×
Ad

ಎಪಿಎಂಸಿ ತಿದ್ದುಪಡಿ ವಿಧೇಯಕಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ

Update: 2020-12-09 21:51 IST

ಬೆಂಗಳೂರು, ಡಿ.9: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ದಿ) ತಿದ್ದುಪಡಿ ವಿಧೇಯಕ-2020ಕ್ಕೆ ವಿಧಾನಪರಿಷತ್‍ನಲ್ಲಿ ಪ್ರತಿಪಕ್ಷಗಳ ಸದಸ್ಯರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು.

ಬುಧವಾರ ಮಧ್ಯಾಹ್ನದ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿ, ರೈತರ ಬೆಳೆಗಳಿಗೆ ಉತ್ತಮ ಬೆಲೆಯನ್ನು ಒದಗಿಸುವ ನಿಟ್ಟಿನಲ್ಲಿ ವಿಧೇಯಕಕ್ಕೆ ಸೂಕ್ತ ತಿದ್ದುಪಡಿ ತರಲಾಗಿದೆ. ಇದನ್ನು ಪರಾಮರ್ಶಿಸಿ ಅಂಗೀಕರಿಸಬೇಕೆಂದು ಸಭಾಪತಿಯಲ್ಲಿ ಮನವಿ ಮಾಡಿದರು.

ಈ ವೇಳೆ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ, ವಿಧೇಯಕದ ಕುರಿತು ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ವಿಧೇಯಕದ ಕುರಿತು ಮಾತನಾಡಿ, ರಾಜ್ಯ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಿಲಯನ್ಸ್ ಒಡೆತನದ ಜಿಯೋ ಮಾರುಕಟ್ಟೆಗೆ ರಾಜ್ಯದ ರೈತರನ್ನು ಸಂಪೂರ್ಣವಾಗಿ ಒತ್ತೆಯಿಡಲಾಗುತ್ತಿದೆ ಎಂದು ಆರೋಪಿಸಿದರು.

ಎಪಿಎಂಸಿ ಎಂಬುದು ರೈತರ ಜೀವನಾಡಿಯಾಗಿದೆ. ಇಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ರೈತರಿಗೆ ಪೂರಕವಾದಂತಹ ರೀತಿಯಲ್ಲಿ ಎಪಿಎಂಸಿ ಮಾರುಕಟ್ಟೆಯನ್ನು ಸಜ್ಜುಗೊಳಿಸಬೇಕಿತ್ತು. ಆದರೆ, ರಾಜ್ಯ ಸರಕಾರ ಎಪಿಎಂಸಿಯಲ್ಲಿರುವ ಲೋಪಗಳನ್ನೇ ನೆಪವಾಗಿಟ್ಟುಕೊಂಡು, ಇಡೀ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನೇ ಸರ್ವನಾಶ ಮಾಡಿ, ಇಡೀ ರಾಜ್ಯದ ಕೃಷಿ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಬಿಟ್ಟುಕೊಡುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನಾನು ಕೃಷಿಕನಾಗಿ ಸಾಕಷ್ಟು ಅನುಭವ ಪಡೆದಿದ್ದೇನೆ. ನಾವು ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಎಪಿಎಂಸಿಗಳಲ್ಲಿ ದಳ್ಳಾಳಿಗಳ ಬಳಿ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿಯನ್ನು ಸ್ವತಃ ಅನುಭವಿಸಿದ್ದೇನೆ. ಇಂತಹ ಸಮಸ್ಯೆಯನ್ನು ದೂರ ಮಾಡುವುದಕ್ಕಾಗಿ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ತರಲಾಗಿದೆ ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ಎಪಿಎಂಸಿಗಳಲ್ಲಿ ಹಿಂದೆಯಿದ್ದ ದಳ್ಳಾಳಿ ವ್ಯವಸ್ಥೆ ಈಗ ಇಲ್ಲ. ಸಾಕಷ್ಟು ಸುಧಾರಣೆ ಕಂಡಿದೆ. ರಾಜ್ಯ ಸರಕಾರ ರೈತರನ್ನು ದಳ್ಳಾಳಿಗಳ ಬದಲಾಗಿ, ಕಾರ್ಪೊರೇಟ್ ಕಂಪೆನಿಗಳ ವಶಕ್ಕೆ ಒಪ್ಪಿಸುತ್ತಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಎಪಿಎಂಸಿ ತಿದ್ದುಪಡಿ ಕಾಯ್ದೆಯ ಮೂಲಕ ಕಾರ್ಪೊರೇಟ್ ಶಕ್ತಿಗಳು ರಾಜ್ಯದ ಕೃಷಿ ವ್ಯವಸ್ಥೆಯನ್ನು ತಮ್ಮ ವಶಕ್ಕೆ ಪಡಿಯಲಿದ್ದಾರೆ. ಇದರಿಂದ ಕೃಷಿ ಪದಾರ್ಥಗಳ ಕೃತಕ ಆಭಾವವನ್ನು ಸೃಷ್ಟಿಸಿ, ತಮಗೆ ಬೇಕಾದ ಸಂದರ್ಭದಲ್ಲಿ ಬೆಲೆಗಳನ್ನು ಏರಿಕೆ, ಇಳಿಕೆ ಮಾಡುತ್ತಾರೆ. ರೈತರು ಕಾರ್ಪೊರೇಟ್ ಕಂಪೆನಿಗಳ ವಂಚನೆಗೆ ಬಲಿಯಾಗುವಂತಹ ಸಂದರ್ಭಗಳು ಹೆಚ್ಚಾಗಲಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ವನಾಶ ಮಾಡುವಂತಹ ಕಾಯ್ದೆಯ ಜಾರಿಗೆ ನನ್ನ ಬೆಂಬಲವಿಲ್ಲವೆಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸದಸ್ಯ ರಮೇಶ್ ಮಾತನಾಡಿ, ಈಗಾಗಲೇ ತುಮಕೂರು ರಸ್ತೆಯಲ್ಲಿ ರಿಲಯನ್ಸ್ ಕಂಪೆನಿ ದೊಡ್ಡ ಮಾಲ್‍ಅನ್ನು ಸ್ಥಾಪಿಸಿದ್ದು, ಆ ಮೂಲಕ ಇಡೀ ರಾಜ್ಯದ ಕೃಷಿ ವ್ಯವಸ್ಥೆಯನ್ನು ತಮ್ಮ ವಶಕ್ಕೆ ಪಡೆಯುವಂತಹ ಎಲ್ಲ ತಯಾರಿಗಳನ್ನು ನಡೆಸಿಕೊಂಡಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ತಂದಿದೆ. ಈ ಕಾಯ್ದೆಯಿಂದ ರೈತರಿಗೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎಂದು ರಾಜ್ಯ ಸರಕಾರ ವಿವರಿಸಬೇಕೆಂದು ಮನವಿ ಮಾಡಿದರು. ಜೆಡಿಎಸ್ ಸದಸ್ಯ ಬೋಜೇಗೌಡ ಸೇರಿದಂತೆ ಹಲವರು ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News