ಸರ್ ಸೈಯದ್ ಅಹಮದ್ ಖಾನ್ ಎಂಬ ಅಮೂಲ್ಯ ಚೇತನ

Update: 2020-12-13 18:56 GMT
ಸರ್ ಸೈಯದ್ ಅಹಮದ್ ಖಾನ್

ಮುಸ್ಲಿಂ ಸಮುದಾಯದ ವಿರುದ್ಧ ಫ್ಯಾಶಿಸ್ಟ್ ಕೋಮುವಾದಿ ಶಕ್ತಿಗಳು ನಿತ್ಯವೂ ನಾನಾ ರೀತಿಯ ಸಂಚಯಗಳನ್ನು ನಡೆಸಿರುವ ಇಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ಸರ್ ಅಹಮದ್ ಖಾನ್ ಅವರ ಈ ಜೀವನ ಕಥನವನ್ನು ಎಲ್ಲರೂ ಓದಬೇಕಾಗಿದೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಇಂಥವರ ಕೋಡುಗೆಯನ್ನು ತಿಳಿಸಿ ಹೇಳಬೇಕಾಗಿದೆ. ಈ ಪುಸ್ತಕವನ್ನು ಪಠ್ಯಪುಸ್ತಕವನ್ನಾಗಿ ಮಾಡಿದರೆ ನಮ್ಮ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತದೆ.

ಭಾರತದ ಅತ್ಯಂತ ಕೆಟ್ಟ ಕಾಲದಲ್ಲಿ ನಾವಿದ್ದೇವೆ. ಒಂದು ಇಡೀ ಸಮುದಾಯವನ್ನೇ ಆತಂಕದ ಸ್ಥಿತಿಗೆ ತಳ್ಳಿ ರಾಷ್ಟ್ರ ನಿರ್ಮಾಣ ಮಾಡಲು ಹೊರಟಿದ್ದೇವೆ. ಶತಮಾನಗಳಿಂದ ಈ ನೆಲದಲ್ಲಿ ದುಡಿದು ಬದುಕು ಕಟ್ಟಿಕೊಳ್ಳುವ ಜೊತೆಗೆ ದೇಶವನ್ನು ಕಟ್ಟಿದ ಮುಸ್ಲಿಂನ ಬಾಂಧವರ ಬಗ್ಗೆ ಬಹುಸಂಖ್ಯಾತ ಹಿಂದೂಗಳಲ್ಲಿ ಸಂಶಯದ ವಾತಾವರಣ ನಿರ್ಮಾಣ ಮಾಡಲು ಮಸಲತ್ತುಗಳು ನಡೆಯುತ್ತಲೇ ಇವೆ. ಲವ್ ಜಿಹಾದ್, ಗೋಹತ್ಯೆ, ಮತಾಂತರದಂತಹ ಕತೆಗಳನ್ನು ಕಟ್ಟಿ ಆ ಸಮುದಾಯದಲ್ಲಿ ಅಭದ್ರತೆಯ ಭಾವನೆ ಮೂಡಿಸಲಾಗಿದೆ. ಈ ದೇಶದ ಮುಸ್ಲಿಮರು ಬೇರೇನನ್ನೂ ಕೇಳುವುದಿಲ್ಲ. ನಮ್ಮ ಪಾಡಿಗೆ ನಮ್ಮನ್ನು ನೆಮ್ಮದಿಯಾಗಿರಲು ಬಿಡಿ ಎಂಬುವುದೊಂದೇ ಅವರ ಬೇಡಿಕೆಯಾಗಿದೆ. ಇಂತಹ ಸಂಕಟದ ಸನ್ನಿವೇಶದಲ್ಲಿ ಡಾ.ಷಾಕಿರಾ ಖಾನಂ ಅವರು ಹಿಂದಿಯಿಂದ ಅನುವಾದಿಸಿದ 1857ರ ಜನಕ್ರಾಂತಿ ಮತ್ತು ಸರ್ ಸೈಯದ್ ಅಹಮದ್ ಖಾನ್ ಎಂಬ ಪುಸ್ತಕ ಓದಲು ಸಿಕ್ಕಿದೆ.

