ಚಿಕ್ಕಮಗಳೂರು: ರಸ್ತೆಗಿಳಿದ ಕೆಲವು ಸರಕಾರಿ ಬಸ್‌ಗಳು
Update: 2020-12-14 12:02 IST
ಚಿಕ್ಕಮಗಳೂರು, ಡಿ.14: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರಿನಲ್ಲೂ ಸ್ಥಗಿತಗೊಂಡಿದ್ದ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸೋಮವಾರದಿಂದ ಆರಂಭಗೊಂಡಿದೆ.
ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಕಳೆದ ಮೂರು ದಿನಗಳಿಂದ ಸರಕಾರಿ ಸಾರಿಗೆ ನೌಕರರು ರಾಜ್ಯವ್ಯಾಪಿ ಮುಷ್ಕರ ನಡೆಸುತ್ತಿದ್ದಾರೆ. ಇದಕ್ಕೆ ಬೆಂಬಲವಾಗಿ ಚಿಕ್ಕಮಗಳೂರು ಡಿಪೋದಿಂದಲೂ ಸರಕಾರಿ ಬಸ್‌ಗಳು ರಸ್ತೆಗಿಳಿದಿರಲಿಲ್ಲ. ಆದರೆ ಇಂದು ಬೆಳಗ್ಗೆಯಿಂದ ಚಿಕ್ಕಮಗಳೂರು ಡಿಪೋದಿಂದ ಆರು ಬಸ್‌ಗಳು ಓಡಾಟ ಆರಂಭಿಸಿವೆ.
ಮೂಡಿಗೆರೆ, ಶಿವಮೊಗ್ಗ, ಕಡೂರು, ಹಾಸನ, ಬಾಳೆಹೊನ್ನೂರು ಭಾಗಗಳಿಗೆ ಬಸ್ ಸಂಚಾರ ಆರಂಭಗೊಂಡಿದೆ. ಕೆಎಸ್ಸಾರ್ಟಿಸಿ ಡಿಸಿ ವೀರೇಶ್ ಬಸ್ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.