ಗ್ರಾಮೀಣ ಹೈನೋದ್ಯಮಗಳ ನಾಶಕ್ಕಾಗಿಯೇ ಒಂದು ಮಸೂದೆ!

Update: 2020-12-11 04:53 GMT

ಗ್ರಾಮೀಣ ಹೈನೋದ್ಯಮಗಳನ್ನು ನಾಶ ಮಾಡಿ, ಅವುಗಳ ಜಾಗದಲ್ಲಿ ಕಾರ್ಪೊರೇಟ್ ಹೈನೋದ್ಯಮಗಳನ್ನು ಸ್ಥಾಪಿಸುವ ಮೊದಲ ಹೆಜ್ಜೆಯಾಗಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರಗೊಂಡಿದೆ. ಈ ಕಾನೂನಿನ ಮೂಲಕ ತಾವು ಸಾಕುವ ಜಾನುವಾರುಗಳ ಮೇಲಿನ ಹಕ್ಕನ್ನು ರೈತರಿಂದ ಅಧಿಕೃತವಾಗಿ ಕಿತ್ತುಕೊಳ್ಳಲಾಗಿದೆ. ಗೋ ಹತ್ಯೆಯನ್ನು ತಡೆಯುವುದು ಈ ಕಾನೂನಿನ ಉದ್ದೇಶ ಎಂದು ಸರಕಾರ ಹೇಳಿದ್ದರೂ, ಅಂತಿಮವಾಗಿ ಗೋವುಗಳ ಸಾಕುವ ರೈತರ ಕೈಗಳನ್ನು ಕಟ್ಟಿ ಹಾಕಿ, ಅವರನ್ನು ನಷ್ಟಕ್ಕೆ ಮತ್ತು ಕಷ್ಟಕ್ಕೊಳಗಾಗುವಂತೆ ಮಾಡಿ ಸಾಮೂಹಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಹಟ್ಟಿಗಳನ್ನು ಮುಚ್ಚಿಸುವುದು ಮತ್ತು ಬೃಹತ್ ಡೈರಿ ಫಾರ್ಮಿಂಗ್‌ಗಳಿಗೆ ಅವಕಾಶ ಕೊಡುವುದು ಸರಕಾರದ ಉದ್ದೇಶವಾಗಿದೆ.

ಒಟ್ಟಿನಲ್ಲಿ ಈ ಕಾನೂನು ಗೋವುಗಳನ್ನು ಸಾಕುವ ರೈತರಿಗೆ ಗರಿಷ್ಠ ಮಟ್ಟದಲ್ಲಿ ಕಿರುಕುಳಗಳನ್ನು ನೀಡುವ ಉದ್ದೇಶವನ್ನಷ್ಟೇ ಹೊಂದಿದೆ ಮತ್ತು ಈ ಕಿರುಕುಳಗಳನ್ನು ನೀಡಲು ಬೇಕಾದ ಎಲ್ಲ ಅವಕಾಶಗಳನ್ನು ಪೊಲೀಸರಿಗೆ ಮತ್ತು ನಕಲಿ ಗೋರಕ್ಷಕರಿಗೆ ಸರಕಾರ ನೀಡಿದೆ. ಗೋವುಗಳನ್ನು ಸಾಕುವ ರೈತ ಈ ಮಸೂದೆಯ ಕಾರಣದಿಂದ ಸದಾ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಒಂದು ಕಾಲದಲ್ಲಿ ‘ಗಂಧದ ಗುಡಿ’ ಎಂದೇ ಹೆಸರಾಗಿದ್ದ ರಾಜ್ಯದಲ್ಲಿ ಗಂಧದ ಮರಗಳ ರಕ್ಷಣೆಗಾಗಿ ಮಾಡಿದ ಕಾನೂನು ಹೇಗೆ ರೈತ ಗಂಧದ ಮರಗಳನ್ನು ಬೆಳೆಸದಂತೆ ತಡೆಯಿತೋ, ಹಾಗೆಯೇ ಈ ಕಾನೂನು ಮುಂದಿನ ದಿನಗಳಲ್ಲಿ ರೈತ ಗೋವುಗಳನ್ನು ಸಾಕದಂತೆ ತಡೆಯಲಿದೆ. ಇರುವ ದನಗಳು ಸಂಘಪರಿವಾರದೊಳಗಿನ ನಕಲಿ ಗೋರಕ್ಷಕರ ಪಾಲಾಗಲಿದೆ. ಗೋಸಾಕಣೆಯೊಂದಿಗೆ ಯಾವ ಸಂಬಂಧವೂ ಇಲ್ಲದ ‘ಗೋಶಾಲೆ’ಗಳು ಮತ್ತು ಬೃಹತ್ ಮಾಂಸ ಸಂಸ್ಕರಣ ಸಂಸ್ಥೆಗಳ ಜೊತೆಗೆ ಅಘೋಷಿತವಾಗಿರುವ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.

