ಮಾನವಹಕ್ಕು ದಿನಾಚರಣೆ ಅರ್ಥ ಕಳೆದುಕೊಳ್ಳದಿರಲಿ

Update: 2020-12-14 06:08 GMT

ಮಾನವ ಹಕ್ಕುಗಳ ಸುದೀರ್ಘ ದಮನಗಳೇ ಭಾರತದ ಚರಿತ್ರೆಯಾಗಿದೆ. ಮೊಗಲರು, ಬ್ರಿಟಿಷರು ಆಗಮಿಸುವ ಮೊದಲೂ ಈ ದೇಶದೊಳಗೆ ಬಹುಸಂಖ್ಯಾತ ಸಮುದಾಯ ಅತ್ಯಂತ ಭೀಕರ ಶೋಷಣೆಗಳಿಗೆ ಒಳಗಾಗಿತ್ತು. ಸ್ವಾತಂತ್ರಾನಂತರವೂ ಈ ದಮನ ಬೇರೆ ಬೇರೆ ರೂಪದಲ್ಲಿ ಮುಂದುವರಿದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ದೇಶದ ಸಮಸ್ತ ಶೋಷಿತ ಸಮುದಾಯದ ಪಾಲಿಗೆ ಡಿಸೆಂಬರ್ 10 ಅತ್ಯಂತ ಮುಖ್ಯದಿನವಾಗಬೇಕಾಗಿತ್ತು. ಯಾಕೆಂದರೆ ಅಂದು ಮಾನವ ಹಕ್ಕುಗಳ ದಿನ. ಪ್ರಜೆಗಳ ಮೂಲಕವೇ ಆಯ್ಕೆಯಾದ ಸರಕಾರದ ನೇತೃತ್ವದಲ್ಲೇ ಮಾನವ ಹಕ್ಕುಗಳ ಮೇಲೆ ದಾಳಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಡಿಸೆಂಬರ್ 10ನ್ನು ಸರಕಾರದ ನೇತೃತ್ವದಲ್ಲಿ ಆಚರಿಸುವುದಂತೂ ಸಾಧ್ಯವಿಲ್ಲದ ಮಾತು. ಕಾಟಾಚಾರದ ಪ್ರಕಟನೆೆಗಳಿಗಷ್ಟೇ ಈ ದಿನ ಸೀಮಿತವಾಯಿತು. ಇತ್ತೀಚೆಗೆ ನಡೆದ ಲಾಕ್‌ಡೌನ್, ಸ್ವಾತಂತ್ರಾನಂತರ ಭಾರತಾದ್ಯಂತ ನಡೆದ ಮಾನವ ಹಕ್ಕುಗಳ ಅತಿ ದೊಡ್ಡ ಉಲ್ಲಂಘನೆಯಾಗಿದೆ. ವಲಸೆ ಕಾರ್ಮಿಕರೂ ಸೇರಿದಂತೆ ಸಹಸ್ರಾರು ಜನರು ಬದುಕುವ ಹಕ್ಕನ್ನೇ ಕಳೆದುಕೊಂಡರು. ತುತ್ತು ಅನ್ನಕ್ಕಾಗಿ ಬೀದಿಗಿಳಿದ ಜನರ ಮೇಲೆ ಪೊಲೀಸರು ಅಮಾನುಷ ದಾಳಿ ನಡೆಸಿದರು. ಲಕ್ಷಾಂತರ ವಲಸೆ ಕಾರ್ಮಿಕರು ಆಹಾರ, ನಗದು ಹಾಗೂ ಆಶ್ರಯವಿಲ್ಲದೆ ಸಂಕಷ್ಟದಲ್ಲಿ ಸಿಲುಕಿದರು. ಈ ವಲಸಿಗರಿಗೆ ತಮ್ಮ ಊರಿಗೆ ಮರಳುವ ಛಲ ಹಾಗೂ ದೃಢನಿರ್ಧಾರವಿದ್ದುದನ್ನು ಸರಕಾರವು ಕಲ್ಪಿಸಿಕೊಳ್ಳಲೇ ಇಲ್ಲ. ವಲಸಿಗರು ತಂಡತಂಡವಾಗಿ ಬಿರುಬಿಸಿಲಲ್ಲೇ ಕಾಲ್ನಡಿಗೆಯಲ್ಲೇ ತಮ್ಮ ಊರುಗಳಿಗೆ ಮರಳುವ ದೃಶ್ಯಗಳು ಮನಕಲಕುತ್ತಿದ್ದವು.

