ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಕಚೇರಿ ಸ್ಥಳಾಂತರ ಸಲ್ಲ: ಪ್ರಿಯಾಂಕ್ ಖರ್ಗೆ

Update: 2020-12-15 12:50 GMT

ಕಲಬುರಗಿ, ಡಿ.15: ಕಲಬುರಗಿಯಲ್ಲಿರುವ ನವೀಕರಿಸಬಹುದಾದ ಇಂಧನ ಅಭಿವೃದ್ದಿ ಪ್ರಾದೇಶಿಕ ಕಚೇರಿಯನ್ನು ಇಲ್ಲಿಯೇ ಉಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಪ್ರಮುಖ ಕೇಂದ್ರವಾದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಪ್ರಾದೇಶಿಕ ಕಚೇರಿ ಕಲಬುರಗಿಯಲ್ಲಿ ಮಂಜೂರಾಗಿ, ಉದ್ಘಾಟನೆಗೊಂಡಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಇದನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ಮಾಹಿತಿಯಿದೆ. ಇದು ಸರಿಯಾದ ಕ್ರಮವಲ್ಲ, ಮುಖ್ಯಮಂತ್ರಿಯು ಮಧ್ಯಪ್ರವೇಶಿಸಿ ಪ್ರಾದೇಶಿಕ ಕಚೇರಿಯಲ್ಲಿ ಕಲಬುರಗಿಯಲ್ಲಿಯೇ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕಚೇರಿಯಿಂದಾಗಿ ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲಿ ಆಗಬಹುದಾದ ಪ್ರಮುಖ ಅನುಕೂಲಗಳನ್ನು ಹೆಸರಿಸಿರುವ ಶಾಸಕರು, ಈ ಭಾಗದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸೋಲಾರ್ ಪ್ಯಾನಲ್ ದೊರಕಿಸಿಕೊಡಬಹುದು. ಜೊತೆಗೆ ಸೋಲಾರ್ ಪಾರ್ಕ್ ನಿರ್ಮಾಣ ಮತ್ತು ವಿಂಡ್ ಮಿಲ್ ಸ್ಥಾಪನೆ ಮಾಡಬಹುದು. ಅಲ್ಲದೆ, ಈ ಭಾಗದಲ್ಲಿ ನೀರಾವರಿ ಕೊರತೆ ಬಹಳಷ್ಟಿದ್ದು, ನೀರಿನ ಸಮಸ್ಯೆ ನೀಗಿಸಲು ನೀರಿನ ಕಾಲುವೆಯುದ್ದಕ್ಕೂ ಅಥವಾ ನದಿಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸಿ ಜಮೀನುಗಳಿಗೆ ನೀರು ಹರಿಸಬಹುದಾಗಿದೆ.

ಇದರಿಂದ ರೈತರ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಇದರ ಜೊತೆಗೆ ಇನ್ನಿತರ ಪ್ರಮಖ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಈ ಭಾಗದ ಸಮಗ್ರ ಅಭಿವೃದ್ದಿಗೆ ನಿಗಮದ ಪ್ರಾದೇಶಿಕ ಕಚೇರಿ ಪ್ರಮಖ ಪಾತ್ರ ವಹಿಸಲಿದೆ ಎಂದು ಹೇಳಿದ್ದು, ಸರಕಾರ ಈ ಭಾಗದ ಅಭಿವೃದ್ಧಿಗೆ ಮನಸ್ಸಿಲ್ಲ. ಇಲ್ಲಿನ ಕಚೇರಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುತ್ತಾ, ನಮ್ಮ ಭಾಗಕ್ಕೆ ಅನ್ಯಾಯ ಮಾಡಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News