 ಸರ್ ಸೈಯದ್ ಅಹಮದ್ ಖಾನ್ ಎಂಬ ಹೆಸರನ್ನು ನಾನು ಕೇಳಿದ್ದು ಇದೇ ಮೊದಲ ಬಾರಿ. ನವ ಭಾರತದ ನಿರ್ಮಾಪಕರೆಂದರೆ ರಾಜಾರಾಮ ಮೋಹನರಾಯ್, ಈಶ್ವರ ಚಂದ್ರ ವಿದ್ಯಾಸಾಗರ, ರಾಮಕೃಷ್ಣ ಪರಮಹಂಸ, ಬಾಲ ಗಂಗಾಧರ ತಿಲಕ, ಗೋಪಾಲ ಕೃಷ್ಣ ಗೋಖಲೆ ಮುಂತಾದ ಹೆಸರುಗಳು ತಕ್ಷಣ ಕಣ್ಣಿಗೆ ಬೀಳುತ್ತವೆ. ಜ್ಯೋತಿಬಾ ಫುಲೆ, ಶಾಹು ಮಹಾರಾಜರ ಹೆಸರನ್ನು ಕೂಡ ತುಂಬಾ ತಡಮಾಡಿ ಎಂಭತ್ತರ ದಶಕದ ನಂತರ ಕೇಳುತ್ತಿದ್ದೇವೆ. ಆದರೆ ಈ ಪಟ್ಟಿಯಲ್ಲಿ ಸರ್ ಸೈಯದ್ ಅಹಮದ್ ಖಾನ್ (1817_-1898) ಹೆಸರಿಲ್ಲ. ಇವರ ಹೆಸರನ್ನು ಚರಿತ್ರೆಯ ಪುಟಗಳಿಂದ ಹುಡುಕಿ ತೆಗೆದವರು ಹಿರಿಯ ಹಿಂದಿ ಲೇಖಕ ಪ್ರೊ. ಶೈಲೇಶ ಜೈದಿ. ಇವರು ಹಿಂದಿಯಲ್ಲಿ ಬರೆದ ಪುಸ್ತಕವನ್ನು ಆಸಕ್ತಿಯಿಂದ ಕನ್ನಡಕ್ಕೆ ತಂದವರು ಬೆಂಗಳೂರಿನ ಅಲ್ _ ಅಮೀನ್ ಪದವಿ ಕಾಲೇಜಿನ ಹಿಂದಿ ಪ್ರಾಧ್ಯಾಪಕಿ ಡಾ.ಷಾಕಿರಾ ಖಾನಂ. ಈ ಪುಸ್ತಕವನ್ನು ಪ್ರಕಟಿಸಿದವರು ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ. ಇದನ್ನು ಓದಿದ ನಂತರ ಚರಿತ್ರೆಯಲ್ಲಿ ಮುಚ್ಚಿ ಹೋದ ಇನ್ನಷ್ಟು ಸತ್ಯ ಸಂಗತಿಗಳನ್ನು ತಿಳಿದುಕೊಳ್ಳಲು ನನಗೆ ಸಾಧ್ಯವಾಯಿತು.

1857ರ ಮೊದಲ ಸ್ವಾತಂತ್ರ ಸಂಗ್ರಾಮಕ್ಕೆ ಸಾಕ್ಷಿಯಾಗಿದ್ದ ಸರ್ ಸೈಯದ್ ಅಹಮದ್ ಖಾನ್ ಸಮಾನ್ಯ ವ್ಯಕ್ತಿಯಲ್ಲ. ಆ ಕಾಲದಲ್ಲಿ ಪಾಶ್ಚಾತ್ಯ ವಿದ್ಯಾಭ್ಯಾಸದಿಂದ ಹೊಸ ಬಗೆಯ ಚಿಂತನೆಗಳಿಗೆ ತೆರೆದುಕೊಂಡ ಅವರು ಮೂಲಭೂತವಾದಿ ಶಕ್ತಿಗಳನ್ನು ಎದುರು ಹಾಕಿಕೊಂಡು ಸೈಂಟಿಫಿಕ್ ಸೊಸೈಟಿಯನ್ನು ಸ್ಥಾಪಿಸಿದರು. ಆಧುನಿಕ ಶಿಕ್ಷಣದಿಂದ ಮಾತ್ರ ಜನಸಾಮಾನ್ಯರ ಏಳಿಗೆ ಸಾಧ್ಯ ಎಂದು ನಂಬಿದ ಅವರು 1859ರಷ್ಟು ಹಿಂದೆಯೇ ಮುರಾದಾಬಾದ್‌ನಲ್ಲಿ, ಗಾಜಿಪುರದಲ್ಲಿ ಶಾಲೆಗಳನ್ನು ಸ್ಥಾಪಿಸಿದರು. ಅತ್ಯಂತ ಪ್ರಸಿದ್ಧವಾದ ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದವರು ಸರ್ ಸೈಯದ್ ಅಹಮದ್ ಖಾನ್.ಬರೀ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ ಪತ್ರಿಕೋದ್ಯಮ ಸೇರಿ ಹಲವಾರು ಕ್ಷೇತ್ರಗಳಲ್ಲಿ ಅವರು ಮಹತ್ತರ ಕೆಲಸ ಮಾಡಿದರು.

