ಶುಕ್ರವಾರ ವೈದ್ಯರ ಮುಷ್ಕರ: ಒಪಿಡಿ ಸೇವೆ ವ್ಯತ್ಯಯ ಸಾಧ್ಯತೆ

Update: 2020-12-10 15:24 GMT

ಬೆಂಗಳೂರು, ಡಿ.10: ಕೇಂದ್ರ ಸರಕಾರ ಆಯುರ್ವೇದ ವೈದ್ಯರಿಗೆ ಕೆಲವು ಶಸ್ತ್ರ ಚಿಕಿತ್ಸೆ ನಡೆಸಲು ಅನುಮತಿ ನೀಡಿರುವುದನ್ನು ಖಂಡಿಸಿ ಅಲೋಪಥಿ ವೈದ್ಯರು, ಭಾರತೀಯ ವೈದ್ಯಕೀಯ ಒಕ್ಕೂಟ(ಐಎಂಎ) ಶುಕ್ರವಾರ(ಡಿ.11) ದೇಶವ್ಯಾಪಿ ಮುಷ್ಕರ ನಡೆಸಲು ಕರೆ ನೀಡಿದೆ.

ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರಗೆ ನಡೆಯುವ ಮುಷ್ಕರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆ ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗದ(ಒಪಿಡಿ) ಸೇವೆಯಲ್ಲಿ ವ್ಯತ್ಯಯವಾಗಲಿದೆ. ಆದರೆ, ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಎಲ್ಲ ರೀತಿಯ ಸೇವೆಗಳು ಇರಲಿವೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಐಎಂಎ ಕರೆ ನೀಡಿರುವ ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಸೇರಿದಂತೆ ವಿವಿಧ ವೈದ್ಯರ ಸಂಘಟನೆಗಳು ಬೆಂಬಲ ಸೂಚಿಸಿವೆ. ಒಳರೋಗಿ ವಿಭಾಗಗಳಲ್ಲಿ ಕಪ್ಪು ಪಟ್ಟಿ ಧರಿಸಿ, ಸೇವೆ ಸಲ್ಲಿಸಲು ವೈದ್ಯರು ನಿರ್ಧರಿಸಿದ್ದಾರೆ. ತುರ್ತು ಚಿಕಿತ್ಸೆಗಳು ಹಾಗೂ ದೂರವಾಣಿ ಸಮಾಲೋಚನೆಗಳು ಲಭ್ಯವಿರಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಐಎಂಎ ಕರ್ನಾಟಕ ಶಾಖೆಯ ಕಾರ್ಯದರ್ಶಿ ಡಾ.ಎಸ್.ಎಂ. ಪ್ರಸಾದ್, ಕೇಂದ್ರ ಸರಕಾರವು ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ನೀಡಿರುವ ಅನುಮತಿ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಗೊಂದಲಕ್ಕೆ ಸಿಲುಕಿ, ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ನುರಿತ, ಅನುಭವಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಾಗಲೇ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಷ್ಟಾಗಿಯೂ ಕೆಲವು ವೇಳೆ ಎಡವಟ್ಟು ಆಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಆಯುರ್ವೇದದ ಶಲ್ಯ ಮತ್ತು ಶಾಲಕ್ಯ ಪದವೀಧರರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಏನಿದು ಅನುಮತಿ?: ಹಲ್ಲಿನ ರೂಟ್‍ಕ್ಯಾನಲ್ ಮುಂತಾದ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಕೇಂದ್ರ ಸರಕಾರವು ಕಳೆದ ತಿಂಗಳು ಅನುಮತಿ ನೀಡಿತ್ತು. ಈ ಸಂಬಂಧ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಪ್ರಾಯೋಗಿಕವಾಗಿ ತರಬೇತಿ ಪಡೆದ ಸ್ನಾತಕೋತ್ತರ ಪದವೀಧರ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ. ಆದರೆ, ಕೇಂದ್ರದ ಈ ನಿರ್ಧಾರವನ್ನು ಖಂಡಿಸಿರುವ ಐಎಂಎ, ಸರಕಾರವು ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದೆ. 

ಏನಿದೆ, ಏನಿಲ್ಲ?
►ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಒಪಿಡಿ ಸೇವೆ ಇರುವುದಿಲ್ಲ
►ಕೋವಿಡ್ ಸೇವೆಗಳು ಇರಲಿವೆ
►ದೂರವಾಣಿ ಸಮಾಲೋಚನೆಗೆ ವೈದ್ಯರು ಲಭ್ಯವಿರುತ್ತಾರೆ
►ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸೇವೆಗಳು ಎಂದಿನಂತೆ ಇರಲಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News