ಆ್ಯಂಬುಲೆನ್ಸ್‌ಗೆ ಬೇಕಾಗಿದೆ ಆರೋಗ್ಯ ಕವಚ

Update: 2020-12-15 06:42 GMT

ಈ ದೇಶದಲ್ಲಿ ಎರಡು ಕಾರಣಗಳಿಂದ ಅತಿ ಹೆಚ್ಚು ಸಾವುಗಳು ಸಂಭವಿಸುತ್ತವೆ. ಒಂದು, ರಸ್ತೆ ದುರಂತ. ಎರಡನೆಯದು ಹೃದಯಾಘಾತ. ಈ ಎರಡೂ ದುರಂತಗಳೂ ತುರ್ತು ಚಿಕಿತ್ಸೆಯನ್ನು ಬೇಡುತ್ತವೆ. ಇದರ ಜೊತೆಗೆ ಅಸ್ತಮಾ, ಶ್ವಾಸಕೋಶ ತೊಂದರೆಯಂತಹ ಕಾಯಿಲೆಗಳೂ ಜನರನ್ನು ಸಾವಿನೆಡೆಗೆ ತಳ್ಳುವ ಮಾರಕ ರೋಗಗಳಾಗಿ ಪರಿಣಮಿಸಿವೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ರೋಗಿಗಳ ನಡುವಿನ ಸೇತುವೆಯಾಗಿ ಆ್ಯಂಬುಲೆನ್ಸ್‌ಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಅನೇಕ ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ಗಳ ಕೊರತೆ ಅಥವಾ ಆ್ಯಂಬುಲೆನ್ ್ಸನಲ್ಲಿರುವ ಸೌಕರ್ಯಗಳ ಕೊರತೆಗಳೇ ಸಾವಿಗೆ ಕಾರಣವಾಗುತ್ತವೆ. ಇಂದು ಆ್ಯಂಬುಲೆನ್ಸ್ ಗಳು ಬೇರೆ ಬೇರೆ ಕಾರಣಗಳಿಗೆ ಸುದ್ದಿಯಲ್ಲಿವೆ. ಮೆದುಳು ನಿಷ್ಕ್ರಿಯವಾಗಿರುವ ವ್ಯಕ್ತಿಯ ಹೃದಯವನ್ನು ಇನ್ನೊಬ್ಬ ರೋಗಿಗೆ ಜೋಡಿಸಿ ಆತನನ್ನು ಉಳಿಸುವ ಕಾರ್ಯದಲ್ಲಿ ಆ್ಯಂಬುಲೆನ್ಸ್ ಗಳು ನಿರ್ವಹಿಸಿದ ಸೇವೆಗಳು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟವಾಗಿವೆ.