ಈ ಜಾನುವಾರು ಹತ್ಯೆ ನಿಷೇಧ ಕಾನೂನು ಹತ್ತು ಹಲವು ವಿರೋಧಾಭಾಸಗಳನ್ನು ಒಳಗೊಂಡಿದೆ. ‘ಧಾರ್ಮಿಕ ಕಾರಣಕ್ಕಾಗಿ’ ಗೋವನ್ನು ವಧಿಸಬಾರದು ಎಂದಾದರೆ, 13 ವರ್ಷ ಪೂರ್ತಿಯಾದ ಗೋವುಗಳನ್ನು ವಧಿಸಬಹುದು ಎನ್ನುವುದರ ಉದ್ದೇಶವೇನು? 13 ವರ್ಷ ಪೂರ್ತಿಯಾದಾಕ್ಷಣ ಗೋವುಗಳು ದೇವತಾ ಸ್ಥಾನದಿಂದ ಹೊರಗೆ ಬರುತ್ತವೆಯೇ? ಗೋವುಗಳ ಸಂಖ್ಯೆಯನ್ನು ಹೆಚ್ಚಿಸುವ ಕಾರಣದಿಂದ ಈ ಕಾನೂನನ್ನು ಜಾರಿಗೆ ತಂದದ್ದೇ ಆಗಿದ್ದರೆ, ಈ ಕಾನೂನೇ ಗೋವುಗಳ ಸಂಖ್ಯೆಯ ಇಳಿಮುಖಕ್ಕೆ ಕಾರಣವಾಗುತ್ತದೆ. ರೈತರ ಪಾಲಿಗೆ ಗೋಸಾಕಣೆಯೆನ್ನುವುದು ಆರ್ಥಿಕ ವ್ಯವಹಾರ. ಯಾರೂ ಗೋವನ್ನು ಮಾತೆ ಎನ್ನುವ ಕಾರಣಕ್ಕಾಗಿ ಅಥವಾ ಪೂಜಿಸುವುದಕ್ಕಾಗಿ ಸಾಕುವುದಿಲ್ಲ. ಆರ್ಥಿಕ ಸ್ವಾವಲಂಬನೆಗಾಗಿ ಗೋವುಗಳನ್ನು ರೈತರು ಸಾಕುತ್ತಾರೆ. ಅವರ ಪಾಲಿಗೆ ಗೋವುಗಳೆಂದರೆ ಕರೆನ್ಸಿಯೂ ಹೌದು. ಹಾಲು ಕೊಡುವ ಜಾನುವಾರುಗಳನ್ನು ಯಾವ ರೈತನೂ ಮಾರುವುದಿಲ್ಲ. ಮನೆಯ ರಿಪೇರಿಗೆ, ಮಗಳ ಮದುವೆಗೆ ಹಟ್ಟಿಯಲ್ಲಿದ್ದ ಹಾಲು ಕೊಡದ ಗೋವುಗಳನ್ನು ಮಾರಿ ರೈತರು ಹಣ ಹೊಂದಿಸುತ್ತಾರೆ ಅಥವಾ ಈ ಅನುಪಯುಕ್ತ ಜಾನುವಾರುಗಳನ್ನು ಮಾರಿ ಹಾಲು ಕೊಡುವ ಗೋವುಗಳಿಗೆ ಬೇಕಾದ ಆಹಾರ ಸವಲತ್ತುಗಳನ್ನು ಒದಗಿಸುತ್ತಾರೆ. ಹಾಲುಕೊಡದ ಜಾನುವಾರುಗಳನ್ನು ಸಾಕುವುದೆಂದರೆ ರೈತರಿಗೆ ಆರ್ಥಿಕ ನಷ್ಟ.

