​ಜೈಪುರ: ಒಂದೇ ಗಂಟೆಯಲ್ಲಿ 9 ಶಿಶುಗಳ ಮೃತ್ಯು

Update: 2020-12-11 03:57 GMT
ಸಾಂದರ್ಭಿಕ ಚಿತ್ರ

ಜೈಪುರ: ರಾಜಸ್ಥಾನದ ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ಗಂಟೆಯಲ್ಲಿ ಒಂಬತ್ತು ನವಜಾಶ ಶಿಶುಗಳು ಮೃತಪಟ್ಟಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ವರ್ಷ ಇದೇ ಆಸ್ಪತ್ರೆಯಲ್ಲಿ ಮಕ್ಕಳ ಸಾವು ದೊಡ್ಡ ಪ್ರಮಾಣದಲ್ಲಿ ಸಂಭವಿಸಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಕೋಟಾದ ಜೆ.ಕೆ.ಲಾನ್ ಆಸ್ಪತ್ರೆಯಲ್ಲಿ ಒಟ್ಟು ಒಂಬತ್ತು ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಎಲ್ಲ ಮಕ್ಕಳು ಒಂದರಿಂದ ನಾಲ್ಕು ದಿನದ ಹಿಂದೆ ಹುಟ್ಟಿದ ಮಕ್ಕಳು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆರೋಗ್ಯ ಸಚಿವ ರಘು ಶರ್ಮಾ ಆದೇಶಿಸಿದ್ದಾರೆ.

"ಇದು ಸಹಜ ಸಾವು; ಅಸಾಮಾನ್ಯವೇನಲ್ಲ; ಸಾವಿಗೆ ಯಾವುದೇ ಗಂಭೀರ ಕಾರಣ ಅಥವಾ ಸೋಂಕು ಇರಲಿಲ್ಲ" ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಸುರೇಶ್ ದುರಾಲಾ ಹೇಳಿಕೊಂಡಿದ್ದಾರೆ.

ಕೋಟಾ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರು ಆರೋಗ್ಯ ಇಲಾಖೆಗೆ ನೀಡಿದ ಮಾಹಿತಿಯ ಪ್ರಕಾರ, ಮೂರು ಮಕ್ಕಳನ್ನು ಜೆ.ಕೆ.ಲಾನ್ ಆಸ್ಪತ್ರೆಗೆ ಕರೆ ತರುವ ವೇಳೆಯೇ ಅವರು ಮೃತಪಟ್ಟಿದ್ದರು. ಅಷ್ಟೇ ಮಕ್ಕಳಿಗೆ ಜನ್ಮಜಾತ ಗಂಭೀರ ಸಮಸ್ಯೆಗಳಿದ್ದವು. ವಿಭಾಗಾಧಿಕಾರಿ ಕೆ.ಸಿ.ಮೀನಾ, ಜಿಲ್ಲಾಧಿಕಾರಿ ಉಜ್ವಲ್ ರಾಠೋಡ್ ಆಸ್ಪತ್ರೆಗೆ ಗುರುವಾರ ಸಂಜೆ ಭೇಟಿ ನೀಡಿ ಸಭೆ ನಡೆಸಿದರು.

ಪರಿಸ್ಥಿತಿಯ ಮೇಲೆ ನಿಗಾ ಇಡುವ ಸಲುವಾಗಿ ತಕ್ಷಣ ಆರು ಮಂದಿ ಹೆಚ್ಚುವರಿ ವೈದ್ಯರನ್ನು ಮತ್ತು 10 ಮಂದಿ ಹೆಚ್ಚುವರಿ ನರ್ಸ್‌ಗಳನ್ನು ನಿಯೋಜಿಸುವಂತೆ ಮೀನಾ ಸೂಚನೆ ನೀಡಿದ್ದಾರೆ. 2019ರ ಡಿಸೆಂಬರ್‌ನಲ್ಲಿ ಇದೇ ಆಸ್ಪತ್ರೆಯಲ್ಲಿ 100 ಮಕ್ಕಳು ಮೃತಪಟ್ಟಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News