×
Ad

ಭೂ ಸುಧಾರಣಾ ತಿದ್ದುಪಡಿ ವಿಧೇಯಕ: ರಾಜ್ಯಪಾಲರು ಸಹಿ ಹಾಕದಂತೆ ಆಗ್ರಹಿಸಿ ಟ್ವಿಟರ್‌ನಲ್ಲಿ ಅಭಿಯಾನ

Update: 2020-12-14 21:16 IST

ಬೆಂಗಳೂರು, ಡಿ.14: ರಾಜ್ಯಸರಕಾರ ಸುಗ್ರೀವಾಜ್ಞೆ ಮೂಲಕ ತಂದು ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ.

ಸರಕಾರವು ಡಿ.10 ರಂದು ಅಧಿವೇಶನ ಮೊಟಕುಗೊಳಿಸುವ ಸಲುವಾಗಿ ಡಿ.9ರಂದೇ ತಿದ್ದುಪಡಿ ಮಸೂದೆಯನ್ನು ಉಭಯ ಸದನಗಳಲ್ಲಿ ಅಂಗೀಕಾರ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯು ರಾಜಭವನ ಚಲೋ ನಡೆಸಿ, ಈ ಮಸೂದೆಗೆ ಅಂಗೀಕಾರ ಹಾಕಬಾರದು ಎಂದು ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯಪಾಲರು ರೈತ ಮುಖಂಡರೊಂದಿಗೆ ಚರ್ಚೆಯನ್ನೂ ನಡೆಸಿ, ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.

ಅದರ ಮುಂದುವರಿದ ಭಾಗವಾಗಿ ನಮ್ಮೂರ ಭೂಮಿ ನಮಗಿರಲಿ, ಐಕ್ಯ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಟ್ವಿಟರ್‌ನಲ್ಲಿ 'ಕೊಟ್ಟ ಮಾತು ಉಳಿಸಿಕೊಳ್ಳಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020 ಅನ್ನು ತಿರಸ್ಕರಿಸಿ' ಎಂದು ಆಗ್ರಹಿಸಿ ಅಭಿಯಾನ ನಡೆಸುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

''ಅನ್ನ ಬೆಳೆಯುವ ಮಂದಿ ನಾವು. ಮುಂದೆ ಬಂದು ಕೇಳುತ್ತಿರುವೆವು! ಅನ್ನದ ಬಟ್ಟಲಿಗೆ ವಿಷ ಹಾಕುವ ಭೂಸುಧಾರಣಾ ಕಾಯಿದೆ ತಿದ್ದುಪಡಿಗೆ ಅಂಕಿತ ಹಾಕದಿರಿ! ಈ ನೆಲದ ನ್ಯಾಯ ಉಳಿಸಿರಿ!'' ಎಂದು ನವೀನ್ ಎಂಬುವವರು ಟ್ವೀಟ್ ಮಾಡಿದ್ದರೆ, ಭಾರತ ಮಾತೆಯ ವೀರಪುತ್ರ ಸೈನಿಕ!, ಅವನನ್ನು ಗೌರವಿಸುವಂತೆ ನಮ್ಮ ಭೂಮಾತೆಯ ಪ್ರೀತಿಯ ಪುತ್ರ ರೈತನನ್ನೂ ಗೌರವದಿಂದನೋಡೋಣ!!'' ಎಂದು ಮಿಲನ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕಾರ್ಪೋರೇಟ್ ಪಾಳೇಗಾರಿಕೆಗೆ ಒತ್ತು ನೀಡುತ್ತಿದೆ ಕಾಯಿದೆ!. ಕೃಷಿ ಕುಟುಂಬಗಳನ್ನು ಬೀದಿಪಾಲು ಮಾಡಲು ನಿಮ್ಮ ಅಂಕಿತ !! ಬೇಡವೇ  ಬೇಡ ಎಂದು ಅನಂತಲಕ್ಷ್ಮಿ ಎಂಬುವವರು ಟ್ವೀಟ್ ಮಾಡಿದ್ದಾರೆ. ಹೀಗೆ ಸಾವಿರಾರು ಜನರು ಸೋಮವಾರದಂದು ಟ್ವೀಟ್ ಮಾಡುವ ಮೂಲಕ ರಾಜ್ಯಪಾಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News