×
Ad

ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ?: ಬಸವರಾಜ ಹೊರಟ್ಟಿ ಹೇಳಿದ್ದು ಹೀಗೆ...

Update: 2020-12-14 21:50 IST

ಧಾರವಾಡ, ಡಿ.14: ವಿಧಾನಪರಿಷತ್‍ನ ಅಧಿವೇಶನ ನಾಳೆ(ಡಿ.15)ವರೆಗೂ ನಡೆಯಬೇಕಿತ್ತಾದರೂ, ಏಕಾಏಕಿ ಸದನ ನಿಲ್ಲಿಸಿರುವುದು ನೋವಿನ ಸಂಗತಿ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಉದ್ಭವಿಸಿದೆ ಎಂದ ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್-ಬಿಜೆಪಿ ಮಧ್ಯೆ ಪರಿಷತ್ ಸಭಾಪತಿ ಕುರ್ಚಿಗಾಗಿ ನಡೆದ ಗಲಾಟೆ, ಈ ಹಿಂದೆ ಶಂಕರಮೂರ್ತಿ ಸಭಾಪತಿ ಆಗಿದ್ದಾಗ ಹೀಗೆ ಆಗಿತ್ತು, ಆಗ ಅವರು ಉಪಾಧ್ಯಕ್ಷರಿಂದ ಸದನ ನಡೆಸಿದ್ದರು. ತಾವು ಕೆಳಗೆ ಕುಳಿತು ಅವಿಶ್ವಾಸ ಎದುರಿಸಿದ್ದರು. ಈಗ ಅವಿಶ್ವಾಸ ಕೊಟ್ಟಾಗ ಸಭಾಪತಿ, ಉಪಾಧ್ಯಕ್ಷರಿಗೆ ಸದನ ಬಿಟ್ಟು ಕೊಡಬೇಕಿತ್ತು ಎಂದರು.

ಸಭಾಪತಿ ವಿಧೇಯಕ ಒಂದರ ಚರ್ಚೆ ನಡೆಯುವ ಸಂದರ್ಭದಲ್ಲಿ ಮುಗಿಯುವರೆಗೂ ಸಭೆ ನಿಲ್ಲಿಸಬಾರದು. ಆದರೆ, ಈ ಒಂದು ವಿಧೇಯಕದ ಕುರಿತು ಚರ್ಚೆ ನಡೆದಾಗ ಅವರು ಸಭೆ ನಿಲ್ಲಿಸಿದ್ದರು. ಹೀಗಾಗಿಯೆ, ಅವರ ವಿರುದ್ಧ ಬಿಜೆಪಿಯವರು ಅವಿಶ್ವಾಸ ಮಂಡಿಸಿದ್ದಾರೆ. ನಾವು ಕೂಡ ಅದನ್ನು ಬೆಂಬಲಿಸುವ ಪ್ರಸಂಗ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ಪರಿಷತ್‍ನಲ್ಲಿ ಚರ್ಚೆ ಆಗಿಲ್ಲ, ಗೋಹತ್ಯೆಗೆ ಅನೇಕ ಕಾರಣಗಳಿವೆ. ನಾನು 262 ಜಾನುವಾರು ಹೊಂದಿದ್ದೇನೆ, ಎಲ್ಲವನ್ನೂ ಇಟ್ಟುಕೊಳ್ಳಲು ಆಗುವುದಿಲ್ಲ. ಕೆಲವೊಂದನ್ನು ಮಾರುತ್ತೇವೆ, ನಮ್ಮಿಂದ ತೆಗೆದುಕೊಂಡವರು ಕಟುಕರಿಗೆ ಕೊಡಬಹುದು. ಕರುಗಳನ್ನು ಕೊಡಬಾರದು, ಮುದಿ ಹಸುಗಳನ್ನು ಕೊಡಬಹುದು ಎಂದು ಮೊದಲು ಇತ್ತು. ಈಗಿನ ಕಾಯ್ದೆಯ ಸಾಧಕ ಬಾಧಕ ಏನಿದೆ ನೋಡಬೇಕು ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಸಾಕಷ್ಟು ಗೋ ಶಾಲೆಗಳಿವೆ, ಆದರೆ ನಮ್ಮಲ್ಲಿ ಗೋ ಶಾಲೆಗಳಿಲ್ಲ. ಕಾಯ್ದೆ ತರುವ ಮುಂಚೆ ರಾಜ್ಯ ಸರಕಾರ ಪೂರ್ವ ತಯಾರಿ ಮಾಡಬೇಕಿತ್ತು. ಯುಪಿಯಲ್ಲಿ ಒಂದು ಹಸುವಿಗೆ ದಿನವೊಂದಕ್ಕೆ 30 ರೂಪಾಯಿ ಖರ್ಚು ಮಾಡಲಾಗುತ್ತದೆ, ನಮ್ಮಲ್ಲಿ ಅದು ಇಲ್ಲ. ಗೋ ರಕ್ಷಣೆ ಮಾಡುವವರಿಗೆ ಯಾವುದೇ ಕೇಸ್ ಹಾಕಬಾರದು, ಆದರೆ, ಅವರು ಏನು ಮಾಡುತ್ತಾರೋ ಅದರ ಮೇಲೆ ನಿಗಾ ಇಡಬೇಕು. ಕುರಿ, ಕೋಳಿ ಎಲ್ಲವನ್ನೂ ಕುಯ್ತಾರೆ, ಆಕಳಿಗೆ ನಾವು ಗೋಮಾತೆ ಅಂತೀವಿ. ಇದು ಯಾವ ನ್ಯಾಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News