×
Ad

ಮ್ಯಾನುವೆಲ್ ಸ್ಕ್ಯಾವೆಂಜರ್ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಹೈಕೋರ್ಟ್ ನಿರ್ದೇಶನ

Update: 2020-12-10 17:47 IST

ಬೆಂಗಳೂರು, ಡಿ.9: ಮ್ಯಾನುವೆಲ್‌ಗಳ ಒಳಗೆ ಇಳಿದು ಸ್ವಚ್ಛ ಮಾಡುವ ಅಮಾನವೀಯ ಪದ್ಧತಿ ನಿಷೇಧ ಕಾಯ್ದೆ(ಪ್ರಾಯಿಬಿಷನ್ ಆಫ್ ಎಂಪ್ಲಾಯಿಮೆಂಟ್ ಆ್ಯಸ್ ಮ್ಯಾನುವೆಲ್ ಸ್ಕ್ಯಾವೆಂಜರ್ ಅಂಡ್ ದೇರ್ ರಿಹ್ಯಾಬಿಲಿಟೇಷನ್ ಆಕ್ಟ್-2013)ಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಎಲ್ಲಾ ಸ್ಥಳೀಯ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಎಐಸಿಸಿಟಿಯುನ ಕರ್ನಾಟಕ ಘಟಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. 

ಈ ಕಾಯ್ದೆಯಡಿ ದಾಖಲಿಸಿದ ಎಫ್‌ಐಆರ್‌ಗಳ ಸಂಖ್ಯೆ, ಅವುಗಳ ದಾಖಲೆ, ದೋಷಾರೋಪ ಪಟ್ಟಿ ಸಲ್ಲಿಸಿದ, ಶಿಕ್ಷೆಯಾದ, ವಿಚಾರಣೆಗೆ ಬಾಕಿಯಿರುವ, ಖುಲಾಸೆಯಾದ ಪ್ರಕರಣಗಳ ವಿವರಗಳನ್ನು ಸಲ್ಲಿಸಬೇಕು. ಕಾಯ್ದೆಯ ಸಂಬಂಧ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕೈಗೊಂಡ ನಿರ್ಣಯದ ವಿವರ, ಮ್ಯಾನ್‌ಹೋಲ್ ಸ್ಕ್ಯಾವೆಂಜರ್(ಮಲಗುಂಡಿ ಸ್ವಚ್ಛಗೊಳಿಸುವವರ) ಸಮೀಕ್ಷೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ರಚಿಸಿದ ಸಮಿತಿಗಳು, ಅವುಗಳ ನಡೆಸಿದ ಸಮೀಕ್ಷೆ ಮತ್ತು ಕಾರ್ಯ ನಿರ್ವಹಣೆ ಕುರಿತು ವಿವರಗಳನ್ನು ಸಲ್ಲಿಸಬೇಕು ಎಂದು ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಅಲ್ಲದೆ, ರಾಜ್ಯ ಮತ್ತು ಜಿಲ್ಲಾ ಸರ್ವೇ ಸಮಿತಿಗಳು ಪ್ರಕಟಿಸಿರುವ ಮ್ಯಾನ್‌ಹೋಲ್ ಸ್ಕಾವೆಂಜರ್‌ಗಳ ಅಂತಿಮ ಪಟ್ಟಿ, ಸಮಿತಿಗಳ ಕಾರ್ಯ ನಿರ್ವಹಣೆ ಕುರಿತು ಸಂಕ್ಷಿಪ್ತ ವರದಿ ಸಲ್ಲಿಸಬೇಕು. ರಾಜ್ಯದಲ್ಲಿರುವ ನೈರ್ಮಲ್ಯವಿಲ್ಲದ ಶೌಚಾಲಯಗಳ ಸರ್ವೇ ನಡೆಸಿರುವ, ಅವುಗಳನ್ನು ನೆಲಸಮಗೊಳಿಸಿದ ಅಥವಾ ನೈರ್ಮಲ್ಯ ಶೌಚಾಲಯಗಳಾಗಿ ಪರಿವರ್ತಿಸಿದ ಬಗ್ಗೆ ವಿವರ ಸಲ್ಲಿಸಬೇಕು. ಈ ಕುರಿತು ನಗರ ಸ್ಥಳೀಯ ಪ್ರಾಧಿಕಾರಗಳು ಹೊರಡಿಸಿರುವ ನೋಟಿಫಿಕೇಷನ್, ಮ್ಯಾನ್ಯುಯೆಲ್ ಸ್ಕ್ಯಾವೆಂಜರ್‌ಗಳ ಪುನರ್ವಸತಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೂಪಿಸಿರುವ ಯೋಜನೆಗಳ ಕುರಿತ ಸಮಗ್ರ ಮಾಹಿತಿಯನ್ನು 2021ರ ಜ.30ಗೊಳಗೆ ವರದಿ ಸಲ್ಲಿಸುವಂತೆ ನ್ಯಾಯಪೀಠ ಆದೇಶಿಸಿದೆ.

ಅಲ್ಲದೇ, ಕಾಯ್ದೆಯಡಿ ರಚಿಸಲಾಗಿರುವ ರಾಜ್ಯ, ಜಿಲ್ಲಾ ಮತ್ತು ಉಪ ವಿಭಾಗಗಳ ಮಟ್ಟದ ವಿಚಕ್ಷಣಾ ಸಮಿತಿ, ಅವುಗಳು ನಡೆಸಿದ ಸಭೆ, ಕಾರ್ಯ ನಿರ್ವಹಣೆಗಳ ಕುರಿತು ವರದಿ ಸಲ್ಲಿಸಬೇಕು. ಜಿಲ್ಲಾ ಮಟ್ಟಗಳ ಸಮಿತಿಯನ್ನು ರಾಜ್ಯಮಟ್ಟದ ಸಮಿತಿಗಳು ಮೇಲ್ವಿಚಾರಣೆ ನಡೆಸಿದ ಬಗ್ಗೆ ವರದಿ ಸಲ್ಲಿಸಬೇಕು. ರಾಜ್ಯದಲ್ಲಿ ಅಗತ್ಯವಿರುವ ಸಮುದಾಯ ಶೌಚಾಲಯಗಳು ಬಗ್ಗೆ ಸಮೀಕ್ಷೆ ನಡೆಸಿದ ದಾಖಲೆಗಳು ಸಲ್ಲಿಸಬೆಕು. ಬಯಲು ಬಹಿರ್ದೆಸೆ ನಿರ್ಮೂಲನೆಗೆ ವ್ಯಾಪಕ ಜಾಗತಿ ಮೂಡಿಸಬೆಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News