×
Ad

ಪಂಚಾಯತ್ ಮಟ್ಟದ ತೆರಿಗೆಗಳ ಪರಿಷ್ಕರಣೆ

Update: 2020-12-14 23:18 IST

ಬೆಂಗಳೂರು, ಡಿ.14: ರಾಜ್ಯಾದ್ಯಂತ ಪಂಚಾಯತ್ ಚುನಾವಣೆಗೆ ಭಾರಿ ಸ್ಪರ್ಧೆ ಏರ್ಪಟ್ಟಿದ್ದರೆ, ಮತ್ತೊಂದು ಕಡೆ ಗ್ರಾಮ ಪಂಚಾಯತ್‍ಗಳು ವಿಧಿಸುತ್ತಿರುವ ತೆರಿಗೆಗಳನ್ನು ಪರಿಷ್ಕರಣೆ ಮಾಡುವ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿದೆ. ಈ ಬಾರಿ ಚುನಾವಣೆಯಲ್ಲಿ ಆಯ್ಕೆಯಾಗುವ ನೂತನ ಸದಸ್ಯರುಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಪರಿಷ್ಕೃತ ತೆರಿಗೆಗಳನ್ನು ಒಟ್ಟುಮಾಡುವ ಹೊಣೆಗಾರಿಕೆ ವಹಿಸಲು ಸರಕಾರ ಚಿಂತನೆ ನಡೆಸಿದೆ

ರಾಜ್ಯದ 5,762 ಪಂಚಾಯತ್‍ಗಳಿಗೆ 92 ಸಾವಿರ ಜನಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ಈ ಚುನಾವಣೆಯ ಮೂಲಕ ಆಯ್ಕೆಯಾಗುವವರಿಗೆ ತಮ್ಮ ಹಳ್ಳಿಯ ಅಭಿವೃದ್ಧಿಗಾಗಿ ತೆರಿಗೆ ಹೆಚ್ಚಳ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕೃಷಿ ತೆರಿಗೆ ನಿರ್ಧಾರಕ್ಕೆ ಒಳಪಟ್ಟಿರದ ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಈ ಪ್ರಕ್ರಿಯೆ ನಡೆಸುವ ವೇಳಾಪಟ್ಟಿಯನ್ನು ಸರಕಾರ ನಿಗದಿ ಮಾಡಿತ್ತು. ಗ್ರಾಮ ಪಂಚಾಯತ್ ಗಳು ಸಾರ್ವಜನಿಕ ಸಹಭಾಗಿತ್ವದಲ್ಲಿ ಆಸ್ತಿಗಳ ಮೌಲ್ಯಮಾಪನ, ಹೊಸ ತೆರಿಗೆ ನೀತಿಯ ಅನುಷ್ಠಾನ, ಸ್ಥಳೀಯ ಅಗತ್ಯಗಳನ್ನು ಪೂರೈಕೆ ಮಾಡಲು ಸಾಕಷ್ಟು ಆದಾಯ ಸಂಗ್ರಹಣೆ ಹೊಂದುವಂತೆ ಆಗಬೇಕು. ಸರಕಾರದ ಅನುದಾನಕ್ಕಾಗಿ ಪಂಚಾಯತ್‍ಗಳು ಕಾಯುವಂತಾಗಬಾರದು ಎಂಬುದು ಸರಕಾರದ ಉದ್ದೇಶವಾಗಿದ್ದು, ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡುತ್ತಾ ಬಂದಿದೆ.

ಕರ್ನಾಟಕ ಪಂಚಾಯತ್‍ರಾಜ್ ಅಧಿನಿಯಮ 2006ರ ನಿಯಮಾನುಸಾರ ನಿಗದಿತ ನಮೂನೆಗಳನ್ನು ನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ. ಆಸ್ತಿ ವಿವರ, ತೆರಿಗೆ ನಿರ್ಧಾರ ಮತ್ತು ಬೇಡಿಕೆ, ವಸೂಲಾತಿ, ಬಾಕಿಯುಳ್ಳ ವಿವರಗಳು ನಿರ್ವಹಿಸಲು ಕೆಲಸ ಹಂತ ಹಂತವಾಗಿ ಜಾರಿಗೆ ಬರುತ್ತಿದೆ. ಅಲ್ಲದೆ, ಮಾಸಿಕ ಪ್ರಗತಿಯನ್ನು ಗಮನಿಸಲು ಆನ್‍ಲೈನ್ ವ್ಯವಸ್ಥೆಯೂ ಮಾಡಿಕೊಳ್ಳಲಾಗಿದೆ.