ತಮ್ಮ ಊರಿಗೆ ಮರಳುವ ಮಹಾಯಾತ್ರೆಯಲ್ಲಿ ಈ ಬಡಪಾಯಿ ವಲಸಿಗರು ಅಂತರ್‌ರಾಜ್ಯ ಗಡಿಗಳಲ್ಲಿ ಪೊಲೀಸರ ತೀವ್ರ ದಬ್ಬಾಳಿಕೆಗೆ ತುತ್ತಾದರು. ಹಲವಾರು ಮಂದಿ ದಾರಿಮಧ್ಯೆ ಹಸಿವು, ಬಳಲಿಕೆ, ಅನಾರೋಗ್ಯ,ಅವಘಡಗಳಿಂದ ಸಾವನ್ನಪ್ಪಿದರು. ಈ ಅಮಾಯಕರು ಪೊಲೀಸ್ ದೌರ್ಜನ್ಯಕ್ಕೆ ಬಲಿಪಶುಗಳಾದರು.

ಈ ವಲಸೆ ಕಾರ್ಮಿಕರ ಬವಣೆಗಳ ಬಗ್ಗೆ ಗಮನಹರಿಸುವಂತೆ ಹಾಗೂ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶವನ್ನು ಕೂಡಾ ನೀಡಿತ್ತು. ಆದರೆ ಅದಕ್ಕೆ ಸರಕಾರ ಸೂಕ್ತವಾಗಿ ಪ್ರತಿಕ್ರಿಯಿಸಲಿಲ್ಲ.

 ಕೊರೋನ ಸೋಂಕಿನ ಹಾವಳಿಯ ಸಂದರ್ಭದಲ್ಲಿ ದುಡಿಯುವ ವರ್ಗವು ವ್ಯಾಪಕವಾಗಿ ಯಾತನೆಗೀಡಾಯಿತು. ಈ ಶ್ರಮಜೀವಿಗಳಿಗೆ ಸರಕಾರವು ಹೆಚ್ಚುಕಮ್ಮಿ ಎರಡು ತಿಂಗಳುಗಳ ಕಾಲ ತಮ್ಮ ಊರುಗಳಿಗೆ ತೆರಳಲು ಅವಕಾಶವನ್ನೇ ನಿರಾಕರಿಸಿತು. ಲಾಕ್‌ಡೌನ್ ಅವಧಿಯಲ್ಲಿ ಉದ್ಯಮ, ಸಂಸ್ಥಾಪನೆಗಳೆಲ್ಲವೂ ಮುಚ್ಚು ಗಡೆಗೊಂಡಿದ್ದರಿಂದ ಅವರಿಗೆ ವೇತನವೂ ದೊರೆಯದೆ ಅರೆಹೊಟ್ಟೆಯಲ್ಲಿ ದಿನಕಳೆದ ಲಕ್ಷಾಂತರ ಕುಟುಂಬಗಳಿವೆ.

ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಈ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಯಿತಾದರೂ ಅವರಲ್ಲಿ ಅನೇಕ ಮಂದಿಯ ಕೆಲಸದ ಅವಧಿಯನ್ನು ಹೆಚ್ಚಿಸಲಾಯಿತು ಹಾಗೂ ಅವರ ವೇತನವನ್ನು ಕಡಿಮೆಗೊಳಿಸಲಾಯಿತು. ಆದಾಗ್ಯೂ ಸರಕಾರ ಈ ಕಾರ್ಮಿಕರ ನೆರವಿಗೆ ಧಾವಿಸಲೇ ಇಲ್ಲ. ಇವೆಲ್ಲದರ ನಡುವೆ ಕಾರ್ಮಿಕರ ಉದ್ಯೋಗ ಸುರಕ್ಷತೆ, ವೇತನ ಸಂಹಿತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ 44 ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಿ ಮೂರು ವಿಧೇಯಕಗಳನ್ನು ಅಂಗೀಕರಿಸಿತು. ಈ ವಿಧೇಯಕಗಳು ಅಪಾರದರ್ಶಕವಾಗಿದ್ದು , ಕಾರ್ಮಿಕರ ಹಕ್ಕುಗಳನ್ನು ಕಡೆಗಣಿಸಿದೆ. ಎಲ್ಲಾ ಪ್ರಮುಖ ಕಾರ್ಮಿಕ ಒಕ್ಕೂಟಗಳು ಈ ವಿಧೇಯಕಗಳನ್ನು ಬಲವಾಗಿ ವಿರೋಧಿಸಿದರೂ, ಕೇಂದ್ರ ಸರಕಾರ ಮಾತ್ರ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ.