ಹಿಂದೂ ಮುಸ್ಲಿಮ್ ಏಕತೆಯ ಅಗ್ರ ಪ್ರತಿಪಾದಕರಾಗಿದ್ದ ಸರ್ ಸೈಯದ್ ಅಹಮದ್ ಖಾನ್ ಅವರ ಮನೆ 1857ರ ಜನ ಕ್ರಾಂತಿಯಲ್ಲಿ ಸಂಪೂರ್ಣ ಧ್ವಂಸವಾಯಿತು. ಅವರ ಸೋದರ ಮಾವ ಮತ್ತು ಸೋದರಳಿಯ ಬ್ರಿಟಿಷ್ ಸೈನಿಕರಿಂದ ಕೊಲ್ಲಲ್ಪಟ್ಟರು. ಆದರೂ ಧೃತಿಗೆಡದ ಸೈಯದ್ ಖಾನ್ ಅವರು ಜನ ಬಂಡಾಯದ ಪರವಾಗಿ ನಿಂತರು.

ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಸೈಯದ್ ಖಾನ್ 1839ರಲ್ಲಿ ಬ್ರಿಟಿಷರ ಕಂಪೆನಿ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದರಾದರೂ ದೇಶದ ಸ್ವಾತಂತ್ರದ ಪ್ರಶ್ನೆಯಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ವಿದ್ಯೆಯಲ್ಲಿ ಹಿಂದುಳಿದ ಮುಸ್ಲಿಂ ಸಮುದಾಯದ ಯುವಕರಿಗೆ ಅಕ್ಷರ ಕಲಿಸಲು ಹೊರಟಾಗ ಸಂಪ್ರದಾಯವಾದಿಗಳಿಂದ ಪ್ರಾಣ ಬೆದರಿಕೆಯನ್ನು ಎದುರಿಸಿದರು.

  ಸತಿ ಸಹಗಮನ ಪದ್ಧತಿಯನ್ನು ವಿರೋಧಿಸಿದ ರಾಜಾರಾಮ ಮೋಹನರಾಯ್ ಅವರಂತೆ ತಮ್ಮ ಸಮುದಾಯವನ್ನು ಕಂದಾಚಾರದಿಂದ ಪಾರು ಮಾಡಲು ಶ್ರಮಿಸಿದ ಸೈಯದ್ ಅಹ್ಮದ್ ಖಾನ್ ಸೈಂಟಿಫಿಕ್ ಸೊಸೈಟಿ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಸೈಯದ್ ಖಾನ್ ಅವರ ಕೊಡುಗೆಯನ್ನು ಮನದುಂಬಿ ಶ್ಲಾಘಿಸಿದ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಸರ್ ಸೈಯದ್ ಅಹಮದ್ ಖಾನರು ಮುಸ್ಲಿಮರಿಗೆ ಆಧುನಿಕ ಜ್ಞಾನ_ ವಿಜ್ಞಾನದ ಶಿಕ್ಷಣ ಕೊಡದೇ ಹೋಗಿದ್ದರೆ ಅಜ್ಞಾನ ಮತ್ತು ಗುಲಾಮಗಿರಿಯಲ್ಲಿ ನರಳುತ್ತಿದ್ದರು ಎಂದು ಹೇಳಿದ್ದಾರೆ.