ಅವುಗಳನ್ನು ಮಾರಿದರೆ ಅವರಿಗೆ ಆರ್ಥಿಕವಾಗಿ ಲಾಭವಾಗುತ್ತದೆ ಮಾತ್ರವಲ್ಲ, ಅವುಗಳನ್ನು ಸಾಕುವ ಹೊರೆಯಿಂದಲೂ ಪಾರಾಗುತ್ತಾರೆ. ಹೈನೋದ್ಯಮ ಲಾಭದಾಯಕವಾಗಿದ್ದಾಗ ಮಾತ್ರ ರೈತರು ಹೆಚ್ಚು ಹೆಚ್ಚು ದನಗಳನ್ನು ಸಾಕ ತೊಡಗುತ್ತಾರೆ. ಹೇಗೆ ಗೋವುಗಳ ಸೆಗಣಿ, ಮೂತ್ರ ಇತ್ಯಾದಿಗಳನ್ನು ಗೊಬ್ಬರಕ್ಕೆ ಬಳಸಲಾಗುತ್ತದೆಯೋ ಹಾಗೆಯೇ ಚರ್ಮೋದ್ಯಮ ನಿಂತಿರುವುದು ಜಾನುವಾರುಗಳ ಚರ್ಮಗಳ ಮೂಲಕ. ದೇಶದಲ್ಲಿ ಚರ್ಮೋದ್ಯಮ ಬೆಳೆಯಬೇಕು ಎಂದು ಪ್ರಧಾನಿ ಮೋದಿಯವರೇ ಕರೆ ಕೊಟ್ಟಿದ್ದಾರೆ. ನಕಲಿ ಗೋರಕ್ಷಕರಿಂದಾಗಿ ಈ ಚರ್ಮೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಗೋಮಾಂಸಾಹಾರಿಗಳೂ ಹೈನೋದ್ಯಮದ ಭಾಗವೇ ಆಗಿದ್ದಾರೆ. ದೇಶದ ಬಹುಸಂಖ್ಯೆಯ ಜನರು ಗೋಮಾಂಸಾಹಾರಿಗಳಾಗಿರುವುದರಿಂದ ಹಾಲು ಕೊಡದ ದನಗಳನ್ನು ಈ ಮೂಲಕವೂ ಸದುಪಯೋಗ ಪಡಿಸಲಾಗುತ್ತದೆ. ಇದು ರೈತರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸಿದೆ. ಯಾವಾಗ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿಯಾಗುತ್ತದೆಯೋ, ಇಂತಹ ದನಗಳನ್ನು ಸಾಕುವ ವೆಚ್ಚ ರೈತರ ತಲೆಯ ಮೇಲೆ ಬೀಳುತ್ತದೆ. ಅನಿವಾರ್ಯವಾಗಿ ಅವರು ಗೋವುಗಳನ್ನು ಕಾಡಿಗೆ ಅಟ್ಟಿ ಬಿಡಬೇಕಾಗುತ್ತದೆ ಅಥವಾ ಗೋಶಾಲೆಗಳಿಗೆ ಸೇರಿಸಬೇಕಾಗುತ್ತದೆ. ಈ ಗೋಶಾಲೆಗಳನ್ನು ನಡೆಸುವ ಅನಗತ್ಯ ವೆಚ್ಚ ಸರಕಾರದ ತಲೆಯ ಮೇಲೆ ಬೀಳುತ್ತದೆ. ಈಗಾಗಲೇ ಗೋಶಾಲೆಗಳ ಅವ್ಯವಸ್ಥೆಯಿಂದಾಗಿ ನೂರಾರು ಗೋವುಗಳು ಬರ್ಬರವಾಗಿ ಹಸಿವಿನಿಂದ ಮತ್ತು ರೋಗಗಳಿಂದ ಸತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ.

