ಬಿಜೆಪಿಯ ಗೂಂಡಾಗಿರಿ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ: ಸಿದ್ದರಾಮಯ್ಯ
ಬೆಂಗಳೂರು, ಡಿ. 15: ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮೇಲ್ಮನೆಯಲ್ಲಿ ನಡೆದ ಗೊಂದಲ-ಗದ್ದಲಕ್ಕೆ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್ ನೇರ ಹೊಣೆ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಇಂತಹ ಸ್ಥಿತಿ ಎಂದೂ ಬಂದಿರಲಿಲ್ಲ. ಈ ರೀತಿಯ ಗೂಂಡಾಗಿರಿ ಪ್ರಜಾಪ್ರಭುತ್ವಕ್ಕೆ ಮಾರಕ. ಸದನಕ್ಕೆ ಸಭಾಪತಿ ಆಗಮಿಸದಂತೆ ತಡೆಯೊಡ್ಡಿದ್ದು ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಎಂದು ಆಕ್ರೋಶ ಹೊರಹಾಕಿದರು.
ಪರಿಷತ್ ಸಭಾಪತಿ ಇರುವಾಗ ಆ ಪೀಠದಲ್ಲಿ ಉಪಸಭಾಪತಿ ಆಸೀನರಾಗುವಂತಿಲ್ಲ. ಅವರಿಗೆ ಸಮಸ್ಯೆ ಇದ್ದಾಗ ಅಥವಾ ಸಭಾಪತಿ ಸೂಚನೆ ಮೇರೆಗೆ ಉಪಸಭಾಪತಿ ಪೀಠದಲ್ಲಿ ಆಸೀನರಾಗಿ ಕಲಾಪ ನಡೆಸಬೇಕು. ಆದರೆ, ಮಂಗಳವಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ನಡೆದಿದ್ದು ಕಲಾಪ ನಿಯಮಾವಳಿಗೆ ವಿರುದ್ಧ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಗೂಂಡಾಗಿರಿ: ಬಿಜೆಪಿ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಕಲಾಪದ ನಿಯಮಾಳಿಗಳನ್ನು ಗಾಳಿಗೆ ತೂರಿದೆ. ಪರಿಷತ್ತಿನಲ್ಲಿ ಬಹುಮತವಿಲ್ಲದ ಕಾರಣ ಜೆಡಿಎಸ್ ಬೆಂಬಲ ಪಡೆದು ಸಭಾಪತಿಯವರ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಅಲ್ಲದೆ, ಸದನದ ಕಲಾಪ ಆರಂಭದ 'ಬೆಲ್' ನಿಲ್ಲುವ ಮೊದಲೆ ಉಪಸಭಾಪತಿ ಧರ್ಮೆಗೌಡ ಸಭಾಪತಿ ಪೀಠದಲ್ಲಿ ಕೂರಿಸಿದ್ದೇ ಗದ್ದಲ-ಗೊಂದಲಕ್ಕೆ ಕಾರಣವಾಗಿದೆ.
ಸಭಾಪತಿ ಇರುವ ವೇಳೆ ಉಪಸಭಾಪತಿ ಸಭಾಪತಿ ಪೀಠದಲ್ಲಿ ಕೂರಲು ಅವಕಾಶವಿಲ್ಲ. ಕಾನೂನು ಮತ್ತು ನಿಯಮಾವಳಿಗಳಲ್ಲಿಯೂ ಇದಕ್ಕೆ ಅವಕಾಶವೇ ಇಲ್ಲ. ಆದರೆ, ಬಿಜೆಪಿ ಉಪಸಭಾಪತಿ ಅವರನ್ನು ಪೀಠದಲ್ಲಿ ಕೂರಿಸುವ ಮೂಲಕ ಗೂಂಡಾಗಿರಿ ನಡೆಸಿದೆ. ಅದಕ್ಕೆ ಜೆಡಿಎಸ್ ಬೆಂಬಲ ನೀಡಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸಭಾಪತಿ ವಿರುದ್ಧ ಬಿಜೆಪಿ ಮಂಡಿಸಿದ ಅವಿಶ್ವಾಸ ನಿರ್ಣಯಕ್ರಮಬದ್ಧವಾಗಿಲ್ಲ ಎಂದು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಚರ್ಚೆಗೆ ನಿರಾಕರಿಸಿದ್ದಾರೆ. ಸಭಾಪತಿಯವರು ನಿಯಮಾವಳಿಗಳ ಅನ್ವಯ ನಡೆದುಕೊಂಡಿದ್ದಾರೆ. ಅವರಿಗೆ ಸಭಾಪತಿಯಾಗಿ ಕಾರ್ಯಕಲಾಪ ನಡೆಸುವ ಎಲ್ಲ ಅರ್ಹತೆ ಮತ್ತು ಅಧಿಕಾರವಿದೆ ಎಂದು ಸಿದ್ದರಾಮಯ್ಯ ಸಮರ್ಥಿಸಿದರು.
ಮುಂದಿನ ತೀರ್ಮಾನ: ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಮತ್ತು ಪರಿಷತ್ ಗೊಂದಲ-ಗದ್ದಲಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೈಗೊಳ್ಳುವ ತೀರ್ಮಾನವನ್ನು ನೋಡಿಕೊಂಡು ಕಾಂಗ್ರೆಸ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಏನೇ ಆದರೂ ಪರಿಷತ್‍ನಲ್ಲಿಂದು ನಡೆದ ಘಟನೆಗಳಿಗೆ ಆಡಳಿತಾರೂಢ ಬಿಜೆಪಿ ಸರಕಾರವೇ ನೇರ ಹೊಣೆ ಎಂದು ಸಿದ್ದರಾಮಯ್ಯ ದೂರಿದರು.
ಬೆದರಿಕೆ ಸಲ್ಲ: ಪರಿಷತ್ ಸುಗಮ ಕಲಾಪಕ್ಕೆ ಸಲಹೆ-ಸೂಚನೆ ನೀಡಬೇಕಾದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಮಾರ್ಷಲ್‍ಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ. ಅಲ್ಲದೆ, ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಸೇರಿದಂತೆ ಸಂಪುಟ ಸಚಿವರು ಖುದ್ದು ನಿಂತು ಪರಿಷತ್ತಿನಲ್ಲಿ ಗದ್ದಲ-ಗೊಂದಲ ಸೃಷ್ಟಿಸಿದ್ದು ಅಕ್ಷಮ್ಯ ಎಂದು ಸಿದ್ದರಾಮಯ್ಯ ಟೀಕಿಸಿದರು.
