‘ಗೋಹತ್ಯೆ ನಿಷೇಧ ಮಸೂದೆ': ಚುನಾವಣಾ ಆಯೋಗಕ್ಕೆ ದೂರು ನೀಡಲು ಕಾಂಗ್ರೆಸ್ ತೀರ್ಮಾನ

Update: 2020-12-10 14:45 GMT

ಬೆಂಗಳೂರು, ಡಿ. 10: ಗ್ರಾಮ ಪಂಚಾಯಿತಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ತರಾತುರಿಯಲ್ಲಿ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020'(ಗೋಹತ್ಯೆ ನಿಷೇಧ ಮಸೂದೆ) ಮಂಡಿಸಿ, ವಿಪಕ್ಷಗಳ ಅನುಪಸ್ಥಿತಿಯಲ್ಲಿ ಅನುಮೋದನೆ ಪಡೆದಿದೆ ಎಂದು ಆರೋಪಿಸಿ ರಾಜ್ಯ ಸರಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಪ್ರತಿಪಕ್ಷ ಕಾಂಗ್ರೆಸ್ ತೀರ್ಮಾನಿಸಿದೆ.

ಗುರುವಾರ ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದ್ದು, ಕಲಾಪ ಸಲಹಾ ಸಮಿತಿ(ಬಿಎಸ್‍ಸಿ) ಸಭೆಯಲ್ಲಿ ಚರ್ಚಿಸದೆ ಏಕಾಏಕಿ ಮಸೂದೆ ಮಂಡಿಸುವ ಮೂಲಕ ಸರಕಾರ, ಸ್ಪೀಕರ್ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.

ವಿಧೇಯಕದ ಪ್ರತಿಯನ್ನೇ ಕೊಟ್ಟಿಲ್ಲ: ರಾಜ್ಯದ ರೈತರಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಧೇಯಕ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020' ಅನ್ನು ಮಂಡನೆ ಮಾಡುವ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರಿಗೆ ಮಸೂದೆ ಪ್ರತಿಯನ್ನೇ ನೀಡಿಲ್ಲ. ಚರ್ಚೆಗೆ ಅವಕಾಶವನ್ನು ಕಲ್ಪಿಸದೆ ತರಾತುರಿಯಲ್ಲಿ ಮಂಡಿಸಿ, ವಿಧಾನಸಭೆಯಲ್ಲಿ ಅನುಮೋದನೆ ಪಡೆದಿರುವುದು ಸಂವಿಧಾನಬಾಹಿರ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ವಿಧೇಯಕ ಗ್ರಾಮೀಣ ಪ್ರದೇಶದ ಜನರ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಉದ್ದೇಶಿತ ಮಸೂದೆ ಜಾರಿಯಿಂದ ರೈತರಿಗೆ ಅನ್ಯಾಯವಾಗುವುದಲ್ಲದೆ, ಪ್ರಸ್ತಾವಿತ ಮಸೂದೆಯಲ್ಲಿ ಹಲವು ಲೋಪದೋಷಗಳಿವೆ. ಉದ್ದೇಶಪೂರ್ವಕವಾಗಿ ಒಂದು ವರ್ಗದ ಜನರನ್ನು ಗುರಿಯಾಗಿಟ್ಟುಕೊಂಡು ಮಸೂದೆ ಜಾರಿಗೆ ಸರಕಾರ ಮುಂದಾಗಿದೆ ಎಂದು ಕಾಂಗ್ರೆಸ್ ದೂರಿದೆ.

ಜೆಡಿಎಸ್ ತೀರ್ಮಾನದ ಮೇಲೆ ಕಾಯ್ದೆ ಭವಿಷ್ಯ: ಗ್ರಾ.ಪಂ.ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು  ಸರಕಾರ ಈ ವಿಧೇಯಕವನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದು, ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದೆ. ಆದರೆ, ಇದು ಅವರಿಗೆ ಯಾವುದೇ ಕಾರಣಕ್ಕೂ ಫಲ ನೀಡುವುದಿಲ್ಲ. ಮೇಲ್ಮನೆಯಲ್ಲಿ ಜೆಡಿಎಸ್ ಸದಸ್ಯರು ವಿಧೇಯಕವನ್ನು ಬೆಂಬಲಿಸದಿದ್ದರೆ ಅನುಮೋದನೆ ಪಡೆಯುವುದು ಕಷ್ಟಸಾಧ್ಯ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇಂತಹ ಕರಾಳ, ರೈತ ವಿರೋಧಿ ಹಾಗೂ ಸಂವಿಧಾನ ಬಾಹಿರವಾಗಿ ಸರಕಾರ ಅನುಮೋದನೆ ಪಡೆದುಕೊಂಡಿರುವ ವಿಧೇಯಕಕ್ಕೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಸಹಿಹಾಕಬಾರದು. ಅಲ್ಲದೆ, ಈ ಮಸೂದೆಯನ್ನು ವಿರೋಧಿಸಿ ರಾಜ್ಯದಲ್ಲಿ ಹೋರಾಟ ರೂಪಿಸಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News