×
Ad

ವಿಧಾನಸಭೆಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿ, ಕೇಸರಿ ಶಾಲು ಪ್ರದರ್ಶಿಸಿದ ಬಿಜೆಪಿ ಸದಸ್ಯರು

Update: 2020-12-09 19:29 IST

ಬೆಂಗಳೂರು, ಡಿ.9: ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿಯ ನಡುವೆಯೇ ಇಂದು 2020ನೆ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ(ಗೋಹತ್ಯೆ ನಿಷೇಧ ಮಸೂದೆ)ಕ್ಕೆ ಅಂಗೀಕಾರ ಸಿಕ್ಕಿದ್ದು, ಈ ಸಂದರ್ಭ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ ತಾವು ಧರಿಸಿದ್ದ ಕೇಸರಿ ಶಾಲುಗಳನ್ನು ತೆಗೆದು ತಿರುಗಿಸಿದ ಘಟನೆ ನಡೆಯಿತು.

ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಮಂಡಿಸಿದ ವಿಧೇಯಕ ವಿರೋಧಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಧರಣಿ ನಡೆಸಿದರು. ಸರಕಾರ ಈಗ ವಿಧೇಯಕದ ಪ್ರತಿಯನ್ನು ನೀಡಿದ ನಾವು ಅದನ್ನು ಓದಬೇಕು. ಚರ್ಚೆಯಲ್ಲಿ ಪಾಲ್ಗೊಳ್ಳಲು ನಾವು ಸಿದ್ಧವಾಗಿದ್ದೇವೆ. ಆದುದರಿಂದ, ನಾಳೆ ಬೆಳಗ್ಗೆ ಈ ವಿಧೇಯಕದ ಬಗ್ಗೆ ಚರ್ಚೆ ನಡೆಸೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಾವು ಬಹಿರಂಗವಾಗಿಯೆ ಇದ್ದೇವೆ. ಕದ್ದುಮುಚ್ಚಿ ಏನು ಮಾಡುತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಬಿಜೆಪಿ ಸದಸ್ಯರು ಹಿಂದೂ ವಿರೋಧಿ, ಗೋ ವಿರೋಧಿ ಕಾಂಗ್ರೆಸ್, ಬೋಲೋ ಭಾರತ್ ಮಾತಾಕಿ, ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗಿದರು. ಅಲ್ಲದೆ, ತಾವು ಧರಿಸಿದ್ದ ಕೇಸರಿ ಶಾಲುಗಳನ್ನು ತೆಗೆದು ತಿರುಗಿಸಿದರು.

ಆಗ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್ ಕ್ರಿಯಾಲೋಪ ಎತ್ತಿ, ನಿನ್ನೆ ನಾವು ರೈತರ ಭಾರತ್ ಬಂದ್ ಬೆಂಬಲಿಸಿ ಕಪ್ಪು ಪಟ್ಟಿ ಧರಿಸಿಕೊಂಡು ಬಂದಾಗ ಮಾರ್ಷಲ್‍ಗಳು ಅದನ್ನು ತೆಗೆಸಿದರು. ಆದರೆ, ಇವತ್ತು ಆಡಳಿತ ಪಕ್ಷದ ಸದಸ್ಯರಿಗೆ ಕೇಸರಿ ಶಾಲು ಧರಿಸಿಕೊಂಡು ಸದನಕ್ಕೆ ಬರಲು ಅವಕಾಶ ಕಲ್ಪಿಸಿದ್ದು ಹೇಗೆ ಎಂದರು. ಆಗ ಪ್ರತಿಕ್ರಿಯಿಸಿದ ಸ್ಪೀಕರ್, ನಿನ್ನೆ ವಿಪಕ್ಷ ನಾಯಕ ಸಹಿತ ಹಲವು ಸದಸ್ಯರು ಕಪ್ಪು ಪಟ್ಟಿಯನ್ನು ಧರಿಸಿಕೊಂಡೆ ಇದ್ದರು. ಹೀಗಿರುವಾಗ ಕೇಸರಿ ಪಟ್ಟಿಯನ್ನು ಬಿಡಲು ಆಗುವುದಿಲ್ಲವೇ. ಆದುದರಿಂದ ನಿಮ್ಮ ಕ್ರಿಯಾಲೋಪವನ್ನು ತೆಗೆದಿದ್ದೇವೆ ಎಂದರು.

ಆಗ ಮಧ್ಯಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಇನ್ನು ಮುಂದೆ ನಿಮ್ಮ ರಾಜಕೀಯ ಭವಿಷ್ಯ ಕಪ್ಪು ಪಟ್ಟಿ, ನಮ್ಮದು ಕೇಸರಿ ಪಟ್ಟಿ ಎಂದರು. ಬಿಜೆಪಿ ಸದಸ್ಯರಾದ ಕೆ.ಜಿ.ಬೋಪಯ್ಯ, ಅರವಿಂದ ಲಿಂಬಾವಳಿ, ಅರಗ ಜ್ಞಾನೇಂದ್ರ ಚರ್ಚೆಯಲ್ಲಿ ಪಾಲ್ಗೊಂಡರು. ಈ ವೇಳೆ ಗದ್ದಲದ ನಡುವೆಯೇ ವಿಧೇಯಕಕ್ಕೆ ಅನುಮೋದನೆ ಸಿಕ್ಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News