ಗ್ರಾ.ಪಂ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಸಲ್ಲದು: ಚುನಾವಣಾ ಆಯೋಗ
ಬೆಂಗಳೂರ, ಡಿ. 15: ರಾಜ್ಯ ಚುನಾವಣಾ ಆಯೋಗವು ಕರ್ನಾಟಕದಲ್ಲಿನ ಗ್ರಾ.ಪಂ.ಗಳ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಿದ್ದು, ನ.30ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಎಲ್ಲ ರಾಜಕೀಯ ಪಕ್ಷದ ಮುಖಂಡರುಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ಮಾದರಿ ನೀತಿ ಸಂಹಿತೆಯು ಹಾಗೂ ಕಾನೂನು ಉಲ್ಲಂಘನೆಯಾಗದಂತೆ ಅಗತ್ಯ ಕ್ರಮವಹಿಸಲು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಹೊನ್ನಾಂಬ ಎಚ್ಚರಿಸಿದ್ದಾರೆ.
ಗ್ರಾ.ಪಂ. ಚುನಾವಣೆಗಳು ಪಕ್ಷರಹಿತ ಚುನಾವಣೆಯಾಗಿದ್ದು, ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ, ಸಭೆ-ಸಮಾರಂಭಗಳನ್ನು ನಡೆಸುವ ರಾಜಕೀಯ ಮುಖಂಡರುಗಳ ಭಾವಚಿತ್ರಗಳನ್ನು ಕರಪತ್ರಗಳಲ್ಲಿ ಮುದ್ರಿಸಿ ಪಕ್ಷಗಳ ಬಾವುಟ ಮತ್ತು ಚಿಹ್ನೆಯನ್ನು ಬಳಸಿಕೊಂಡು ಪ್ರಚಾರ ಮಾಡದಿರುವಂತೆ ಎಚ್ಚರಿಕೆ ವಹಿಸಲು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ರಾಜಕೀಯ ಪಕ್ಷಗಳು ಸಭೆ-ಸಮಾರಂಭಗಳನ್ನು ಏರ್ಪಡಿಸಿ ವೇದಿಕೆ ಮೇಲೆ ಪಕ್ಷದ ಬಾವುಟ, ಬ್ಯಾನರ್ ಗಳನ್ನು ಬಳಸಲು ಅನುಮತಿಸಲಾಗಿರುವುದಿಲ್ಲ. ಸ್ಪರ್ಧಾಳುಗಳನ್ನು ತಮ್ಮ ಪಕ್ಷದ ಅಥವಾ ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು ಹಾಗೂ ಅವರ ಪರವಾಗಿ ಮತಯಾಚನೆ ಮಾಡುವುದನ್ನು ಅನುಮತಿಸಿರುವುದಿಲ್ಲ ಎಂದು ನಿರ್ದೇಶಿಸಲಾಗಿದೆ.
ಚುನಾವಣೆಗೆ ಸ್ಪರ್ಧಿಸಿದ ಸ್ಪರ್ಧಾಳುಗಳು ರಾಜಕೀಯ ಮುಖಂಡರ ಭಾವಚಿತ್ರ ಅಥವಾ ಪಕ್ಷದ ಚಿಹ್ನೆಯಿರುವ ಕರಪತ್ರ, ಕಟೌಟ್, ಬ್ಯಾನರ್ ಮತ್ತು ಬಂಟಿಂಗ್‍ಗಳು, ಟಿವಿ ಮಾಧ್ಯಮಗಳು ಹಾಗೂ ಪತ್ರಿಕೆಗಳ ಮೂಲಕ ಪ್ರಚಾರ ಮಾಡುವಂತಿಲ್ಲ. ಇವುಗಳಲ್ಲಿ ಯಾವುದೇ ಪ್ರಕರಣಗಳು ಗ್ರಾ.ಪಂ. ಚುನಾವಣೆಯಲ್ಲಿ ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಅಂತಹ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.