ವಿದ್ಯಾರ್ಥಿನಿಗೆ ಪದವಿ ಪರೀಕ್ಷೆಗೆ ಪ್ರವೇಶ ಪತ್ರ ನೀಡದ ವಿಚಾರ: ಆರ್‌ಜಿಯುಎಚ್‌ಎಸ್, ಕೆಇಎಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಡಿ.9: ಮಂಗಳೂರು ಸುರತ್ಕಲ್‍ನ ಶ್ರೀನಿವಾಸ ದಂತ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿನಿಗೆ ಮೊದಲನೆ ವರ್ಷದ ದಂತ ವೈದ್ಯಕೀಯ ಪದವಿ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ(ಆರ್‌ಜಿಯುಎಚ್‌ಎಸ್) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಿದ್ಯಾರ್ಥಿನಿ ನಿಧಿ ಎಸ್. ಶೆಟ್ಟಿಗಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನೋಟಿಸ್ ಜಾರಿ ಮಾಡಿದೆ. ಜತೆಗೆ ಶ್ರೀನಿವಾಸ ದಂತ ವಿಜ್ಞಾನಗಳ ಸಂಸ್ಥೆ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮತ್ತು ಭಾರತೀಯ ದಂತ ಪರಿಷತ್ತಿಗೂ ಇದೇ ವೇಳೆ ನೋಟಿಸ್ ಜಾರಿ ಮಾಡಿರುವ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.
2020ರ ಅಕ್ಟೋಬರ್ ನಲ್ಲಿ ನಡೆದ ಮೊದಲ ವರ್ಷದ ಬಿಡಿಎಸ್ ಪರೀಕ್ಷೆಗೆ ಪ್ರವೇಶ ಪತ್ರ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಪೋರ್ಟಲ್‍ನಲ್ಲಿ ಬಿಡಿಎಸ್‍ಗೆ ತಾನು ಪ್ರವೇಶ ಪಡೆದ ವಿವರ ಭರ್ತಿ ಮಾಡಿಲ್ಲ. ಇದೇ ಕಾರಣಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಪ್ರವೇಶ ಪತ್ರ ವಿತರಿಸಿಲ್ಲ. ಹೀಗಾಗಿ, ಈಗ ಮತ್ತೆ ತನಗೆ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ಆರ್‍ಜಿಯುಎಚ್‍ಎಸ್ ಮತ್ತು ಕೆಇಎಗೆ ನಿರ್ದೇಶಿಸುವಂತೆ ಕೋರಿದ್ದಾರೆ.