×
Ad

ಲೌಡ್ ಸ್ಪೀಕರ್ ಬಳಕೆ ಕಾನೂನು ಕ್ರಮ ಜರುಗಿಸುವಂಥ ಅಪರಾಧವಲ್ಲ: ಹೈಕೋರ್ಟ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿಕೆ

Update: 2020-12-09 22:33 IST

ಬೆಂಗಳೂರು, ಡಿ.9: ರಾತ್ರಿ ವೇಳೆಯಲ್ಲಿ ಧ್ವನಿವರ್ಧಕ ಬಳಕೆ ಮಾಡುತ್ತಿರುವ ಕುರಿತು ಅಭಿಯೋಜನೆ(ಪ್ರಾಸಿಕ್ಯೂಷನ್)ಗೆ ವರ್ಗಾಯಿಸುವ ಪ್ರಕರಣವಲ್ಲ. ಹೀಗಾಗಿ ಪೊಲೀಸರಿಗೆ ಕ್ರಮ ಜರುಗಿಸಲು ಕೋರಿದ್ದೇವೆ ಎಂದು ಲಿಖಿತ ಹೇಳಿಕೆ ಸಲ್ಲಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.   

ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸುವುದನ್ನು ಪ್ರಶ್ನಿಸಿ ನಗರದ ವಕೀಲೆ ಸುಮಂಗಲ ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಹಿಂದಿನ ವಿಚಾರಣೆ ವೇಳೆ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವವರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಹೈಕೋರ್ಟ್ ಕೆಎಸ್‍ಪಿಸಿಬಿಗೆ ನಿರ್ದೇಶಿಸಿತ್ತು. ಅದರಂತೆ ಮಂಡಳಿ ಅಧ್ಯಕ್ಷರು ಸಲ್ಲಿಸಿದ್ದ ಲಿಖಿತ ಹೇಳಿಕೆ ಗಮನಿಸಿದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಮಂಡಳಿ ಅಧ್ಯಕ್ಷರು ರಾತ್ರಿ ಹೊತ್ತಲ್ಲಿ ಲೌಡ್ ಸ್ಪೀಕರ್ ಬಳಕೆ ಮಾಡುವುದು ಕಾನೂನು ಕ್ರಮ ಜರುಗಿಸುವಂತಹ ಅಪರಾಧವಲ್ಲ ಎಂದಿದ್ದಾರೆ. ಮಂಡಳಿಯ ಜವಾಬ್ದಾರಿ ಹಾಗೂ ಕಾನೂನಿನ ತಿಳುವಳಿಕೆ ಇಲ್ಲದೆ ಹೀಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಮಂಡಳಿ ಅಧ್ಯಕ್ಷರು, ಸದಸ್ಯರು ಸೇರಿ ಅಧಿಕಾರಿಗಳೆಲ್ಲರಿಗೂ ಕಾಯ್ದೆಗಳ ಕುರಿತು ತರಗತಿ ನಡೆಸಿ ತರಬೇತಿ ನೀಡಿ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೇ, ಪರಿಸರ ಸಂರಕ್ಷಣೆಯ ಕಾಯ್ದೆ 15 ಹಾಗೂ 19ರ ಅಡಿ ಮಾಲಿನ್ಯ ಉಂಟುಮಾಡುವವರ ವಿರುದ್ಧ ಕ್ರಮ ಜರುಗಿಸಬಹುದು. ಈ ಅರಿವೇ ಇಲ್ಲದ ಮಂಡಳಿ ಲೌಡ್ ಸ್ಪೀಕರ್ ಬಳಸುತ್ತಿರುವವರ ವಿರುದ್ಧ ಸಿಆರ್‍ಪಿಸಿ ಸೆಕ್ಷನ್ 133 ರಡಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ಕೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಇದೇ ವೇಳೆ ಅರ್ಜಿದಾರ ವಕೀಲೆ ಸುಮಂಗಲ ಸ್ವಾಮಿ ವಾದಿಸಿ, ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಯಲ್ಲಿ ಈಗಲೂ ರಾತ್ರಿ ಹೊತ್ತಲ್ಲಿ ಲೌಡ್ ಸ್ಪೀಕರ್ ಬಳಕೆಯಾಗುತ್ತಿದೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಲೌಡ್ ಸ್ಪೀಕರ್ ಬಳಸುವುದು ಮೂಲಭೂತ ಹಕ್ಕಲ್ಲ. ಪೊಲೀಸರು ಈ ಹಿಂದೆ ನೀಡಿದ್ದ ಲೈಸೆನ್ಸ್ ಹಿಂಪಡೆದಿರುವುದಾಗಿ ಹೇಳಿದ್ದಾರೆ. ಈಗಲೂ ಬಳಕೆ ಮಾಡುತ್ತಿದ್ದರೆ ಆ ಕುರಿತು ಪೊಲೀಸರು ಹಾಗೂ ಕೆಎಸ್‍ಪಿಸಿಬಿ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಡಿ.22ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News