ವಿಧಾನಸಭೆ ಅಧಿವೇಶನ: 4 ದಿನದಲ್ಲಿ 20 ಗಂಟೆ ಚರ್ಚೆ

Update: 2020-12-10 14:35 GMT

ಬೆಂಗಳೂರು, ಡಿ.10: ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನವು ಡಿ.7 ರಿಂದ 10ರವರೆಗೆ ನಡೆದಿದ್ದು, ನಾಲ್ಕು ದಿನಗಳ ಅಧಿವೇಶನದಲ್ಲಿ 20 ಗಂಟೆಗಳ ಕಾಲ ಸದನದ ಕಾರ್ಯಕಲಾಪಗಳು ನಡೆದಿವೆ. ಈ ಅವಧಿಯಲ್ಲಿ ಸದನವು ಶೇ.90ಕ್ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಗುರುವಾರ ವಿಧಾನಸಭೆಯಲ್ಲಿ ಪ್ರಸಕ್ತ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ ನೀಡಿದ ಅವರು, ಇತ್ತೀಚೆಗೆ ನಿಧನರಾದ ಕೇಂದ್ರದ ಹಾಲಿ ಸಚಿವ ರಾಮ್ ವಿಲಾಸ್ ಪಾಸ್ವಾನ್, ಮಾಜಿ ಸಚಿವರಾದ ಡಾ.ವೈ.ನಾಗಪ್ಪ, ಮಾಜಿ ಶಾಸಕರಾದ ಬಸವಂತ ಐರೋಜಿ ಪಾಟೀಲ್, ಕೆ.ಮಲ್ಲಪ್ಪ, ರತನ್‍ಕುಮಾರ್ ಕಟ್ಟೆಮಾರ್, ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್, ಸಾಹಿತ್ಯ ವಿಮರ್ಶಕ ಡಾ.ಜಿ.ಎಸ್.ಆಮೂರ, ಸಹಕಾರಿ ಧುರೀಣ ಡಾ.ವಿ.ಎಸ್.ಸೋಂದೆ ಹಾಗೂ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸಂತಾಪ ಸೂಚನಾ ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ. ಭಾರತ ಸಂವಿಧಾನದ 151(2)ನೆ ಅನುಚ್ಛೇದದ ಮೇರೆಗೆ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ ಮಾರ್ಚ್ 2019ಕ್ಕೆ ಕೊನೆಗೊಂಡ ವರ್ಷದ ಸಾಮಾನ್ಯ ಮತ್ತು ಸಾಮಾಜಿಕ ವಲಯದ ವರದಿಯನ್ನು (2020ನೆ ವರ್ಷದ ವರದಿ ಸಂಖ್ಯೆ -3) ಮತ್ತು ಆರ್ಥಿಕ ಮತ್ತು ರಾಜಸ್ವ ವಲಯಗಳ ವರದಿಯನ್ನು(2020ನೆ ವರ್ಷದ ವರದಿ ಸಂಖ್ಯೆ-4) ಸದನದಲ್ಲಿ ಮಂಡಿಸಲಾಗಿದೆ ಎಂದು ಅವರು ಹೇಳಿದರು.

2020-21ನೆ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಲಾಗಿದೆ. ವಿಧಾನಮಂಡಲ/ವಿಧಾನಸಭೆಯ ಸಮಿತಿಗಳ ಹಾಗೂ ಜಂಟಿ ಪರಿಶೀಲನಾ ಸಮಿತಿಯ ವರದಿಯು ಸೇರಿದಂತೆ ಒಟ್ಟು 4 ವರದಿಗಳು, 9 ಅಧಿಸೂಚನೆಗಳು, 4 ಆಧ್ಯಾದೇಶಗಳು, 46 ವಾರ್ಷಿಕ ವರದಿಗಳು, 18 ಲೆಕ್ಕ ಪರಿಶೋಧನಾ ವರದಿ, 2 ಅನುಪಾಲನಾ ವರದಿ ಹಾಗೂ 2 ತಪಾಸಣಾ ವರದಿಗಳನ್ನು ಮಂಡಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

3 ಅರ್ಜಿಗಳನ್ನು ಒಪ್ಪಿಸಲಾಗಿದೆ. 2020-21ನೇ ಸಾಲಿನ ಪೂರಕ ಅಂದಾಜುಗಳ ಎರಡನೆ ಕಂತಿನ ಬೇಡಿಕೆಗಳನ್ನು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. ವಿಧಾನಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿದ್ದ ಎರಡು ವಿಧೇಯಕಗಳು ಹಾಗೂ ಧನವಿನಿಯೋಗ ವಿಧೇಯಕವು ಸೇರಿದಂತೆ ಒಟ್ಟು 8 ವಿಧೇಯಕಗಳನ್ನು ಅಂಗೀಕರಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.

ನಿಯಮ 60 ರಡಿಯಲ್ಲಿ ನೀಡಿದ್ದ 2 ನಿಲುವಳಿ ಸೂಚನೆಗಳನ್ನು ಪರಿವರ್ತಿಸಿರುವುದನ್ನು ಸೇರಿಸಿ 9 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಸ್ವೀಕರಿಸಿದ್ದು, 2 ಸೂಚನೆಗಳನ್ನು ಚರ್ಚಿಸಲಾಗಿದೆ. ಒಟ್ಟು 1640 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಸ್ವೀಕರಿಸಬೇಕಾಗಿದ್ದ 60 ಪ್ರಶ್ನೆಗಳಿಗೆ ಸಂಪೂರ್ಣವಾಗಿ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 600 ಪ್ರಶ್ನೆಗಳ ಉತ್ತರಗಳನ್ನು ಮಂಡಿಸಲಾಗಿದೆ ಎಂದು ಸ್ಪೀಕರ್ ಹೇಳಿದರು.

ನಿಯಮ 351ರಡಿಯಲ್ಲಿ 40 ಸೂಚನೆಗಳನ್ನು ಅಂಗೀಕರಿಸಿದ್ದು, 25 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 142 ಸೂಚನೆಗಳ ಪೈಕಿ 3 ಸೂಚನೆಗಳನ್ನು ಚರ್ಚಿಸಲಾಗಿದೆ ಹಾಗೂ 37 ಸೂಚನೆಗಳ ಉತ್ತರಗಳನ್ನು ಮಂಡಿಸಲಾಗಿದೆ. 52 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆ ಅಡಿಯಲ್ಲಿ ಒಟ್ಟು 7 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗಿದೆ ಎಂದು ಅವರು ನುಡಿದರು.

ಸದನ ನಡೆಸಲು ಸಹಕರಿಸಿದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಸಚಿವ ಸಂಪುಟದ ಸದಸ್ಯರು, ಉಪಾಧ್ಯಕ್ಷರು, ಸರಕಾರಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಸ್ಪೀಕರ್, ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News