×
Ad

ಮಂಗಳವಾರ ಪರಿಷತ್ ವಿಶೇಷ ಅಧಿವೇಶನ: 'ಗೋಹತ್ಯೆ ನಿಷೇಧ' ಮಸೂದೆ, ಅವಿಶ್ವಾಸ ನಿರ್ಣಯದತ್ತ ಎಲ್ಲರ ಚಿತ್ತ

Update: 2020-12-14 20:14 IST

ಬೆಂಗಳೂರು, ಡಿ.14: ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದ ಮೇಲ್ಮನೆ ಅಧಿವೇಶನವು ಸರಕಾರದ ಸೂಚನೆ ಮೇರೆಗೆ ನಾಳೆ(ಡಿ.15) ವಿಶೇಷ ಅಧಿವೇಶನ ನಡೆಯಲಿದ್ದು, ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಗಲಿದೆ. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿಲುವಳಿ ಸೂಚನೆ ಈ ವಿಶೇಷ ವಿಶೇಷ ಅಧಿವೇಶನದ ಪ್ರಮುಖ ಕಾರ್ಯಸೂಚಿಯಾಗಿದ್ದು, ಆ ಬಳಿಕ ಗೋಹತ್ಯೆ ನಿಷೇಧ ಮಸೂದೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ತಮ್ಮ ವಿರುದ್ಧದ ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆಗಳಿದ್ದು, ಕಾನೂನು ಸಲಹೆ ಕೇಳಿ ಮುಂದುವರಿಯುವುದಾಗಿ ಪ್ರತಾಪಚಂದ್ರ ಶೆಟ್ಟಿ ಹೇಳಿದ್ದಾರೆ. ಅವಿಶ್ವಾಸ ನೋಟಿಸ್ ನೀಡಿ 14 ದಿನಗಳು ಕಳೆದಿದೆ. ಕಳೆದ ಗುರುವಾರಕ್ಕೆ 15 ನೇ ದಿನವಾಗಿದೆ. ಹೀಗಾಗಿ, ಅದನ್ನು ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ವಿಧಾನಪರಿಷತ್ ಸಚಿವಾಲಯದ ಮೂಲಗಳ ಪ್ರಕಾರ, ಸಭಾಪತಿಯವರಿಗೆ ಬೇರೆ ಮಾರ್ಗವಿಲ್ಲ. ಖಾಸಗಿ ವಕೀಲರ ಮೂಲಕ ಸಲಹೆ ಪಡೆಯಲು ಅವರಿಗೆ ಸಾಧ್ಯವಿಲ್ಲ. ಅವಿಶ್ವಾಸವನ್ನು ಎದುರಿಸಲೇಬೇಕು. ಸದನವೇ ಸರ್ವೋಚ್ಚವಾಗಿದ್ದು, ಅಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಅವರು ತಲೆ ಬಾಗಬೇಕಾಗುತ್ತದೆ ಎನ್ನಲಾಗಿದೆ.

ಜೆಡಿಎಸ್ ಬೆಂಬಲ ಸಾಧ್ಯತೆ: ಪ್ರತಾಪಚಂದ್ರ ಶೆಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಇಳಿಸಲು ಬಿಜೆಪಿಯು ಜೆಡಿಎಸ್ ಬೆಂಬಲವನ್ನು ಕೇಳಿದೆ. ಬೆಂಬಲ ನೀಡುವುದಾಗಿ ಜೆಡಿಎಸ್ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಇದರ ಭಾಗವಾಗಿ ಇತ್ತೀಚಿಗೆ ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯೂ ಅನಿವಾರ್ಯವಾಗಿ ಬೆಂಬಲಿಸಬೇಕಾಗುತ್ತದೆ ಎಂದಿದ್ದಾರೆ. ಆದರೆ, ಜೆಡಿಎಸ್ ನಡೆ ನಾಳೆ ನಡೆಯುವ ಅಧಿವೇಶನದಲ್ಲಿ ನಿರ್ಣಾಯಕವಾಗಿರಲಿದೆ.

