ವೀರಶೈವ ಲಿಂಗಾಯತ ನಿಗಮ ಸ್ಥಾಪನೆ ಪ್ರಶ್ನಿಸಿ ಅರ್ಜಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಡಿ.14: ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ರಾಜ್ಯ ಸರಕಾರ ಜಾತಿ ಆಧಾರದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಕೀಲ ಎಸ್.ಬಸವರಾಜು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತು. ಇದೇ ವೇಳೆ ನಿಗಮ ಸ್ಥಾಪನೆಗೆ ಇನ್ನೂ ಕಾಲಾವಕಾಶವಿದೆ. ಹೀಗಾಗಿ, ಈಗಲೇ ಮಧ್ಯಂತರ ತಡೆ ನೀಡುವುದು ಸೂಕ್ತವಲ್ಲ. ಆದರೆ, ನಿಗಮ ಸ್ಥಾಪನೆ ವಿಚಾರವು ಅರ್ಜಿಯ ತೀರ್ಪಿನ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಲಾಯಿತು.
ಅರ್ಜಿಯಲ್ಲಿ ಏನಿದೆ: ಜಾತಿರಹಿತ ಸಮಾಜ ನಿರ್ಮಿಸುವ ಉದ್ದೇಶದಿಂದ 12ನೆ ಶತಮಾನದಲ್ಲಿ ದಾರ್ಶನಿಕ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು. ಪ್ರತಿಯೊಬ್ಬರೂ ಘನತೆ ಮತ್ತು ಸಮಾನತೆಯಿಂದ ಬದುಕಬೇಕು ಎಂಬುದು ಅವರ ಆಶಯವಾಗಿತ್ತು. ಜಾತ್ಯತೀತ ಸಮಾಜದ ಕಲ್ಪನೆಯನ್ನು ಸಂವಿಧಾನವೂ ಒಳಗೊಂಡಿದೆ.
ಆದರೆ, ರಾಜ್ಯ ಸರಕಾರ ಲಿಂಗಾಯತ ಸಮಾಜದ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಬಸವಣ್ಣನ ಸಿದ್ಧಾಂತ ಹಾಗೂ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ಜಾತಿ ಆಧಾರದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಹೀಗಾಗಿ, ಸರಕಾರ ನ.23ರಂದು ನಿಗಮ ಸ್ಥಾಪಿಸಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.