ಕಫೀಲ್ ಖಾನ್ ಬಿಡುಗಡೆಗೊಳಿಸುವ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಉ.ಪ್ರ. ಸರಕಾರ

Update: 2020-12-12 16:19 GMT

ಲಕ್ನೊ, ಡಿ.12: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾಷಣ ಮಾಡಿದ್ದ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನದಲ್ಲಿದ್ದ ವೈದ್ಯ ಕಫೀಲ್ ಖಾನ್‌ರನ್ನು ಬಿಡುಗಡೆಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಉತ್ತರಪ್ರದೇಶ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಕಫೀಲ್ ಖಾನ್ ಮಾಡಿದ್ದ ಭಾಷಣದಲ್ಲಿ ದ್ವೇಷ ಅಥವಾ ಹಿಂಸಾಚಾರಕ್ಕೆ ಉತ್ತೇಜನ ನೀಡುವ ಯಾವುದೇ ಅಂಶ ಕಂಡು ಬರುವುದಿಲ್ಲ. ಆದ್ದರಿಂದ ಅವರ ಬಂಧನ ಅಕ್ರಮ ಎಂದು ಸೆ.1ರಂದು ಹೇಳಿದ್ದ ಹೈಕೋರ್ಟ್ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿತ್ತು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕಫೀಲ್ ಖಾನ್, ರಾಜ್ಯದ ವೈದ್ಯಕೀಯ ಸೇವಾ ಇಲಾಖೆಯಲ್ಲಿ ತಾನು ಹೊಂದಿದ್ದ ಉದ್ಯೋಗವನ್ನು ಮರಳಿ ನೀಡಬೇಕೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ಕೇಳುವುದಾಗಿ ಹೇಳಿದ್ದರು. 2017ರಲ್ಲಿ ಗೋರಖ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಹಲವು ಮಕ್ಕಳು ಸಾವನ್ನಪ್ಪಿದ ಪ್ರಕರಣದ ಬಳಿಕ ಕಫೀಲ್ ಖಾನ್‌ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ನಂತರ ನಡೆದ ಇಲಾಖಾ ತನಿಖೆಯಲ್ಲಿ ಖಾನ್ ವಿರುದ್ಧದ ಹಲವು ಪ್ರಕರಣಗಳು ಸಾಬೀತಾಗದಿದ್ದರೂ, ಕಳೆದ ವರ್ಷ ಆಲಿಗಢ ಮುಸ್ಲಿಂ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಭಾಷಣ ಮಾಡಿರುವುದು ಅವರನ್ನು ಮತ್ತೆ ಸಂಕಷ್ಟಕ್ಕೆ ದೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News