ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ: 5ನೆ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದ ಹೈಕೋರ್ಟ್
Update: 2020-12-14 21:46 IST
ಬೆಂಗಳೂರು, ಡಿ.14: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಆಸೀಮ್ ಶರೀಫ್ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಅರ್ಜಿಯನ್ನು ತಿರಸ್ಕರಿಸಿತು.
ಆರೋಪಿಯು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆದರೆ, ಜಯದೇವ ಹೃದ್ರೋಗ ಸಂಸ್ಥೆ 2020ರ ಸೆ.6ರಂದು ನೀಡಿರುವ ವರದಿಯನ್ನು ಆಧರಿಸಿ ಎನ್‍ಐಎ ವಿಶೇಷ ನ್ಯಾಯಾಲಯ ಸೆ.8ರಂದು ಜಾಮೀನು ನಿರಾಕರಿಸಿ ಆದೇಶಿಸಿದೆ. ಹೀಗಾಗಿ, ಮೇಲ್ಮನವಿಯಲ್ಲಿ ಈ ಅಂಶ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಎನ್‍ಐಎ ವಿಶೇಷ ನ್ಯಾಯಾಲಯ ಹೊರಡಿಸಿದ ಆದೇಶ ಪ್ರಶ್ನಿಸಿ ಪ್ರಕರಣದ ಐದನೆ ಆರೋಪಿ ಆಸೀಮ್ ಶರೀಫ್ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ನ್ಯಾಯಾಲಯ ಅರ್ಜಿ ತಿರಸ್ಕಾರ ಮಾಡಿದೆ.