ಇದರ ಬೆನ್ನಿಗೇ ಸರಕಾರ ಜಾರಿಗೆ ತರಲು ಹೊರಟಿರುವ ರೈತ ವಿರೋಧಿ, ಜನ ವಿರೋಧಿ ಕಾನೂನುಗಳ ವಿರುದ್ಧ ಜನ ದಂಗೆಯೆದ್ದಿದ್ದಾರೆ. ಭಾರತದಲ್ಲಿ ರೈತರಿಗೆ ಅವರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ತಮ್ಮ ಭೂಮಿಯ ಮೇಲಿನ, ತಾವು ಸಾಕಿದ ಜಾನುವಾರುಗಳ ಮೇಲಿನ ಹಕ್ಕುಗಳನ್ನು ಅವರು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಾವಿರಾರು ಮಂದಿ ಅನ್ನದಾತರು ವಸ್ತುಶಃ ಸಮರದ ಹಾದಿ ಹಿಡಿದಿದ್ದಾರೆ. ದಿಲ್ಲಿಯಲ್ಲಿ ಜಮಾವಣೆಗೊಂಡಿರುವ ರೈತರು ರಾಷ್ಟ್ರ ರಾಜಧಾನಿಗೆ ಅಕ್ಷರಶಃ ದಿಗ್ಬಂಧನ ವಿಧಿಸಿದ್ದಾರೆ. ದಿನವಿಡೀ ಬೆವರು ಸುರಿಸಿ ದೇಶಕ್ಕೆ ಆಹಾರವನ್ನು ಉತ್ಪಾದಿಸುವ ತಮ್ಮನ್ನು ಇನ್ನು ಮುಂದೆ ಲಘುವಾಗಿ ಪರಿಗಣಿಸದಿರಿ ಎಂಬ ಸ್ಪಷ್ಟವಾದ ಸಂದೇಶವನ್ನು ರೈತರು ಆಳುವಮಂದಿಗೆ ನೀಡಿದ್ದಾರೆ. ಕೇವಲ ವೋಟ್‌ಬ್ಯಾಂಕ್ ಎಂದಷ್ಟೇ ರಾಜಕಾರಣಿಗಳು ಪರಿಗಣಿಸುತ್ತಿದ್ದ ಈ ಸಮೂಹವು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಈಗ ಸೆಟೆದು ನಿಂತಿದೆ.

