ಒಳಚರಂಡಿ ಕಾರ್ಮಿಕರನ್ನು ಖಾಯಂ ಮಾಡುವಂತೆ ಒತ್ತಾಯಿಸಿ ಪೌರಕಾರ್ಮಿಕರ ಧರಣಿ
ಮೈಸೂರು,ಡಿ.14: ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ 231 ಮಂದಿ ಒಳಚರಂಡಿ ಕಾರ್ಮಿಕರು (ಸಹಾಯಕರನನ್ನು) ಖಾಯಂ ಮಾಡಬೇಕು ಮತ್ತು ಬೆಳಗಿನ ಉಪಹಾರದ ಭತ್ಯೆ ನೀಡುವಂತೆ ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ 'ಒಳಚರಂಡಿ ವಿಭಾಗದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು ಕಾರ್ಮಿಕರು ಮ್ಯಾನ್ ಹೋಲ್ ನಲ್ಲಿ ಇಳಿದು ಸ್ವಚ್ಛತಾ ಕೆಲಸವನ್ನು ಮಾಡುವಾಗ ಸಾವನ್ನಪ್ಪಿರುತ್ತಾರೆ. ಪ್ರತಿನಿತ್ಯ ಮಲಮೂತ್ರ ಶುಚಿತ್ವ ಮಾಡುತ್ತಿದ್ದು ಈ ಕೆಲಸವು ತುಂಬಾ ಕಷ್ಟಕರವಾಗಿದೆ. ಆರೋಗ್ಯವು ಹಾಳಾಗಿ ಕೆಲಸದ ವೇಳೆಯಲ್ಲಿ ಅನೇಕ ಕಾರ್ಮಿಕರುಗಳು ಕೈಬೆರಳು ತುಂಡಾಗಿ ವಾಸಿಯಾಗದಂತಹ ಚರ್ಮರೋಗ ಕೂಡ ಬಂದಿದೆ. ಒಳಚರಂಡಿ ಕಾರ್ಮಿಕರು ಒಂದು ವರ್ಷದಲ್ಲಿ ಸುಮಾರು 5-6 ಮಂದಿ ಸಾವನ್ನಪ್ಪಿದ್ದಾರೆ. ಇವರ ಕುಟುಂಬಗಳಿಗೆ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆ ಮತ್ತು ಮೈಸೂರು ಮಹಾನಗರ ಪಾಲಿಕೆಯಿಂದ ಯಾವುದೇ ರೀತಿಯ ಪರಿಹಾರಗಳು ಸಿಕ್ಕಿಲ್ಲ' ಎಂದರು.
ಸರ್ಕಾರವು ನಮ್ಮ ಕೆಲಸವನ್ನು ಯುಜಿಡಿ ಹೆಲ್ಪರ್ ಗಳೆಂದು ಪರಿಗಣಿಸಿರುವುದರಿಂದ ಖಾಯಂ ಪೌರಕಾರ್ಮಿಕರು ಹಾಗೂ ಗುತ್ತಿಗೆ ಪೌರ್ಕಾರ್ಮಿಕರಿಗೆ ಸಿಗುತ್ತಿರುವ ಹಲವಾರು ಸೌಲಭ್ಯಗಳಿಂದ ಒಳಚರಂಡಿ ಕಾರ್ಮಿಕರು ವಂಚಿತರಾಗುತ್ತಿದ್ದಾರೆ. ರಾಜ್ಯ ಸರ್ಕಾರವು ಗುತ್ತಿಗೆ ಪದ್ಧತಿಯನ್ನು ರದ್ದುಮಾಡಿ ನಗರ ಸ್ಥಳೀಯ ಹುದ್ದೆಗಳಿಗೆ ಹಾಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಒಳಚರಂಡಿ ಕಾರ್ಮಿಕರನ್ನು ನೇರ ನೇಮಕಾತಿ ಮಾಡಬೇಕೆಂದು ಆದೇಶವಾಗಿದೆ. ಮೈಸೂರು ಮನಪಾದಿಂದ ಅನುಮೋದನೆಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಬೆಳಗಿನ ಉಪಹಾರ ಭತ್ಯೆಯನ್ನು ಹೆಚ್ಚುವರಿ 25ಸಾವಿರ ರೂ. ಹಾಗೂ ಇತ್ಯಾದಿ ಸೌಲಭ್ಯಗಳನ್ನು ಗುತ್ತಿಗೆ ಪೌರಕಾರ್ಮಿಕರಿಗೆ ಹಾಗೂ ಖಾಯಂ ಪೌರಕಾರ್ಮಿಕರಿಗೆ ನೀಡಿ ಒಳಚರಂಡಿ ಕಾರ್ಮಿಕರಿಗೆ ನೀಡದೇ ವಂಚಿಸಿದ್ದಾರೆಂದು ಆರೋಪಿಸಿದರು.
ಈ ಕುರಿತು ಜಿಲ್ಲಾಡಳಿತಕ್ಕೂ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಿಗೂ, ಮಹಾಪೌರರಿಗೂ ಮನವಿ ನೀಡಿದ್ದೇವೆ. ಒಳಚರಂಡಿ ವಿಭಾಗದಲ್ಲಿ 231ಮಂದಿ ಖಾಲಿ ಇರುವ ಹುದ್ದೆಗಳಿಗೆ ಸದರಿ ಕೆಲಸ ಮಾಡುತ್ತಿರುವ ಎಲ್ಲಾ ಒಳಚರಂಡಿ ಕಾರ್ಮಿಕರನ್ನು ಖಾಯಂ ಮಾಡಬೇಕು. ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲಿಂಗ್ ಸಭೆಯಲ್ಲಿ ಒಳಚರಂಡಿ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಲು ಮಂಜೂರು ಮಾಡಿದ್ದು ಅದರಂತೆ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಆಯುಕ್ತರು, ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದು ಈ ಕೂಡಲೇ ಸರ್ಕಾರದಿಂದ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಎನ್.ಮಾರ್, ಮಾಜಿ ಮೇಯರ್ ಪುರುಷೋತ್ತಮ್, ಕಾರ್ಯದರ್ಶಿ ಶ್ರೀನಿವಾಸ, ಅಧ್ಯಕ್ಷ ಪಳನಿ, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಗಣೇಶ್.ಎಸ್, ಉಸ್ತುವಾರಿ ಅಧ್ಯಕ್ಷ ರಾಜು ಆರ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.