ವಿಧಾನಪರಿಷತ್‍ನಲ್ಲಿ ಬಿಜೆಪಿ 31 ಮಂದಿ ಸದಸ್ಯರನ್ನು ಹೊಂದಿದ್ದರೆ, ಜೆಡಿಎಸ್ 14 ಮಂದಿ ಸದಸ್ಯರನ್ನು ಹೊಂದಿದೆ. ಪಕ್ಷೇತರ ಒಬ್ಬ ಸದಸ್ಯರಿದ್ದಾರೆ. ಪಕ್ಷೇತರ, ಜೆಡಿಎಸ್ ಹಾಗೂ ಬಿಜೆಪಿ ಸೇರ್ಪಡೆಯಾದರೆ ಒಟ್ಟು 46 ಸದಸ್ಯರ ಸಂಖ್ಯಾಬಲವಾಗಲಿದೆ. ಕಾಂಗ್ರೆಸ್ ಸಭಾಪತಿ ಸೇರಿದಂತೆ ಒಟ್ಟು 29 ಮಂದಿ ಸದಸ್ಯರ ಸಂಖ್ಯಾಬಲ ಹೊಂದಿದೆ. ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಗೆಲ್ಲಲು ಕಾಂಗ್ರೆಸ್‍ಗೆ ಅಗತ್ಯವಾದ ಸಂಖ್ಯಾಬಲ ಇಲ್ಲ. ಹೀಗಾಗಿ ಸಭಾಪತಿಯವರು ಅವಿಶ್ವಾಸ ಗೊತ್ತುವಳಿಯನ್ನು ತಿರಸ್ಕರಿಸಿರುವುದಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.

ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಗೋಹತ್ಯೆ ನಿಷೇಧ ಮಸೂದೆಯ ಬಗ್ಗೆ ಬಿಜೆಪಿ ಬಾಯಿ ಬಿಡುತ್ತಿಲ್ಲ. ಅವಿಶ್ವಾಸ ವಿಷಯ ಮುಗಿದ ಮೇಲೆ ಕೈಗೆತ್ತಿಕೊಳ್ಳಬಹುದು. ಆದರೆ, ಸಭಾಪತಿ ಇಳಿಸುವುದೇ ನಮ್ಮ ಆದ್ಯತೆ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ. ವಿಧಾನಪರಿಷತ್ತಿನಲ್ಲಿ ಈ ಮಸೂದೆ ಅಂಗೀಕಾರ ಪಡೆಯದೇ ಇದ್ದರೆ, ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕಾಗುತ್ತದೆ. ವಿಧಾನಸಭೆಯಲ್ಲಿ ಏಕಾಏಕಿ ಹೆಚ್ಚುವರಿ ಕಾರ್ಯಸೂಚಿ ಪಟ್ಟಿಯಲ್ಲಿ ಮಸೂದೆಯನ್ನು ಸೇರಿಸಿ ಮಂಡಿಸಲಾಯಿತು. ಅದೇ ರೀತಿಯ ತಂತ್ರ ಅನುಸರಿಸಲೂಬಹುದು. ಆದರೆ, ಜೆಡಿಎಸ್ ಬೆಂಬಲ ನೀಡುತ್ತದೆಯಾ, ಇಲ್ಲವಾ ಎಂಬುದು ನಾಳೆಯೇ ತೀರ್ಮಾನವಾಗಲಿದೆ.

ಕಲಾಪ ವೇಳಾಪಟ್ಟಿ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ಪ್ರಮುಖವಾಗಿ ಚರ್ಚೆಯಾಗಲಿದೆ. ಉಳಿದಂತೆ ನಿಯಮ 68ರ ಮೇರೆಗೆ ವಿಪಕ್ಷ ಸದಸ್ಯರು ಅತಿವೃಷ್ಟಿಯಿಂದಾದ ಹಾನಿಯ ಕುರಿತು ಮಾತನಾಡಲಿದ್ದಾರೆ. ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆಗಳು, ನಿಯಮ 330 ಮೇರೆಗೆ ಚರ್ಚೆ ಹಾಗೂ ಅರ್ಧಗಂಟೆಯ ಕಾಲಾವಧಿ ಚರ್ಚೆಯು ನಡೆಯಲಿದೆ ಎಂದು ಪರಿಷತ್‍ನ ಕಾರ್ಯದರ್ಶಿ ಬಿಡುಗಡೆ ಮಾಡಿರುವ ಕಲಾಪ ವೇಳಾಪಟ್ಟಿಯಲ್ಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News