ಶಾಲಾ-ಕಾಲೇಜು ಪುನರ್ ಆರಂಭದ ಬಳಿಕ ಅತಿಥಿ ಉಪನ್ಯಾಸಕರ ನೇಮಕ: ಸಚಿವ ಸುರೇಶ್ ಕುಮಾರ್
Update: 2020-12-10 23:06 IST
ಬೆಂಗಳೂರು, ಡಿ. 10: ರಾಜ್ಯದಲ್ಲಿ ಶಾಲಾ-ಕಾಲೇಜು ಪುನರ್ ಆರಂಭದ ಬಳಿಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಹರೀಶ್ ಪೂಂಜ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಪದವಿಪೂರ್ವ ಮತ್ತು ಪ್ರೌಢಶಾಲೆಗಳ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರಿಗೆ ಮಾರ್ಚ್ ಅಂತ್ಯದವರೆಗೆ ಕೆಲಸ ನಿರ್ವಹಿಸಿದ್ದ ಎಲ್ಲ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸಲಾಗಿದೆ ಎಂದರು.
ಆರಂಭಕ್ಕೆ ಮಾತನಾಡಿದ ಸದಸ್ಯ ಹರೀಶ್ ಪೂಂಜ, ಅತಿಥಿ ಉಪನ್ಯಾಸಕರು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಸರಕಾರ ಧಾವಿಸಬೇಕು. ಉನ್ನತ ವ್ಯಾಸಂಗ ಮಾಡಿರುವ ಅತಿಥಿ ಉಪನ್ಯಾಸಕರು ಕೆಲಸವಿಲ್ಲದೆ ಕೂಲಿಗೆ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.