ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ: ಆರ್.ಅಶೋಕ್
ಬೆಂಗಳೂರು, ಡಿ.10: ರಾಜ್ಯದಲ್ಲಿ ಆಗಸ್ಟ್, ಸೆಪ್ಟಂಬರ್ ಹಾಗೂ ಅಕ್ಟೋಬರ್‍ನಲ್ಲಿ ಮೂರು ಹಂತದಲ್ಲಿ ಪ್ರವಾಹ ಆಗಿದೆ. ಬೇರೆ ಬೇರೆ ರಾಜ್ಯಗಳಲ್ಲಿನ ಪ್ರವಾಹ ಪರಿಸ್ಥಿತಿ ಹಾಗೂ ನಮ್ಮ ರಾಜ್ಯಕ್ಕೆ ಬೇರೆ ಬೇರೆ ರಾಜ್ಯಗಳ ಅಣೆಕಟ್ಟುಗಳಿಂದ ಹರಿದು ಬರುವ ನೀರಿನ ಪ್ರಮಾಣ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮೊದಲೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತಗಳು ಆಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ನಡೆದಿದ್ದ ಚರ್ಚೆಗೆ ಸರಕಾರದ ಪರವಾಗಿ ಗುರುವಾರ ಉತ್ತರ ನೀಡಿದ ಅವರು, ಪ್ರವಾಹದಿಂದ ಸಂತ್ರಸ್ತರಾದವರಿಗೆ ತಕ್ಷಣ 10 ಸಾವಿರ ರೂ.ಗಳ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈವರೆಗೆ 27,773 ಜನರಿಗೆ ತಲಾ 10 ಸಾವಿರ ರೂ.ಗಳನ್ನು ಪಾವತಿ ಮಾಡಲಾಗಿದೆ ಎಂದರು.
48,307 ಮನೆಗಳಿಗೆ ಹಾನಿಯಾಗಿದೆ, 20.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 37,513 ಕಿ.ಮಿ.ರಸ್ತೆ, 4,084 ಸೇತುವೆಗಳು, 1,371 ಸಣ್ಣ ನೀರಾವರಿಗೆ ಸಂಬಂಧಿಸಿದ ಕಾಮಗಾರಿಗಳು, 7,606 ಸರಕಾರಿ ಕಟ್ಟಡಗಳು ಹಾಗೂ 291 ಕುಡಿಯುವ ನೀರು ಸರಬರಾಜು ಮಾಡುವ ಘಟಕಗಳಿಗೆ ಹಾನಿಯಾಗಿದೆ ಎಂದು ಅಶೋಕ್ ಹೇಳಿದರು.
ಪ್ರವಾಹ ಪರಿಸ್ಥಿತಿ ಎದುರಾಗುತ್ತಿದ್ದಂತೆ ಕೇಂದ್ರ ಸರಕಾರದ ಜೊತೆ ಮಾತನಾಡಿ, ರಕ್ಷಣಾ ಕಾರ್ಯಕ್ಕೆ ಎಸ್‍ಡಿಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್ ನೆರವು ಪಡೆದುಕೊಳ್ಳಲಾಯಿತು. ಎನ್‍ಡಿಆರ್‍ಎಫ್‍ನ 325 ಯೋಧರು, ಸೇನೆಯ 200 ಮಂದಿ ಯೋಧರು, ಎಸ್‍ಡಿಆರ್‍ಎಫ್‍ನ 200, ನಾಲ್ಕು ಸೇನಾ ಹೆಲಿಕಾಪ್ಟರ್‍ಗಳನ್ನು ನಿಯೋಜನೆ ಮಾಡಲಾಗಿತ್ತು ಎಂದು ಅವರು ತಿಳಿಸಿದರು.
52,242 ಜನರನ್ನು ಕಾಳಜಿ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿ, ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಸಂತ್ರಸ್ತರಿಗೂ ಪೌಷ್ಠಿಕ ಆಹಾರವನ್ನು ನೀಡುವಂತೆ ಸರಕಾರದ ವತಿಯಿಂದ ಆದೇಶ ಹೊರಡಿಸಲಾಗಿತ್ತು. ಬೆಳೆ ಹಾನಿಗೆ ಸಂಬಂಧಿಸಿದಂತೆ ಈವರೆಗೆ ಐದು ಹಂತಗಳಲ್ಲಿ ಆರ್‍ಟಿಜಿಎಸ್ ಮೂಲಕ 7,12,936 ಜನರಿಗೆ 531.13 ಕೋಟಿ ರೂ. ಪರಿಹಾರ ನೀಡಿದ್ದೇವೆ. ರಾಜ್ಯದ ಇತಿಹಾಸದಲ್ಲೆ ಕೇವಲ ಮೂರು ತಿಂಗಳಲ್ಲೆ ಬೆಳೆ ಹಾನಿಗೆ ಪರಿಹಾರ ನೀಡಲಾಗಿದೆ ಎಂದು ಅಶೋಕ್ ಹೇಳಿದರು.
