಣೆ(ಎರಡನೇ ತಿದ್ದುಪಡಿ) ವಿಧೇಯಕವನ್ನು ವಿರೋಧಿಸಿ ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಪ್ರಕಟಿಸಿ ಕಾಂಗ್ರೆಸ್ ಸದಸ್ಯರೊಂದಿಗೆ ಹೊರ ನಡೆದರು. ಕಾಂಗ್ರೆಸ್ ಸದಸ್ಯರ ಅನುಪಸ್ಥಿತಿಯಲ್ಲಿ ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.