ಕಸ್ತೂರಿ ರಂಗನ್ ಸಮಿತಿ ಶಿಫಾರಸ್ಸು: ಹಸಿರು ನ್ಯಾಯಮಂಡಳಿ ಗಮನ ಸೆಳೆಯಲು ಸರಕಾರ ನಿರ್ಧಾರ

Update: 2020-12-13 17:57 GMT

ಬೆಂಗಳೂರು, ಡಿ.13: ರಾಜ್ಯ ಸರಕಾರವು ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸಿನಿಂದ ಎದುರಾಗುವ ಸಮಸ್ಯೆಗಳ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಎದುರು ಬಿಚ್ಚಿಡಲು ನಿರ್ಧರಿಸಿದ್ದು, ಆ ಮೂಲಕ ಮಲೆನಾಡು ಭಾಗದವರಲ್ಲಿನ ಜನರ ಆತಂಕವನ್ನು ನಿವಾರಿಸಲು ಮುಂದಾಗಿದ್ದಾರೆ.

ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿರುವ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಪರಿಸರ ಸೂಕ್ಷ್ಮ ಪ್ರದೇಶದೊಳಗೆ ಸೇರಿರುವ ಗ್ರಾಮಸ್ಥರ ಹಿತಾಸಕ್ತಿ ಕಾಪಾಡಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ವರದಿಯಲ್ಲಿ ಗುರುತಿಸಿದ ರಾಜ್ಯದ ಅರಣ್ಯ ಮತ್ತು ಅರಣ್ಯೇತರ ಭೂಮಿಯನ್ನೊಳಗೊಂಡ 1,533 ಗ್ರಾಮಗಳಿರುವ 20,668 ಚದರ ಕಿ.ಮೀ ಪ್ರದೇಶವನ್ನು ಕಡಿಮೆಗೊಳಿಸುವಲ್ಲಿ ಈ ಯಾವ ಕ್ರಮಗಳೂ ಫಲ ನೀಡಿಲ್ಲ. ಹೀಗಾಗಿ, ಮುಂದೆ ಯಾವುದೇ ತೀರ್ಮಾನ ಕೈಕೊಳ್ಳದಿರಲು ನಿರ್ಧರಿಸಿರುವ ಸರಕಾರ, ಹಸಿರು ನ್ಯಾಯಮಂಡಳಿ ಮಂಡಳಿ ಎದುರು ಇದನ್ನು ಪ್ರಸ್ತಾಪಿಸಲಿದೆ.

ರಾಜ್ಯದ ನೈಜ ಕಾಳಜಿಯನ್ನು ಹಸಿರು ನ್ಯಾಯ ಮಂಡಳಿಯು ಸಮರ್ಪಕವಾಗಿ ಪರಿಗಣಿಸಿಲ್ಲ. ಅಲ್ಲದೆ, ಈ ವಿಷಯದ ಕುರಿತ ಚರ್ಚೆಯನ್ನು ನಿರಂತರವಾಗಿ ಮುಂದೂಡುತ್ತಲೇ ಬಂದಿದೆ. ಹೀಗಾಗಿ, ಪ್ರಸ್ತುತ ಪರಿಸ್ಥಿತಿಯೇ ಮುಂದುವರಿದರೆ ಕೇಂದ್ರ ಸರಕಾರ ತಾನಾಗಿಯೇ ನಿರ್ಧಾರ ತೆಗೆದುಕೊಂಡು, ಪರಿಸರ ಸೂಕ್ಷ್ಮ ಪ್ರದೇಶ'ಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಅಂತಿಮಗೊಳಿಸಬಹುದು ಎಂಬ ಆತಂಕ ಸರಕಾರಕ್ಕೆ ಎದುರಾಗಿದೆ.

2014 ರಿಂದಲೂ ಕೇಂದ್ರ ಸರಕಾರ ಈ ವಿಷಯದಲ್ಲಿ ನಾಲ್ಕು ಕರಡು ಅಧಿಸೂಚನೆಗಳನ್ನು ಹೊರಡಿಸಿದ್ದು, ಎಲ್ಲ ಅಧಿಸೂಚನೆಗಳಿಗೆ ರಾಜ್ಯಗಳಿಂದ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ರಾಜ್ಯ ಸರಕಾರವೂ ಆಕ್ಷೇಪಣೆಯನ್ನು ಸಲ್ಲಿಸಿದ್ದು, ಈ ಅಧಿಸೂಚನೆಗಳು 18 ತಿಂಗಳಷ್ಟೇ ಚಾಲ್ತಿಯಲ್ಲಿರುತ್ತದೆ. ಹೀಗಾಗಿ, ಅಧಿಸೂಚನೆಗಳ ಅವಧಿ ಮುಕ್ತಾಯಗೊಂಡಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಆಧರಿಸಿ ಕಸ್ತೂರಿರಂಗನ್ ವರದಿಯಲ್ಲಿರುವ ವಿಷಯವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೈಗೆತ್ತಿಕೊಂಡಿದೆ. ಈ ವರದಿಯನ್ನು ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿರುವ ನ್ಯಾಯ ಮಂಡಳಿ, ವರದಿಯಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸದಿದ್ದರೆ ಕೇಂದ್ರದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ.

ವರದಿ ಅನುಷ್ಠಾನಗೊಂಡಿಲ್ಲ ಎಂದು ಸಲ್ಲಿಕೆಯಾಗಿದ್ದ ಮೂಲ ಅರ್ಜಿಯನ್ನು ನವೆಂಬರ್ 22ರಂದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ, ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. 2020 ಡಿಸೆಂಬರ್ 31 ರೊಳಗೆ ಕರಡು ಅಧಿಸೂಚನೆ ಅಂತಿಮಗೊಳಿಸಬೇಕು. ಒಂದು ವೇಳೆ ಅಂತಿಮಗೊಳಿಸದಿದ್ದರೆ ಅಧಿಕಾರಿಯ ವೇತನವನ್ನು ಹಸಿರು ನ್ಯಾಯ ಮಂಡಳಿಯ ನಿಯಮಗಳ ಪ್ರಕಾರ ಬಿಡುಗಡೆಗೊಳಿಸುವುದಿಲ್ಲ ಎಂದು 2020ರ ಸೆಪ್ಟೆಂಬರ್ ನಲ್ಲಿ ಆದೇಶಿಸಿದೆ. ಆ ಗಡುವಿನ ಒಳಗೆ, ವರದಿಯಲ್ಲಿರುವ ಅಂಶಗಳ ಬಗ್ಗೆ ರಾಜ್ಯ ಸರಕಾರ ಅಂತಿಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News