ಇತ್ತ ಆದಿವಾಸಿಗಳು ಕೂಡಾ ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಅವರ ಜಲ, ಅರಣ್ಯ ಮತ್ತು ಭೂಮಿಯನ್ನು ರಾಜಾರೋಷವಾಗಿ ಕಿತ್ತುಕೊಳ್ಳಲಾಗುತ್ತಿದೆ. ಅವರ ಪೂರ್ವಿಕರು ಶತಮಾನಗಳಿಂದ ನೆಲೆಸಿದ್ದ ಫಲವತ್ತಾದ ಪ್ರದೇಶಗಳನ್ನು ಕಸಿದುಕೊಂಡು, ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರಿಕೀಕರಣ, ಗಣಿಗಾರಿಕೆ, ತಥಾಕಥಿತ ಅಭಿವೃದ್ಧಿ ಕಾಮಗಾರಿ ಮತ್ತಿತರ ಬೃಹತ್ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.ಇನ್ನೊಂದೆಡೆ ಎನ್‌ಆರ್‌ಸಿಯಂತಹ ಕಾಯ್ದೆಗಳನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತರ ವಿರುದ್ಧ ಕೋಮುವಾದಿ ಶಕ್ತಿಗಳು ಭೀತಿಯ ವಾತಾವರಣವನ್ನು ಹರಡುತ್ತಿವೆ. ಇದರ ವಿರುದ್ಧ ಧ್ವನಿಯೆತ್ತಿದ್ದ ಸಾವಿರಾರು ಯುವಕರು ಜೈಲು ಪಾಲಾಗಿದ್ದಾರೆ. ಸ್ವಚ್ಛ, ಹಸಿರಿನ ವಾತಾವರಣದಲ್ಲಿ ಬದುಕುವ ಜನಸಾಮಾನ್ಯರ ಹಕ್ಕನ್ನು ಕೂಡಾ ಕಸಿಯಲಾಗುತ್ತಿದೆ. ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು 40ಕ್ಕೂ ಅಧಿಕ ಯೋಜನೆಗಳಿಗೆ, ಪಾರಿಸಾರಿಕ ಅನುಮತಿಯನ್ನು ಕಡ್ಡಾಯಗೊಳಿಸದೆ, ತನ್ನ ಗ್ರೀನ್ ಸಿಗ್ನಲ್ ನೀಡಿತು. ಈ ಯೋಜನೆಗಳಲ್ಲಿ ಹೆಚ್ಚಿನವು ಸರಕಾರದ ಬಂಡವಾಳಶಾಹಿ ಸ್ನೇಹಿತರಿಗೆ ಸೇರಿದ್ದಾಗಿದ್ದು, ನಮ್ಮ ದೇಶದ ಅಮೂಲ್ಯ ಪರಿಸರವನ್ನು ಲೂಟಿ ಮಾಡಲು ಅಥವಾ ಹಾಳುಗೆಡವಲು ಅವರಿಗೆ ವಸ್ತುಶಃ ಪರವಾನಿಗೆ ಸಿಕ್ಕಂತಾಗಿದೆ. ನಮ್ಮ ಅಪೂರ್ವ ಜೀವವೈವಿಧ್ಯತೆಗೂ ಸಂಚಕಾರ ಉಂಟಾಗಿದೆ. ಪಶ್ಚಿಮಘಟ್ಟ ಹಾಗೂ ಅರಾವಳಿ ಪರ್ವತಶ್ರೇಣಿಗಳ ಪ್ರಾಕೃತಿಕ ಸಂಪತ್ತಿನ ಮೇಲೆ ಉದ್ಯಮಪತಿಗಳ ಕಣ್ಣುಬಿದ್ದಿದೆ, ಖಾಸಗಿ ಕಂಪೆನಿಗಳಿಗೆ ಕಲ್ಲಿದ್ದಲು ಗಣಿಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.

   ಮಹಿಳೆಯರು, ಮಕ್ಕಳು, ದಲಿತರು ಹಾಗೂ ಇತರ ದುರ್ಬಲ ಪಂಗಡಗಳ ಹಕ್ಕುಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಕಸಿಯಲಾಗುತ್ತಿದೆ. ವಾಕ್‌ಸ್ವಾತಂತ್ರದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಹಾಗೂ ಧಾರ್ಮಿಕ ಸ್ವಾತಂತ್ರದ ಹಕ್ಕು, ಪ್ರತಿಭಟಿಸುವ ಹಕ್ಕು ಇವೆಲ್ಲನ್ನೂ ಫ್ಯಾಶಿಸ್ಟ್ ಆಡಳಿತವು ನಿರಾಕರಿಸುತ್ತಿದೆ. ಬಹುತೇಕ ಮಾಧ್ಯಮಗಳು ಸರಕಾರದ ತುತ್ತೂರಿ ಊದುವುದರಲ್ಲೇ ನಿರತವಾಗಿದ್ದು, ಜನಸಾಮಾನ್ಯರ ಆಶೋತ್ತರಗಳಿಗೆ ಧ್ವನಿಯಾಗುವುದನ್ನು ಮರೆತುಬಿಟ್ಟಿವೆ.

ಹೀಗಿರುವಾಗ, ಭಾರತದ ಪಾಲಿಗೆ ಡಿಸೆಂಬರ್ 10 ಮಾತ್ರವಲ್ಲ, ವರ್ಷವಿಡೀ ಮಾನವ ಹಕ್ಕು ಜಾಗೃತ ದಿನವಾಗಿ ಬದಲಾಗಬೇಕಾಗಿದೆ. ಜನ ಸಂಘಟಿತರಾಗಿ ಪ್ರಭುತ್ವದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸದೇ ಇದ್ದರೆ, ಮತ್ತೆ ಭಾರತ ಶತಮಾನಗಳ ಹಿಂದಕ್ಕೆ ಚಲಿಸಬಹುದು. ದಲಿತರು, ಕೆಳಜಾತಿಗಳು, ಮುಸ್ಲಿಮರ ಸ್ಥಿತಿ ಸ್ವಾತಂತ್ರ ಪೂರ್ವಕ್ಕೆ ತಲುಪಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News