37ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಹೋರಾಟ: ‘ವಿಧಾನಸೌಧ ಚಲೋ' ಎಚ್ಚರಿಕೆ

Update: 2020-12-14 13:24 GMT
File Photo

ಬೆಂಗಳೂರು, ಡಿ. 14: ರಾಮನಗರ ಜಿಲ್ಲೆ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಉತ್ಪಾದನೆ ಪುನರ್ ಆರಂಭಿಸಬೇಕು, ಅಮಾನತ್ತು ಮಾಡಿರುವ ಎಲ್ಲ ಕಾರ್ಮಿಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು, ಉತ್ತಮ ಕೆಲಸದ ವಾತಾವರಣ ನಿರ್ಮಾಣ ಮಾಡುವುದು ಸೇರಿ ಕಾರ್ಮಿಕರ ಎಲ್ಲ ಬೇಡಿಕೆ ಈಡೇರಿಕೆಗೆ ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಟಿಕೆಎಂ ಕಾರ್ಮಿಕರ ಹೋರಾಟ 37ನೆ ದಿನಕ್ಕೆ ಕಾಲಿಟ್ಟಿದೆ.

ಸೋಮವಾರವೂ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಆಡಳಿತ ಮಂಡಳಿ ವಾಮಮಾರ್ಗದ ಮೂಲಕ ಕಾರ್ಮಿಕರ ಹೋರಾಟ ಹತ್ತಿಕ್ಕಲು ಹಲವು ಪ್ರಯತ್ನಗಳನ್ನು ಮುಂದುವರಿಸಿದೆ ಎಂದು ಆರೋಪಿಸಲಾಗಿದೆ. ಈ ಮಧ್ಯೆ ರಾಜ್ಯದ ಹಲವು ಕಾರ್ಮಿಕ ಸಂಘಟನೆಗಳು, ಒಕ್ಕೂಟಗಳು ಕಾರ್ಮಿಕರ ಚಳವಳಿಗೆ ಬೆಂಬಲ ಸೂಚಿಸಿವೆ.

ಟೊಯೋಟಾ ಆಡಳಿತ ಮಂಡಳಿ, ಕಾರ್ಮಿಕರು ಪ್ರತಿಭಟನೆ ನಡೆಸಲು ಹಾಕಿದ್ದ ಪೆಂಡಾಲ್ ತೆರವುಗೊಳಿಸಿದ್ದರೂ, ಕಾರ್ಮಿಕರು ಪಟ್ಟು ಬಿಡದೆ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಎಐಟಿಯುಸಿ ಸಂಘಟನೆ ಹಾಗೂ ಹೊಂಡಾ ಕಂಪೆನಿಯ ಕಾರ್ಮಿಕರ ಸಂಘಟನೆ ಟಿಕೆಎಂ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಘೋಷಿಸಿದೆ.

ವಿಧಾನಸೌಧ ಚಲೋ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಮಿಕರ ಸುದೀರ್ಘ ಹೋರಾಟಕ್ಕೆ ಕಂಪೆನಿ ಸ್ಪಂದಿಸದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ಹಾಗೂ ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ 'ವಿಧಾನಸೌಧ ಚಲೋ' ಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕ ಸಂಘಟನೆ ಮುಖಂಡ ಪ್ರಸನ್ನಕುಮಾರ್ ಚೆಕ್ಕೆರೆ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News