ಕೇರಳದಲ್ಲಿ ನಡೆದ ಇಂತಹದೊಂದು ಪ್ರಕರಣ ದೇಶಾದ್ಯಂತ ಸುದ್ದಿಯಾಯಿತು. ಇದನ್ನು ಆಧರಿಸಿ ಸಿನಿಮಾಗಳು ಹೊರ ಬಂದವು. ಅನೇಕ ತುರ್ತು ಪ್ರಕರಣಗಳಲ್ಲಿ ಆ್ಯಂಬುಲೆನ್ಸ್ ಚಾಲಕರು ತಮ್ಮ ಜೀವವನ್ನು ಪಣಕ್ಕಿಟ್ಟು ರೋಗಿಗಳನ್ನು ಆಸ್ಪತ್ರೆಗಳಿಗೆ ತಲುಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗಳು ಮಾತ್ರವಲ್ಲ, ವಿವಿಧ ಸಾಮಾಜಿಕ ಸಂಸ್ಥೆಗಳು ತಮ್ಮದೇ ಆದ ಆ್ಯಂಬುಲೆನ್ಸ್‌ಗಳನ್ನಿಟ್ಟು, ಅಸಹಾಯಕ ರೋಗಿಗಳಿಗೆ ನೆರವಾಗುತ್ತಿವೆ. ಎಲ್ಲ ಖಾಸಗಿ ಆಸ್ಪತ್ರೆಗಳೂ ತಮ್ಮದೇ ಆದ ಆ್ಯಂಬುಲೆನ್ಸ್‌ಗಳನ್ನು ಹೊಂದಿವೆಯಾದರೂ, ಗ್ರಾಮೀಣ ಪ್ರದೇಶಗಳಿಗೆ ಇವು ಇನ್ನೂ ತಲುಪಿಲ್ಲ. ಹೆಚ್ಚಿನ ಅ್ಯಂಬುಲೆನ್ ್ಸ ಗಳು ನಗರ ಪ್ರದೇಶಗಳನ್ನೇ ಕೇಂದ್ರವಾಗಿಟ್ಟುಕೊಂಡಿವೆ. ಆರೋಗ್ಯ ಕವಚ-108 ಆ್ಯಂಬುಲೆನ್ಸ್ ಸೇವೆಯಲ್ಲಿ ಭಾರೀ ಪ್ರಮಾಣದ ಅಕ್ರಮಗಳನ್ನು ಇತ್ತೀಚೆಗೆ ಸಿಎಜಿ ವರದಿ ಬಹಿರಂಗಪಡಿಸಿದೆ. ಈ ಆರೋಗ್ಯ ಕವಚ ಆ್ಯಂಬುಲೆನ್ಸ್ ರೋಗಿಗಳ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಭಾಗಶಃ ವಿಫಲವಾಗಿದೆ ಎನ್ನುವ ಅಂಶವನ್ನು ವರದಿ ಬೊಟ್ಟು ಮಾಡಿದೆ. ಆ್ಯಂಬುಲೆನ್ಸ್‌ಗಳಿಗಾಗಿ ಒಟ್ಟು 8.87 ಲಕ್ಷ ಕೋರಿಕೆಗಳು ಬಂದಿವೆಯಾದರೂ, ಸ್ಪಂದಿಸಿರುವುದು 3.74 ಲಕ್ಷ ಕೋರಿಕೆಗಳಿಗೆ ಮಾತ್ರ. ಹಾಗೆಯೇ ಆ್ಯಂಬುಲೆನ್ಸ್‌ಗಳ ಹಂಚಿಕೆ ತುರ್ತು ಅಗತ್ಯವನ್ನು ಆಧರಿಸಿರಲಿಲ್ಲ. ರೋಗಿಗಳ ಸ್ಥಾನಮಾನಗಳಿಗೆ ಅನುಸಾರವಾಗಿ ಆ್ಯಂಬುಲೆನ್ಸ್ ಹಂಚಿಕೆಯಾಗಿವೆ ಎನ್ನುವುದನ್ನು ವರದಿ ತಿಳಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಕೆಲವು ಪ್ರಕರಣಗಳನ್ನು ವರದಿ ಬಹಿರಂಗ ಪಡಿಸಿದೆ.