ತೆರಿಗೆ ಪರಿಷ್ಕರಣೆ ಸಂಬಂಧ ಮಾರ್ಗಸೂಚಿ ಸಿದ್ಧಗೊಳಿಸಿದ್ದು, ಯಾವುದಕ್ಕೆ ಎಷ್ಟು ಹೆಚ್ಚಳ ಮಾಡಬೇಕು ಎಂಬುದನ್ನು ಸರಕಾರ ನಿರ್ಧರಿಸಿದೆ. ನಿವಾಸ, ವಾಣಿಜ್ಯ ಕಟ್ಟಡಕ್ಕೆ ಎಷ್ಟು ಹೆಚ್ಚಿಸಬೇಕು, ಕಾರ್ಖಾನೆಗಳಿದ್ದರೆ ಎಷ್ಟು ತೆರಿಗೆ ಏರಿಸಬೇಕು ಎಂದು ತಿಳಿಸಲಾಗಿದೆ. ಆದರೆ, ಗರಿಷ್ಠ-ಕನಿಷ್ಠ ಹೆಚ್ಚಳದ ವಿವೇಚನೆಯನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡಲಾಗಿದೆ. ಈ ವಿಚಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಮಿತಿ ಅಧ್ಯಕ್ಷತೆಯಲ್ಲಿ ಸಮಿತಿ ಉಸ್ತುವಾರಿ ನೋಡಿಕೊಳ್ಳಲಿದೆ.

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ನಿರ್ದಿಷ್ಟ ಪಡಿಸಿರುವಂತೆ ತೆರಿಗೆ ವಸೂಲಿ ಗ್ರಾ.ಪಂಗಳ ಪ್ರಾಥಮಿಕ ಹೊಣೆಗಾರಿಕೆ. ಒಂದು ವೇಳೆ ತೆರಿಗೆಯಲ್ಲಿ ಶೇ.80 ಕಡಿಮೆ ವಸೂಲಿಯಾಗಿದ್ದರೆ ಹಾಗೂ ಕಡಿಮೆ ವಸೂಲಿ ಆಗಿರುವುದಕ್ಕೆ ಕಾರಣ ಬಗ್ಗೆ ತನಿಖೆ ಮಾಡಿ ಅವಶ್ಯಕ ಕ್ರಮಕೈಗೊಳ್ಳುವುದಾಗಿ ಸರಕಾರ ಎಚ್ಚರಿಕೆಯನ್ನೂ ನೀಡಿದೆ.

ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳು ಸಾಕಷ್ಟಿದ್ದು, ಅವುಗಳನ್ನು ಮೊದಲು ತೆರಿಗೆ ವ್ಯಾಪ್ತಿಗೆ ತರುವುದು. ಗುರಿ ನಿಗದಿ ಮಾಡಿಕೊಂಡು ಶೇ.100 ರಷ್ಟು ತೆರಿಗೆ ಸಂಗ್ರಹ ಮಾಡುವುದು. ಪ್ರತಿ ಆಸ್ತಿಯ ತೆರಿಗೆ ನಿಗದಿ ಸರಿಯಾಗಿಲ್ಲ, ವೈಜ್ಞಾನಿಕ ರೀತಿಯಲ್ಲಿ ಮಾರ್ಗಸೂಚಿ ಪ್ರಕಾರ ನಿಗದಿ ಮಾಡುವುದು. ಬೆಂಗಳೂರು ಸೇರಿ ಪ್ರಮುಖ ನಗರಗಳಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಸಂಗ್ರಹದ ಬಗ್ಗೆ ವಿಶೇಷ ಗಮನ ವಹಿಸಬೇಕು ಎಂದು ಸರಕಾರ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News