ರೈತರು ಸಾಕಿದ ಗೋವುಗಳನ್ನು ಮಾರಾಟ ಮಾಡುವ ಹಕ್ಕು ರೈತರಿಗೇ ಬಿಟ್ಟುಕೊಟ್ಟರೆ ಈ ಯಾವ ಸಮಸ್ಯೆಗಳೂ ಸೃಷ್ಟಿಯಾಗುವುದಿಲ್ಲ. ಈ ಕಾನೂನು ರೈತರಿಗೆ ಕಿರುಕುಳ ಕೊಟ್ಟು ಅವರು ಗೋವುಗಳನ್ನು ಸಾಕದಂತೆ ಮಾಡುವ ಒಂದೇ ಉದ್ದೇಶದಿಂದ ಜಾರಿಗೊಂಡಿದೆ ಎನ್ನುವುದಕ್ಕೆ ಇನ್ನಷ್ಟು ಉದಾಹರಣೆಗಳನ್ನು ನೀಡಬಹುದು.13 ವರ್ಷ ಮೇಲ್ಪಟ್ಟ ಗೋವುಗಳನ್ನಷ್ಟೇ ಕಡಿಯಬಹುದು ಎಂದು ಕಾನೂನು ಹೇಳುತ್ತದೆ. ಜಾನುವಾರುಗಳಿಗೆ ಇಷ್ಟು ವರ್ಷವಾಗಿದೆ ಎನ್ನುವ ಪ್ರಮಾಣ ಪತ್ರವನ್ನು ನೀಡುವವರು ಯಾರು? ಕರು ಹುಟ್ಟಿದ ಕೂಡಲೇ ಅದನ್ನು ಸ್ಥಳೀಯ ಪಂಚಾಯತ್ ಅಥವಾ ಮನಪಾದಲ್ಲಿ ದಿನಾಂಕವನ್ನು ದಾಖಲಿಸಬೇಕೇ? ಸರಕಾರ ಅಂತಹ ಜನನ ಪ್ರಮಾಣ ಪತ್ರವನ್ನು ನೀಡುವ ಉದ್ದೇಶವನ್ನು ಹೊಂದಿದೆಯೇ? ಕಿರುಕುಳ ನೀಡಬೇಕು ಎಂದಾದರೆ 13 ವರ್ಷ ದಾಟಿರುವ ಗೋವನ್ನೂ ಪೊಲೀಸರು 13 ವರ್ಷ ದಾಟಿಲ್ಲ ಎಂದು ಪ್ರಕರಣ ದಾಖಲಿಸಬಹುದು ಅಥವಾ ಲಂಚ ನೀಡಿ 13 ವರ್ಷ ಆಗಿದೆ ಎಂದೂ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು. ಈಗಾಗಲೇ ಗೋಶಾಲೆಗಳು ಬೃಹತ್ ಹಗರಣವಾಗಿ ಮಾರ್ಪಟ್ಟಿವೆ. ಹೊಸ ಕಾನೂನು ರೈತರನ್ನು ಬೆದರಿಸಲು, ದೋಚಲು ಸರಕಾರಿ ಅಧಿಕಾರಿಗಳಿಗೆ ಅಧಿಕೃತವಾಗಿ ಪರವಾನಿಗೆ ನೀಡಿದೆ. ಇದರ ಜೊತೆಗೆ ನಕಲಿ ಗೋರಕ್ಷಕರಿಗೆ ರಕ್ಷಣೆಯನ್ನೂ ಕಾನೂನು ನೀಡುತ್ತದೆ.

ಅವರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು ಎಂದೂ ಕಾಯ್ದೆ ಹೇಳುತ್ತದೆ. ‘ನಕಲಿ ಗೋರಕ್ಷಕರ’ ಹೆಸರಿನಲ್ಲಿ ಬೀದಿಯಲ್ಲಿ ಕತ್ತಿ ದೊಣ್ಣೆ ಹಿಡಿದು ತಿರುಗಾಡುತ್ತಿರುವವರು ಯಾರು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಪುಡಿ ರೌಡಿಗಳು, ಕ್ರಿಮಿನಲ್ ಹಿನ್ನೆಲೆಯಿರುವ ದುಷ್ಕರ್ಮಿಗಳು ಗೋರಕ್ಷಣೆಯ ಹೆಸರಿನಲ್ಲಿ ಜನರನ್ನು, ರೈತರನ್ನು ಪೀಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ, ರೈತರ ಮೇಲೆ ಇವರ ದಾಂಧಲೆ ಹೆಚ್ಚುತ್ತವೆ. ರೈತರು ತಾವು ಸಾಕಿದ ಅನುಪಯುಕ್ತ ಹಸುಗಳನ್ನು ಇವರ ಕೈಗೆ ಒಪ್ಪಿಸಿ ತೆಪ್ಪಗೆ ಇರಬೇಕಾಗುತ್ತದೆ. ದುಷ್ಕರ್ಮಿಗಳು ರೈತರ ವಿರುದ್ಧ ಕಾನೂನು ಕೈಗೆತ್ತಿಕೊಂಡರೆ ಇವರ ಮೇಲೆ ದೂರು ಸಲ್ಲಿಸುವ ಹಕ್ಕು ಕೂಡ ರೈತರಿಗಿಲ್ಲದಂತಾಗುತ್ತದೆ. ಹಂತಹಂತವಾಗಿ ರೈತ ವಿರೋಧಿ ಕಾನೂನುಗಳು ಕೇಂದ್ರದಲ್ಲೂ, ರಾಜ್ಯದಲ್ಲೂ ಜಾರಿಗೊಳ್ಳುತ್ತಿವೆೆ. ಅದರ ಭಾಗವಾಗಿಯೇ ಗೋ ಹತ್ಯೆ ನಿಷೇಧ ಕಾನೂನು ರಾಜ್ಯದಲ್ಲಿ ಜಾರಿಗೊಂಡಿರುವುದು. ಹೇಗೆ ಕೃಷಿ ವಲಯವನ್ನು ಕಾರ್ಪೊರೇಟ್ ಸಂಸ್ಥೆಗಳು ಕೈವಶ ಮಾಡಿಕೊಳ್ಳಲು ಸರಕಾರವನ್ನು ಬಳಸಿಕೊಳ್ಳುತ್ತಿವೆಯೋ ಹಾಗೆಯೇ ಹೈನೋದ್ಯಮವನ್ನು ರೈತರ ಕೈಯಿಂದ ಕಿತ್ತು ಕಾರ್ಪೊರೇಟ್ ಶಕ್ತಿಗಳಿಗೆ ಒಪ್ಪಿಸುವ ಭಾಗವಾಗಿ ಈ ಮಸೂದೆ ಅಂಗೀಕಾರವಾಗಿದೆ.

ರೈತರ ಮೇಲೆ ಮಾತ್ರವಲ್ಲದೆ, ಆಹಾರ ಸರಪಣಿಯ ಮೇಲೂ ದುಷ್ಪರಿಣಾಮ ಬೀರಲಿದೆ. ದೇಶದ ಜನರ ಕೈಯಿಂದ ಗೋಮಾಂಸವನ್ನು ಕಿತ್ತು ಸಂಪೂರ್ಣವಾಗಿ ವಿದೇಶಗಳಿಗೆ ರಫ್ತು ಮಾಡಲು ಬೃಹತ್ ಕಂಪೆನಿಗಳು ಯೋಜನೆಗಳನ್ನು ಹಾಕಿಕೊಂಡಿವೆ. ದೇಶದೊಳಗೆ ಗೋಮಾಂಸ ಸಂಪೂರ್ಣ ಇಲ್ಲವಾದರೆ ಇತರ ಮಾಂಸಗಳು ಮತ್ತು ತರಕಾರಿಗಳ ಬೆಲೆ ಇನ್ನಷ್ಟು ಹೆಚ್ಚಬಹುದು. ಗೋಹತ್ಯೆ ಮಸೂದೆ ರೈತರ ಬೇಡಿಕೆಯಾಗಿರಲಿಲ್ಲ. ಯಾವೊಬ್ಬ ರೈತನೂ ಇಂತಹದೊಂದು ಕಾನೂನು ಬೇಕು ಎಂದು ಸರಕಾರದ ಬಳಿಕ ಕೇಳಿಕೊಂಡಿರಲಿಲ್ಲ. ಆದರೂ ಆತುರಾತುರವಾಗಿ ಸರಕಾರ ಜಾರಿಗೆ ತಂದಿರುವ ಈ ಕಾನೂನು ರೈತ ವಿರೋಧಿ, ಜನವಿರೋಧಿ ಕಾನೂನು. ಜನತೆ ಒಂದಾಗಿ ಇದನ್ನು ವಿರೋಧಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ಗೋವುಗಳನ್ನು ನಾವು ಬೃಹತ್ ಫಾರ್ಮ್‌ಗಳಲ್ಲಿ ಮಾತ್ರ ನೋಡುವ ದಿನಗಳು ಬರಲಿವೆ. ರೈತರು ಅಳಿದುಳಿದ ಬದುಕುವ ಹಕ್ಕನ್ನೂ ಕಳೆದುಕೊಂಡು ಆ ಡೈರಿ ಫಾರ್ಮ್‌ಗಳಲ್ಲಿ ಕೂಲಿ ಕಾರ್ಮಿಕರಾಗಿ ಬದುಕಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News