2018ರ ಮಾರ್ಚ್ ತಿಂಗಳಲ್ಲಿ ರೋಗಿಯೊಬ್ಬ ಪ್ರಜ್ಞಾಹೀನನಾಗಿರುವುದರಿಂದ ಸಂಬಂಧಪಟ್ಟವರು ಆ್ಯಂಬುಲೆನ್ಸ್‌ಗಾಗಿ ಫೋನ್ ಮಾಡಿದ್ದಾರೆ. 78 ನಿಮಿಷಗಳಲ್ಲಿ ಆರು ಬಾರಿ ಕರೆ ಮಾಡಲಾಗಿದ್ದರೂ ಸಂಬಂಧಪಟ್ಟವರು ಸ್ಪಂದಿಸಿರಲಿಲ್ಲ. ಒಂದು ಕರೆಯನ್ನು ಕಿರುಕುಳದ ಕರೆ ಎಂದು ಕರೆಯಲಾಗಿದ್ದರೆ, ಮತ್ತೊಂದು ಕರೆಯ ಸಂಪರ್ಕ ಕಡಿತಗೊಂಡಿತ್ತು. ಆ ಸಂದರ್ಭದಲ್ಲಿ ಮೂರು ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಯಾವ ಆ್ಯಂಬುಲೆನ್ಸ್‌ನ್ನೂ ರೋಗಿಯ ಸಹಾಯಕ್ಕಾಗಿ ಕಳುಹಿಸಲಿಲ್ಲ. ಆ್ಯಂಬುಲೆನ್ಸ್ ವಿಳಂಬದಿಂದಾಗಿ ರೋಗಿ ಮೃತಪಟ್ಟ ಎನ್ನುವುದನ್ನು ತನಿಖೆಯಾಧಾರದಲ್ಲಿ ಸಿಎಜಿ ವರದಿ ಮಾಡಿದೆ. ಸಿಎಜಿ ವರದಿಯ ಪ್ರಕಾರ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ಕಾಯಿಲೆ, ಪಾರ್ಶ್ವವಾಯು ಮೊದಲಾದವುಗಳಿಂದ ಹಲವರು ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ತುರ್ತು ಆ್ಯಂಬುಲೆನ್ಸ್ ಸಿಕ್ಕಿದ್ದರೆ ಬದುಕುತ್ತಿದ್ದರು ಎನ್ನುವುದು ವರದಿಯಿಂದ ಬಹಿರಂಗವಾಗಿದೆ. ಹೆಚ್ಚಿನ ಪ್ರಕರಣದಲ್ಲಿ ಆ್ಯಂಬುಲೆನ್ಸ್ ಇದ್ದರೂ, ಅದರ ವಿಳಂಬ ನೀತಿಯಿಂದಾಗಿ ದುರಂತಗಳು ಸಂಭವಿಸಿವೆ. ತುರ್ತು ಸಂದರ್ಭಗಳಲ್ಲಿ ನಾಲ್ಕೈದು ನಿಮಿಷಗಳ ಸಮಯದ ಒಳಗೆ ಆ್ಯಂಬುಲೆನ್ಸ್ ಸೇವೆ ಒದಗಬೇಕು.

ಶೇ. 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸೇವೆ ದೊರೆತಿಲ್ಲ. ಶೇ. 50ರಷ್ಟು ರೋಗಿಗಳನ್ನು ತುರ್ತು ಸಂದರ್ಭದ ನಿರ್ಣಾಯಕ ಅವಧಿಯಲ್ಲಿ (ಗೋಲ್ಡನ್ ಅವರ್) ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗದೆ ರೋಗಿಗಳು ಮೃತಪಟ್ಟಿದ್ದಾರೆ ಎನ್ನುವ ಅಂಶವನ್ನು ವರದಿ ಉಲ್ಲೇಖಿಸುತ್ತದೆ. ಇದಕ್ಕೂ ಕೆಲವು ಕಾರಣಗಳಿವೆ. ಹೆಚ್ಚಿನ ಆ್ಯಂಬುಲೆನ್ಸ್‌ಗಳನ್ನು ನಿಲ್ಲಿಸಲು ನಿಗಧಿತವಾದ ವ್ಯವಸ್ಥೆಗಳಿಲ್ಲ. ಆದುದರಿಂದ ಹೆಚ್ಚಿನ ಆ್ಯಂಬುಲೆನ್ಸ್‌ಗಳು ಆಸ್ಪತ್ರೆಗಳ ಆವರಣಗಳನ್ನೇ ಅವಲಂಬಿಸಿವೆ. ಆ್ಯಂಬುಲೆನ್ಸ್ ನಿಲ್ಲಿಸುವ ಸ್ಥಳಗಳನ್ನು ಬೇರೆ ಬೇರೆ ಕಡೆಗಳಲ್ಲಿ ನಿಗದಿಪಡಿಸಿದರೆ, ಯಾವ ಆ್ಯಂಬುಲೆನ್ಸ್ ಘಟನೆ ನಡೆದ ಸ್ಥಳಕ್ಕೆ ಹತ್ತಿರವಿದೆಯೋ ಅದನ್ನೇ ಬಳಸಬಹುದು. ಇದರಿಂದ ಸಮಯದ ಅವಧಿ ಉಳಿತಾಯವಾಗುತ್ತದೆ. ಎಲ್ಲ ಆ್ಯಂಬುಲೆನ್ ್ಸಗಳು ಒಂದೇ ಕಡೆ ನೆರೆದರೆ ಅದರಿಂದ ರೋಗಿಗಳಿಗೆ ಪ್ರಯೋಜನ ತೀರಾ ಕಡಿಮೆ. ಇದೇ ಸಂದರ್ಭದಲ್ಲಿ ದುರಸ್ತಿಗೀಡಾಗಿರುವ ಆ್ಯಂಬುಲೆನ್ಸ್‌ಗಳನ್ನು ತಕ್ಷಣ ಸರಿಪಡಿಸದೇ ಇರುವುದು ರೋಗಿಗಳ ಬೇಡಿಕೆಗೆ ತಕ್ಷಣ ಸ್ಪಂದಿಸದೇ ಇರುವುದಕ್ಕೆ ಇನ್ನೊಂದು ಕಾರಣವಾಗಿದೆ. ಅತ್ಯಾಧುನಿಕ ಸಲಕರಣೆಗಳು ಆ್ಯಂಬುಲೆನ್ಸ್‌ನಲ್ಲಿ ಇಲ್ಲದೇ ಇರುವುದೂ ಸಾವಿಗೆ ಕಾರಣವಾಗುತ್ತದೆ. ರಸ್ತೆ ಅಪಘಾತ, ಹೃದಯದ ಕಾಯಿಲೆ, ಉಸಿರಾಟದ ಸಮಸ್ಯೆಗಳ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಗಳಲ್ಲಿ ಜೀವರಕ್ಷಕ ವ್ಯವಸ್ಥೆಗಳಿರಬೇಕು. ಆದರೆ ಶೇ. 75ರಷ್ಟು ಮಾತ್ರ ಸಾಮಾನ್ಯ ಜೀವ ರಕ್ಷಕ ವ್ಯವಸ್ಥೆಯ ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ ಎನ್ನುವುದನ್ನು ಸಿಎಜಿ ಉಲ್ಲೇಖಿಸಿದೆ.

  ಇದು ಸರಕಾರಿ ಆ್ಯಂಬುಲೆನ್ಸ್‌ಗಳ ಸ್ಥಿತಿಗತಿಗಳಾಗಿದ್ದರೆ, ಖಾಸಗಿ ಆಸ್ಪತ್ರೆಗಳು, ಸಂಸ್ಥೆಗಳ ಆ್ಯಂಬುಲೆನ್ಸ್‌ಗಳು ರೋಗಿಗಳ ಮೇಲಿನ ಕಾಳಜಿಗಿಂತ ಆಸ್ಪತ್ರೆಗಳ ಮೇಲಿನ ಕಾಳಜಿಯನ್ನು ವಹಿಸುತ್ತವೆ. ಈ ಖಾಸಗಿ ಆಸ್ಪತ್ರೆಗಳು ಆ್ಯಂಬುಲೆನ್ಸ್‌ಗಳನ್ನು ಹೊಂದಿರುವುದೇ ರೋಗಿಗಳು ಬೇರೆ ಆಸ್ಪತ್ರೆಗಳಿಗೆ ಹೋಗುವುದನ್ನು ತಡೆಯುವುದಕ್ಕೆ. ಕೆಲವು ಖಾಸಗಿ ಸಂಸ್ಥೆಗಳು ಆ್ಯಂಬುಲೆನ್ಸ್ ಗಳನ್ನು ಒಂದು ದಂಧೆಯಾಗಿ ಪರಿವರ್ತಿಸಿಕೊಂಡಿವೆ. ಯಾವುದೇ ಅಪಘಾತಗಳು ನಡೆದಾಗ ಈ ಆ್ಯಂಬುಲೆನ್ಸ್‌ಗಳು ತಕ್ಷಣ ಅಲ್ಲಿಗೆ ಹಾಜರಾಗುತ್ತವೆ. ಆದರೆ ಅವು ಬೃಹತ್ ಆಸ್ಪತ್ರೆಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿರುತ್ತವೆ. ಇಷ್ಟು ರೋಗಿಗಳನ್ನು ಕರೆತಂದರೆ ಇಂತಿಷ್ಟು ಹಣ ಆ ಆ್ಯಂಬುಲೆನ್ಸ್ ಚಾಲಕನಿಗೆ ಸಿಗುತ್ತದೆ. ಈ ನಿಟ್ಟಿನಲ್ಲಿ, ರೋಗಿಗಳನ್ನು ಈ ಆ್ಯಂಬುಲೆನ್ಸ್ ಗಳು ಬೃಹತ್ ಆಸ್ಪತ್ರೆಗಳ ಬಲಿಪಶುವಾಗಿಸುತ್ತವೆ. ಹತ್ತಿರದಲ್ಲೇ ಸರಕಾರಿ ಆಸ್ಪತ್ರೆಗಳು ಅಥವಾ ಅತ್ಯುತ್ತಮ ಖಾಸಗಿ ಆಸ್ಪತ್ರೆಗಳಿದ್ದರೂ ಈ ಆ್ಯಂಬುಲೆನ್ಸ್‌ಮಾಲಕರು ರೋಗಿಗಳನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿರುವ ಆಸ್ಪತ್ರೆಗಳಿಗೇ ಒಯ್ಯುತ್ತಾರೆ. ಕೊರೋನ ಸಂದರ್ಭದಲ್ಲಿ ಹಲವು ಆ್ಯಂಬುಲೆನ್ಸ್‌ಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿವೆೆಯಾದರೂ, ಹೆಚ್ಚಿನ ಆ್ಯಂಬುಲೆನ್ಸ್ ಗಳು ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡಿವೆ.

ಒಟ್ಟಿನಲ್ಲಿ ಸರಕಾರಿ ಆ್ಯಂಬುಲೆನ್ಸ್‌ಗಳು ಸೇರಿದಂತೆ ಎಲ್ಲ ಆ್ಯಂಬುಲೆನ್ಸ್‌ಗಳ ಕಾರ್ಯಕ್ಷಮತೆಯ ಕುರಿತಂತೆ ಸ್ಪಷ್ಟ ನಿಯಮ ಜಾರಿಗೊಳ್ಳಬೇಕಾಗಿದೆ. ಕಾಟಾಚಾರಕ್ಕೆ ಆ್ಯಂಬುಲೆನ್ಸ್‌ಗಳನ್ನು ನೇಮಕಮಾಡಿ ಅವುಗಳಲ್ಲಿ ಆಧುನಿಕ ಜೀವರಕ್ಷಕ ವ್ಯವಸ್ಥೆಯಿಲ್ಲದೆ ಇದ್ದಲ್ಲಿ ಅದರಿಂದ ಏನು ಪ್ರಯೋಜನ? ಸರಕಾರ ಮಠಗಳಿಗೆ, ಗೋಶಾಲೆಗಳಿಗೆ ದುರುಪಯೋಗ ಮಾಡುವ ಹಣವನ್ನು ಆ್ಯಂಬುಲೆನ್ಸ್ ನೊಳಗಿನ ಆಧುನಿಕ ಪರಿಕರಗಳಿಗೆ ಬಳಸಬೇಕಾಗಿದೆ. ಹಾಗೆಯೇ ಜನರ ಬೇಡಿಕೆಗಳಿಗೆ ಪೂರಕವಾಗಿ ಇನ್ನಷ್ಟು ಆ್ಯಂಬುಲೆನ್ಸ್‌ಗಳನ್ನು ಒದಗಿಸಬೇಕು ಮಾತ್ರವಲ್ಲ, ರೋಗಿಗಳ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುವುದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಠಿಣ ಸೂಚನೆಗಳನ್ನು ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News