'ಪರಿಷತ್ ಕಲಾಪದ ಅಜೆಂಡಾದಲ್ಲಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯವೇ ಇರಲಿಲ್ಲ. ಹೀಗಿದ್ದರೂ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದು ಬಿಜೆಪಿ ಗೂಂಡಾಗಿರಿಗೆ ಸಾಕ್ಷಿಯಾಗಿದೆ. ಅಲ್ಲದೆ, ಸಭಾಪತಿಯವರು ಕಲಾಪಕ್ಕೆ ಬರದಂತೆ ತಡೆಯೊಡ್ಡಿದ್ದು ನರೇಂದ್ರ ಮೋದಿಯವರು ರೂಪಿಸಿದ ಸಂವಿಧಾನವೇ ? ಬಿಜೆಪಿ ಗೂಂಡಾಗಿರಿಗೆ ಇದಕ್ಕೆ ಇನ್ನೇನು ಉದಾಹರಣೆ ಬೇಕು'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ
ವಿಧಾನಪರಿಷತ್ ನಲ್ಲಿ ಬಿಜೆಪಿ ಸಚಿವರು ಮತ್ತು ಸದಸ್ಯರಿಂದ ನಡೆದಿರುವ ಗೂಂಡಾಗಿರಿ ರಾಜ್ಯದ ಮಾತ್ರವಲ್ಲ, ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ. ಇದು ಖಂಡಿತ ಸಾಂವಿಧಾನಿಕ ಪ್ರಜಾಪ್ರಭುತ್ವ ಅಲ್ಲ, ಇದು ನರೇಂದ್ರ ಮೋದಿ ಪ್ರಜಾಪ್ರಭುತ್ವ. This is Criminal act. #BJPGoondaRaj
-ಸಿದ್ದರಾಮಯ್ಯ( ಟ್ವೀಟ್)
'ಬಿಜೆಪಿ ಅಧಿಕಾರಕ್ಕೇರಿದಾಗೆಲ್ಲ ಸದನದ ಗೌರವ ಮಣ್ಣುಪಾಲು ಮಾಡುತ್ತಿದೆ. ಹಿಂದೆ ನಿಯಮದ ವಿರುದ್ಧ ಪೊಲೀಸರನ್ನು ಸದನದೊಳಗೆ ಕರೆತಂದಿದ್ದರು. ಬಿಜೆಪಿ ಸದಸ್ಯರು ಸದನದ ಘನತೆ ಮರೆತು ಬಟ್ಟೆ ಹರಿದು ವಿಕೃತಿ ಮೆರೆದಿದ್ದರು. ಈಗ ಸಭಾಪತಿಗಳನ್ನೇ ಸದನಕ್ಕೆ ಬರದಂತೆ ನಿರ್ಬಂಧಿಸಿ, ನಿಯಮಗಳಿಗೆ ಚ್ಯುತಿ ತಂದಿದೆ'
-ಕಾಂಗ್ರೆಸ್, ಟ್ವೀಟ್
'ಸಂವಿಧಾನದ ಆಶಯಗಳಿಗೆ ಧಕ್ಕೆ ತಂದು, ಕಾನೂನನ್ನು ಗಾಳಿಗೆ ತೂರಿ, ವಿಧಾನ ಪರಿಷತ್ ನಡಾವಳಿ ಧಿಕ್ಕರಿಸಿ ಸಭಾಪತಿಗಳ ಕುರ್ಚಿಯ ಮೇಲೆ ಕುಳಿತಿದ್ದಾರೆ. ನನ್ನ 23 ವರ್ಷಗಳ ರಾಜಕೀಯದಲ್ಲಿ ಮೇಲ್ಮನೆ ಶಾಸಕ, ಸಭಾನಾಯಕ, 2 ಬಾರಿ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿರುವೆ. ಎಂದೂ ಇಂತಹ ಅಸಾಂವಿಧಾನಿಕ ಘಟನೆ ನೋಡಿಲ್ಲ. ಚಿಂತಕರ ಚಾವಡಿ ಎಂದೇ ಕರೆಯಲಾಗುವ ಪರಿಷತ್ ಇತಿಹಾಸದಲ್ಲೇ ಇದು ಕರಾಳ ದಿನ. ಬಿಜೆಪಿಯ ಈ ನಡೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಉಪ ಸಭಾಪತಿ ಧರ್ಮೇಗೌಡರಿಗೆ ಕಾಂಗ್ರೆಸ್ ಸದಸ್ಯರು ಮುತ್ತಿಗೆ ಹಾಕಲು ಹೋಗುತ್ತಿದ್ದಂತೆ ಅವರ ಸುತ್ತ ಆವರಿಸಿದ ಬಿಜೆಪಿ ಸದಸ್ಯರು ಗಲಾಟೆ ಮಾಡಿದರು. ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಸದಸ್ಯರು ಗಲಾಟೆ ನಡೆಸಿದ್ದಾರೆ'
-ಎಸ್.ಆರ್.ಪಾಟೀಲ್, ಮೇಲ್ಮನೆ ವಿಪಕ್ಷ ನಾಯಕ