ಗೋಹತ್ಯೆ ನಿಷೇಧ ಮಸೂದೆ ಮಂಡಿಸುವಲ್ಲಿ ಬಿಜೆಪಿ ವಿಫಲ: ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿದ ಸಭಾಪತಿ

Update: 2020-12-10 15:50 GMT
File Photo

ಬೆಂಗಳೂರು, ಡಿ.10: ವಿಧಾನಸಭೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020ನ್ನು ಮಂಡಿಸಿ ಅಂಗೀಕರಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, ವಿಧಾನಪರಿಷತ್‍ನಲ್ಲಿ ವಿಧೇಯಕವನ್ನು ಮಂಡಿಸುವಲ್ಲಿ ವಿಫಲವಾಯಿತು. 

ಗುರುವಾರ ಬೆಳಗ್ಗೆಯಿಂದಲೇ ಬಿಜೆಪಿಯ ಬಹುತೇಕ ಸದಸ್ಯರು ಕೇಸರಿ ಶಾಲನ್ನು ಹೊದ್ದು ಪರಿಷತ್‍ನಲ್ಲಿ ಆಸೀನರಾಗಿ, ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಲು ಉತ್ಸುಕರಾಗಿದ್ದರು. ಆದರೆ, ಕರ್ನಾಟಕ ಧನವಿನಿಯೋಗ ವಿಧೇಯಕ-2020, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಮತ್ತು ಕೆಲವು ಇತರ ಕಾನೂನು(ಎರಡನೆ ತಿದ್ದುಪಡಿ) ವಿಧೇಯಕ. 2020ರ ಕುರಿತು ಸದನದಲ್ಲಿ ರಾತ್ರಿ 7ರವರೆಗೆ ಸುದೀರ್ಘ ಚರ್ಚೆ ನಡೆಯಿತು. 

ಕರ್ನಾಟಕ ಸ್ಟಾಂಪು(ಎರಡನೇ ತಿದ್ದುಪಡಿ) ವಿಧೇಯಕ-2020ಕ್ಕೆ ಅಂಗೀಕಾರ ದೊರೆತ ನಂತರ, ವಿರೋಧ ಪಕ್ಷದ ಸದಸ್ಯರೊಬ್ಬರು ಸಮಯವಾಗಿದೆ ಕಲಾಪವನ್ನು ಮುಂದೂಡಿ ಎಂದರು. ಈ ಮಧ್ಯೆ ಎದ್ದುನಿಂತ ಸಭಾನಾಯಕ ಶ್ರೀನಿವಾಸ ಪೂಜಾರಿ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020ನ್ನು ನಾಳೆ ಮಂಡಿಸುತ್ತೇವೆಂದು ತಿಳಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧೇಯಕವನ್ನು ಇಂದೇ ಮಂಡಿಸಿ, ಅದರ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆಂದು ತಿಳಿಸಿದರು.

ಈ ವೇಳೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಎದ್ದುನಿಂತು, ಸಭಾಪತಿಗಳ ವಿರುದ್ಧ ಅವಿಶ್ವಾಸ ಮಂಡಿಸುತ್ತಿದ್ದೇನೆಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ, ಅವಿಶ್ವಾಸ ನಿರ್ಣಯದ ಕುರಿತು ಇಬ್ಬರು ಸಚಿವರಿಂದ ಸೂಚನೆಗಳು ಬಂದಿದೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ಮೂಲಕ ಅವರಿಗೆ ಕಳುಹಿಸಿಕೊಡಲಾಗುವುದೆಂದರು.

ತಮ್ಮ ಮಾತನ್ನು ಮುಂದುವರೆಸಿದ ಸಭಾಪತಿ, ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಸಲಹಾ ಸಮಿತಿಯ ಸಭೆಯಲ್ಲಿ ಡಿ.10ಕ್ಕೆ ಕಲಾಪವನ್ನು ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿತ್ತು. ಆ ಪ್ರಕಾರವಾಗಿ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗುವುದೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News