 ಟಿಪ್ಪುಸುಲ್ತಾನ್‌ರಿಂದ ಹಿಡಿದು ಮೌಲಾನಾ ಅಬುಲ್ ಕಲಮ್ ಆಝಾದ್‌ರವರೆಗೆ ಈ ಭಾರತಕ್ಕೆ ಮುಸ್ಲಿಮರು ಸಾಕಷ್ಟು ಕೊಡುಗೆ ನೀಡಿದ್ದರೂ ಇಂದಿಗೂ ಅವರು ತಮ್ಮ ದೇಶ ಶಕ್ತಿಯನ್ನು ಪ್ರತಿನಿತ್ಯವೂ ಸಾಬೀತು ಮಾಡುತ್ತಾ ಹೆದರಿಕೊಂಡು ಜೀವಿಸ ಬೇಕಾಗಿದೆ. ಇದಕ್ಕೆ ಕಾರಣ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಈ ದೇಶವನ್ನು ವ್ಯಾಪಾರದ ಮೂಲಕ ಆಕ್ರಮಿಸಿದಾಗ ಅವರನ್ನು ಎದುರಿಸಿ ಪ್ರಾಣ ಪಣಕ್ಕಿಟ್ಟು ಹೋರಾಡಿದವರು ಮುಸ್ಲಿಮರು. ನೆಹರೂ ಅವರು ಹೇಳುವ ಪ್ರಕಾರ 1857ರ ಪ್ರಥಮ ಸ್ವಾತಂತ್ರ ಸಮರದಲ್ಲಿ ಮುಸ್ಲಿಮರು ಪ್ರಮುಖ ಪಾತ್ರ ವಹಿಸಿದ್ದರಿಂದ ತುಂಬಾ ತೊಂದರೆಗೊಳಗಾದರು. ಮುಸ್ಲಿಮರ ಅವಕಾಶದ ಬಾಗಿಲುಗಳೆಲ್ಲ ಮುಚ್ಚಿ ಹೋದವು. ಹೀಗಾಗಿ ಸರ್ ಸೈಯದ್ ಅಹಮದ್ ಖಾನ್‌ರಂತಹ ವಿದ್ವಾಂಸರ ಕೊಡುಗೆ ದಾಖಲಾಗಲಿಲ್ಲ.

 ಭಾರತದ ರಾಷ್ಟ್ರೀಯವಾದಿ ಚಳವಳಿಯಲ್ಲಿ ಪ್ರಮುಖವಾಗಿ ಎರಡು ಧಾರೆಗಳಿದ್ದವು. ಬಾಲಗಂಗಾಧರ ತಿಲಕ, ಲಾಲಾ ಲಜಪತ್‌ರಾಯ್, ಮಹಾದೇವ ವಿನಾಯಕ ರಾನಡೆ, ಸಾವರ್ಕರ್ ಮುಂತಾದವರು ಗಣೇಶೋತ್ಸವ, ಕಾಳಿ ಉತ್ಸವಗಳನ್ನು ಮಾಡಿ ಜನಜಾಗೃತಿ ಮೂಡಿಸಲು ಹೊರಟಿದ್ದರೆ ಸರ್ ಸೈಯದ್ ಅಹಮದ್ ಖಾನ್‌ರಂತಹವರು ಉದಾರವಾದಿ ಧಾರೆಗೆ ಸೇರಿದವರಾಗಿದ್ದರು. ಹಿಂದಿ, ಹಿಂದೂ, ಹಿಂದುಸ್ಥಾನ್ ಘೋಷಣೆಯನ್ನು ತಿರಸ್ಕರಿಸಿದ ಅಹಮದ್ ಖಾನರು ಹಿಂದಿ ಹಿಂದೂಗಳ ಭಾಷೆಯಲ್ಲ. ಉರ್ದು ಮುಸಲ್ಮಾನರ ಭಾಷೆಯಲ್ಲ. ಇವೆರಡೂ ಎಲ್ಲ ಭಾರತೀಯರ ಭಾಷೆಗಳು ಎಂದು ನೇರವಾಗಿ ಹೇಳಿದ್ದರು.