ಸಂಪೂರ್ಣವಾಗಿ ಮನೆ ಕಳೆದುಕೊಂಡಿರುವವರಿಗೆ 5 ಲಕ್ಷ ರೂ., ಎರಡನೆ ಹಂತದ ಹಾನಿಗೆ 3 ಲಕ್ಷ ರೂ. ಹಾಗೂ ಭಾಗಶಃ ಹಾನಿಗೆ 50 ಸಾವಿರ ರೂ.ಗಳ ಪರಿಹಾರ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಮಂತ್ರಿ ಜೊತೆ ನಾನು ಹಾಗೂ ಗೃಹ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದರು. ಮನೆಗಳಿಗೆ ಆಗಿರುವ ಹಾನಿಗಾಗಿ 296.60 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಅಶೋಕ್ ಹೇಳಿದರು.
ಮೂಲಸೌಕರ್ಯ ಕಲ್ಪಿಸಲು ವಿವಿಧ ಇಲಾಖೆಗಳಿಗೆ 470 ಕೋಟಿ ರೂ., ಅಗ್ನಿಶಾಮಕ ಇಲಾಖೆಗೆ 20 ಕೋಟಿ ರೂ., ನೀಡಿದ್ದೇವೆ. ಒಟ್ಟಾರೆಯಾಗಿ ಪ್ರವಾಹ ಹಿನ್ನೆಲೆಯಲ್ಲಿ ಮೂರು ಹಂತಗಳಲ್ಲಿ 1320.60 ಕೋಟಿ ರೂ.ಪರಿಹಾರ ನೀಡಲಾಗಿದೆ. ಕೇಂದ್ರ ಸರಕಾರವು ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ ರಾಜ್ಯಕ್ಕೆ 577 ಕೋಟಿ ರೂ.ಗಳನ್ನು ನೀಡಿದೆ. ಶೀಘ್ರದಲ್ಲೆ ಕೇಂದ್ರ ಸರಕಾರದ ಅಧ್ಯಯನ ತಂಡ ಬಂದು ಪರಿಶೀಲಿಸಲಿದೆ. ಆನಂತರ, ಹೆಚ್ಚಿನ ನೆರವು ಸಿಗಬಹುದು ಎಂದು ಅಶೋಕ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ನಾನು 27 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ರಾಜ್ಯ ಸರಕಾರವು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದೆ ಎಂದು ಅಶೋಕ್ ಹೇಳಿದರು.
ಸರಕಾರ ಹೇಳುವಂತೆ ಪ್ರವಾಹ ಪರಿಹಾರ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಆದುದರಿಂದ, ಮನೆ ಕಳೆದುಕೊಂಡಿರುವವರಿಗೆ ಪರಿಹಾರ ನೀಡಲು ಸರಿಯಾದ ನಿಯಮಗಳನ್ನು ರೂಪಿಸಬೇಕು. ಅಲ್ಲದೆ, ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಬಿಜೆಪಿ ಸದಸ್ಯ ಸಿದ್ದು ಸವದಿ ಮನವಿ ಮಾಡಿದರು.
ಅಧಿಕಾರಿಗಳು ಮಾಡುತ್ತಿರುವ ತಪ್ಪು ಸಮೀಕ್ಷೆಯಿಂದ ಅರ್ಹರಿಗೆ ಪರಿಹಾರ ಸಿಗದೆ ಸಮಸ್ಯೆ ಎದುರಾಗುತ್ತಿದೆ. ಮನೆ ಕಳೆದುಕೊಂಡಿರುವವರಿಗೆ ಸಮರ್ಪಕವಾದ ಪರಿಹಾರ ಸಿಗುತ್ತಿಲ್ಲ. ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಬಿಜೆಪಿ ಸದಸ್ಯ ಅಭಯ್ ಪಾಟೀಲ್ ಆಗ್ರಹಿಸಿದರು.
ಪ್ರವಾಹದಿಂದ ಮನೆಯಗಳನ್ನು ಕಳೆದುಕೊಂಡಿರುವವರಿಗೆ ಎ, ಬಿ ಕೆಟಗೆರಿ ಎಂದು ಗುರುತಿಸುವಲ್ಲಿ ಆಗುತ್ತಿರುವ ತಾರತಮ್ಯದಿಂದ ಮನೆ ಕಳೆದುಕೊಂಡಿರುವವರಿಗೆ ಸೂಕ್ತವಾದ ಪರಿಹಾರ ಸಿಗುತ್ತಿಲ್ಲ ಎಂದು ಬಿಜೆಪಿ ಸದಸ್ಯ ಸುರೇಶ್ ಗೌಡ ಒತ್ತಾಯಿಸಿದರು.