ಕಾಂಗ್ರೆಸ್ ಪೋಸ್ಟರ್ ಗಳಲ್ಲಿ ಮುಸ್ಲಿಮ್ ಮುಖಂಡರಿಗೆ ಆದ್ಯತೆ ನೀಡಿಲ್ಲ: ಸಿ.ಎಂ.ಇಬ್ರಾಹಿಂ
ಬೆಂಗಳೂರು, ಡಿ. 14: ನಾಳೆ(ಡಿ.15)ವಿಧಾನ ಪರಿಷತ್ ವಿಶೇಷ ಅಧಿವೇಶನ ಕರೆದಿದ್ದು, ಎಪ್ಪತ್ತು ವರ್ಷದ ಇತಿಹಾಸದಲ್ಲಿ ಪರಿಷತ್ ಕಾರ್ಯದರ್ಶಿಯವರ ಬಳಿ ಪತ್ರ ಬರೆಸಿ ಅಧಿವೇಶನ ಕಲಾಪ ಕರೆದಿರುವ ಉದಾಹರಣೆಯೇ ಇಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಮೇಲ್ಮನೆ ಸದಸ್ಯ ಸಿ.ಎಂ.ಇಬ್ರಾಹಿಂ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಪದ್ಮನಾಭನಗರದಲ್ಲಿ ದೇವೇಗೌಡರ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಳಿನ ಅಧಿವೇಶನದ ಬಗ್ಗೆ ಮಾಹಿತಿ ಪಡೆದಿದ್ದೇನೆ. ವಿಧಾನ ಪರಿಷತ್ ವಿಶೇಷ ಅಧಿವೇಶನ ಕರೆದಿರುವುದು ಅನಧಿಕೃತ ಎಂದು ಟೀಕಿಸಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ಸರಕಾರ ಮುಂದಾಗಿದೆ. ಆದರೆ, ಜೆರ್ಸಿ ಹಸು ಗಂಡು ಕರು ಹಾಕಿದರೆ ಸಾಕುವವರು ಯಾರು? ಗೋವು ಸಾಗಿಸುವಾಗ ಹಿಡಿದು ಕೊಂದರೂ ತಪ್ಪಿಲ್ಲ ಎಂಬ ನಿಯಮ ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ದೇವೇಗೌಡರ ಆರೋಗ್ಯ ವಿಚಾರಿಸಲು ಬಂದಿದ್ದು, ಗೋಹತ್ಯೆ ನಿಷೇಧ ಮಸೂದೆ ಸಂಬಂಧ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದರು.
ನಾಳೆಯಿಂದ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇನೆ. ಕಾಂಗ್ರೆಸ್ ಪಕ್ಷದ ಬಗ್ಗೆ ನನಗೆ ಆತ್ಮೀಯತೆ ಇದೆ. ಅದೇ ರೀತಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರ ಮನೆಗೆ ಈಗಲೂ ತೆರಳುತ್ತೇನೆ ಎಂದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನ ಮನೆಗೆ ಬಂದಿದ್ದರು. ವ್ಯಕ್ತಿಗತವಾಗಿ ಯಾರೊಬ್ಬರ ಮೇಲೆಯೂ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಮುಸ್ಲಿಮ್ ನಾಯಕ ಅಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಕುರುಬ ಸಮುದಾಯದ ನಾಯಕ ಎಂದು ಕರೆಯಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ನಾನು ಮುಸ್ಲಿಮ್ ಸಮುದಾಯದ ನಾಯಕನಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷದ ಪೋಸ್ಟರ್ ಗಳಲ್ಲಿ ಮುಸ್ಲಿಮ್ ಮುಖಂಡರಿಗೆ ಆದ್ಯತೆ ನೀಡಿಲ್ಲ. ಇದು ನನಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹುಮತ ಕಷ್ಟಸಾಧ್ಯ: 13 ಕ್ಷೇತ್ರಗಳ ಉಪ ಚುನಾವಣೆ ಹಾಗೂ ಶಿರಾ ಮತ್ತು ಆರ್‍ಆರ್ ನಗರ ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ನಾನೂ ಪ್ರಚಾರಕ್ಕೆ ಹೋಗಲಿಲ್ಲ. ಇದರಲ್ಲಿ ನನ್ನ ಕೊಡುಗೆ ಇಲ್ಲ. ಯಾರೂ ಏನೇ ಮಾಡಿದರೂ ಮುಂದೆಯೂ ಕಾಂಗ್ರೆಸ್‍ಗೆ ಬಹುಮತ ಬರುವ ವಿಶ್ವಾಸವಿಲ್ಲ ಎಂದು ಇಬ್ರಾಹಿಂ ಭವಿಷ್ಯ ನುಡಿದರು.