ಭಾರತ ಬಹುಧರ್ಮೀಯ, ಬಹುಭಾಷೆಯ ದೇಶ ಎಂಬುದನ್ನು ಒಪ್ಪಿದ್ದ ಸರ್ ಸೈಯದ್ ಖಾನ್ ಹಿಂದೂ-_ಮುಸ್ಲಿಂ ಸೌಹಾರ್ದದ ಅಗ್ರ ಪ್ರತಿಪಾದಕರಾಗಿದ್ದರು. ಶೈಲೇಶ ಜೈದಿ ಅವರ ಪುಸ್ತಕವನ್ನು ಷಾಕಿರಾ ಖಾನಂ ಚೆನ್ನಾಗಿ ಅನುವಾದಿಸಿದ್ದಾರೆ. ಆದರೆ ಶಬ್ದಾನುವಾದದ ಬದಲಾಗಿ ಭಾವಾನುವಾದವಾಗಿದ್ದರೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿತ್ತು. ಆದರೂ ಇಂತಹ ಮಹತ್ವದ ಕೃತಿಯನ್ನು ಕನ್ನಡಕ್ಕೆ ತರಲು ಅವರು ಪಟ್ಟ ಪರಿಶ್ರಮ ಶ್ಲಾಘನೀಯ ವಾಗಿದೆ.

ಸೆಕ್ಯುಲರ್ ಕಾಂಗ್ರೆಸ್ ಸರಕಾರವಿದ್ದಾಗಲೇ ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ಸರ್ ಸೈಯದ್ ಅಹಮದ್ ಖಾನ್ ರಂತಹವರ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಇನ್ನು ಈಗಂತೂ ಹೇಳಿ ಕೇಳಿ ಕೋಮುವಾದಿ ಸರಕಾರಗಳಿವೆ. ಈಗ ಇವರ ಹೆಸರು ದಾಖಲಿಸಲ್ಪಡುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವದರಲ್ಲಿ ಅರ್ಥವಿಲ್ಲ. ಈಗಾಗಲೇ ಸ್ವಾತಂತ್ರ ಸಂಗ್ರಾಮದಲ್ಲಿ ಮುಸ್ಲಿಂ ಮಹಿಳೆಯರ ಪಾತ್ರ, ಮುಸ್ಲಿಂ ಮಹಿಳೆಯರು ಮತ್ತು ಗಾಂಧಿ ಪತ್ರಗಳು ಎಂಬ ಪುಸ್ತಕಗಳನ್ನು ಕನ್ನಡಕ್ಕೆ ತಂದ ಡಾ.ಷಾಕಿರಾ ಖಾನಂ ಅವರು ಸರ್ ಸೈಯದ್ ಖಾನ್ ಅವರ ಪುಸ್ತಕ ಅನುವಾದಿಸಿ ಹಿಂದೂ _ ಮುಸ್ಲಿಂ ಸೌಹಾರ್ದದ ಜ್ಯೋತಿ ಇನ್ನಷ್ಟು ಪ್ರಜ್ವಲಿಸುವಂತೆ ಮಾಡಿದ್ದಾರೆ.ಶತಮಾನದ ಹಿಂದೆಯೇ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸುವುದು ಸಾಮಾನ್ಯ ಸಂಗತಿಯಲ್ಲ.ಅದಕ್ಕಾಗಿ ಸರ್ ಸೈಯದ್ ಅಹ್ಮದ್ ಖಾನರು ಸದಾ ಸ್ಮರಣೀಯರು.

ಮುಸ್ಲಿಂ ಸಮುದಾಯದ ವಿರುದ್ಧ ಫ್ಯಾಶಿಸ್ಟ್ ಕೋಮುವಾದಿ ಶಕ್ತಿಗಳು ನಿತ್ಯವೂ ನಾನಾ ರೀತಿಯ ಸಂಚಯಗಳನ್ನು ನಡೆಸಿರುವ ಇಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ಸರ್ ಅಹಮದ್ ಖಾನ್ ಅವರ ಈ ಜೀವನ ಕಥನವನ್ನು ಎಲ್ಲರೂ ಓದಬೇಕಾಗಿದೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಇಂಥವರ ಕೋಡುಗೆಯನ್ನು ತಿಳಿಸಿ ಹೇಳಬೇಕಾಗಿದೆ. ಈ ಪುಸ್ತಕವನ್ನು ಪಠ್ಯಪುಸ್ತಕವನ್ನಾಗಿ ಮಾಡಿದರೆ ನಮ್ಮ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News