ಮುಂದಿನ ವರ್ಷದಿಂದ ನಾಲ್ಕು ಬಾರಿ ಜೆಇಇ ಪರೀಕ್ಷೆ : ಕೇಂದ್ರ ಸರ್ಕಾರ ಚಿಂತನೆ

Update: 2020-12-11 05:25 GMT

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬದಲಾದ ಶೈಕ್ಷಣಿಕ ವೇಳಾಪಟ್ಟಿ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಪ್ರವೇಶಕ್ಕಾಗಿ ನಡೆಸುವ ಜೆಇಇ (ಮೈನ್) ಪರೀಕ್ಷೆಯನ್ನು ವರ್ಷಕ್ಕೆ ನಾಲ್ಕು ಬಾರಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈ ಮಧ್ಯೆ ಪಠ್ಯಕ್ರವನ್ನು ಹೆಚ್ಚು ತಾರ್ಕಿಕಗೊಳಿಸುವ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆಗಳಲ್ಲಿ ಆಯ್ಕೆ ಅವಕಾಶವನ್ನು ಪರಿಚಯಿಸುವ ನಿಟ್ಟಿನಲ್ಲೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಕಾರ್ಯೋನ್ಮುಖವಾಗಿದೆ.

ವಿದ್ಯಾರ್ಥಿಗಳು ಹಲವು ಪರೀಕ್ಷೆಗಳನ್ನು ಎದುರಿಸುವ ಹಿನ್ನೆಲೆಯಲ್ಲಿ ಒಂದು ಪರೀಕ್ಷೆ ನಡೆಯುವ ಅವಧಿಯಲ್ಲೇ ಇನ್ನೊಂದು ಪರೀಕ್ಷೆ ಎದುರಿಸಬೇಕಾಗುವ ಪರಿಸ್ಥಿತಿಯನ್ನು ಗಮನಿಸಿ ಯಾವ ವಿದ್ಯಾರ್ಥಿಗಳಿಗೂ ಅವಕಾಶ ನಷ್ಟವಾಗಬಾರದು ಎಂಬ ಉದ್ದೇಶದಿಂದ 2021ರ ಫೆಬ್ರುವರಿ ಮತ್ತು ಮೇ ತಿಂಗಳ ನಡುವೆ ನಾಲ್ಕು ಬಾರಿ ಜೆಇಇ (ಮೈನ್) ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗುರುವಾರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಜತೆ ನಡೆಸಿದ ಸಂವಾದದ ವೇಳೆ ಸ್ಪಷ್ಟಪಡಿಸಿದರು.

ಅಭ್ಯರ್ಥಿಗಳು ಎಲ್ಲ ನಾಲ್ಕು ಪರೀಕ್ಷೆ ತೆಗೆದುಕೊಳ್ಳಲೂ ಅವಕಾಶ ನೀಡಲಾಗುವುದು. ಅತ್ಯುತ್ತಮ ಸಾಧನೆಯನ್ನು ಅಂತಿಮ ರ್ಯಾಂಕಿಂಗ್‌ಗೆ ಪರಿಗಣಿಸಲಾಗುವುದು ಎಂದು ಹೇಳಿದರು.

2021ನೇ ವರ್ಷಕ್ಕೆ ಹಾಲಿ ಪಠ್ಯಕ್ರಮ ಮುಂದುವರಿಯಲಿದೆ. ಈ ಮಧ್ಯೆ ವಿದ್ಯಾರ್ಥಿಗಳಿಗೆ ಒಟ್ಟು 90 ಪ್ರಶ್ನೆಗಳ ಪೈಕಿ 75 (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದ ತಲಾ 25) ಪ್ರಶ್ನೆಗಳಿಗೆ ಉತ್ತರಿಸಲು ಆಯ್ಕೆ ಅವಕಾಶ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ವಿವರಿಸಿದರು. ಪ್ರಸ್ತುತ ವಿದ್ಯಾರ್ಥಿಗಳು ಎಲ್ಲ 90 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸುವ ದಿನಾಂಕದ ಸಂಬಂಧ ಎಲ್ಲ ಹಕ್ಕುದಾರರ ಜತೆ ಸಮಾಲೋಚಿಸಲಾಗುತ್ತಿದೆ. ಪರೀಕ್ಷೆಗೆ ಮೊದಲು ಪ್ರಾಯೋಗಿಕ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಪರ್ಯಾಯದ ಬಗ್ಗೆ ಚಿಂತಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News