ದೇವೇಗೌಡ, ಕುಮಾರಸ್ವಾಮಿ ಇನ್ನು 'ಮಣ್ಣಿನ ಮಕ್ಕಳು' ಎನ್ನುವುದನ್ನು ನಿಲ್ಲಿಸಲಿ: ಎಲ್.ಹನುಮಂತಯ್ಯ

Update: 2020-12-09 17:33 GMT

ಬೆಂಗಳೂರು, ಡಿ.9: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ತಾವು ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ಬುಧವಾರವೂ ಮುಂದುವರಿದ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾವು ರೈತರ ಮಗ ಎಂದು ಹೇಳುತ್ತಾರೆ. ಅದೇ ರೀತಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಣ್ಣಿನ ಮಗ ಎನ್ನುತ್ತಾರೆ. ಈ ಇಬ್ಬರು ಸೇರಿಕೊಂಡು ರೈತರಿಗೆ ನಾಮ ಹಾಕುವ ಕೆಲಸವನ್ನು ನಿನ್ನೆ ಪರಿಷತ್ತಿನಲ್ಲಿ ಮಾಡಿದ್ದಾರೆ ಎಂದು ದೂರಿದರು.

ಈ ಹಿಂದೆ ಇದೇ ಕಾಯ್ದೆಯನ್ನು ರೈತ ವಿರೋಧಿ ಎಂದು ಜೆಡಿಎಸ್ ಪಕ್ಷ ಹೇಳಿತ್ತು. ಆದರೆ, ನಿನ್ನೆ ಬೆಂಬಲ ಸೂಚಿಸಿದೆ. ಇದರಲ್ಲಿ ಯಾವುದೇ ಅಂಶವೂ ಬದಲಾವಣೆ ಆಗಿಲ್ಲ. ಆದರೂ, ಬೆಂಬಲ ಏಕೆ ಕೊಟ್ಟಿದೀರಿ ಎನ್ನುವುದನ್ನು ನಾಡಿನ ಜನತೆಗೆ, ರೈತರಿಗೆ ತಿಳಿಸುವ ಜವಾಬ್ದಾರಿ ಕುಮಾರಸ್ವಾಮಿ ಮೇಲಿದೆ. ಇಲ್ಲದಿದ್ದರೆ, ತಾವುಗಳು ರೈತರ ಮಕ್ಕಳು, ಮಣ್ಣಿನ ಮಕ್ಕಳು ಎನ್ನುವುದನ್ನು ನಿಲ್ಲಿಸಬೇಕೆಂದು ಅವರು ವಾಗ್ದಾಳಿ ನಡೆಸಿದರು.

ಕೇಂದ್ರ ಸರಕಾರ ಪ್ರಜಾಪ್ರಭುತ್ವ ಮೇಲೆಯೇ ನಂಬಿಕೆ ಇಟ್ಟಿಲ್ಲ. ಈಗಾಗಲೇ 12 ಸುಗ್ರಿವಾಜ್ಞೆಗಳನ್ನು ತಂದಿದೆ. ರಾಜಕೀಯ ಪಕ್ಷಗಳಿಗೂ ಬೆದರಿಕೆ ಹಾಕುವ ದುಷ್ಟ ವ್ಯವಸ್ಥೆಯನ್ನೇ ಈ ಸರಕಾರ ಹುಟ್ಟುಹಾಕಿದ್ದು, ಇದರ ವಿರುದ್ಧ ನಾವು ಗಟ್ಟಿಯಾಗಿ ನಿಲ್ಲಬೇಕಾಗಿದೆ ಎಂದು ಹನುಮಂತಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News